ನನ್ನ ಮಗನ ಮೇಲೆ ಅವರಿಗೆಲ್ಲ ದ್ವೇಷವಿದೆ: ಶಾಕಿಂಗ್​ ಹೇಳಿಕೆ ನೀಡಿದ ಸಂಜು ಸ್ಯಾಮ್ಸನ್​ ತಂದೆ! Sanju Samson

Sanju Samson
Published on

Sanju Samson : ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಅವರ ತಂದೆ ಸ್ಯಾಮ್ಸನ್ ವಿಶ್ವನಾಥ್ ಅವರು ಮತ್ತೊಮ್ಮೆ ಗಂಭೀರ ಆರೋಪಗಳೊಂದಿಗೆ ಮುನ್ನೆಲೆಗೆ ಬಂದಿದ್ದಾರೆ. ತಮ್ಮ ಮಗನ ಬೆಳವಣಿಗೆಯನ್ನು ಸಹಿಸಲಾಗದೆ, ಉದ್ದೇಶಪೂರ್ವಕವಾಗಿ ಆತನನ್ನು ತುಳಿಯಲಾಗುತ್ತಿದೆ ಎಂದು ಕೇರಳ ಕ್ರಿಕೆಟ್ ಅಸೋಸಿಯೇಷನ್ ​​(ಕೆಸಿಎ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೇರಳ ಮೂಲದ ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್ ಇತ್ತೀಚೆಗೆ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಮೂರು ಶತಕಗಳನ್ನು ಗಳಿಸಿದ್ದಾರೆ. ಹೀಗಾಗಿ ಸುನಿಲ್ ಗವಾಸ್ಕರ್ ಅವರಂತಹ ದಿಗ್ಗಜ ಆಟಗಾರರು ಕೂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ-2025 ತಂಡದಲ್ಲಿ ಸಂಜು ಸ್ಥಾನ ಪಡೆಯುವುದು ಖಚಿತ ಎಂದು ನಂಬಿದ್ದರು. ಆದರೆ, ಎಲ್ಲರ ನಂಬಿಕೆ ಹುಸಿಯಾಗಿದೆ. ಸಂಜುಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.

ಅಂದಹಾಗೆ ಚಾಂಪಿಯನ್ಸ್​ ಟ್ರೋಫಿಗಾಗಿ ಭಾರತೀಯ ಆಯ್ಕೆದಾರರು ಸಂಜು ಸ್ಯಾಮ್ಸನ್ ಮೇಲೆ ಕಠಿಣ ನಿಲುವು ತಳೆದಿದ್ದಾರೆ. ಕೆಎಲ್ ರಾಹುಲ್ ಜೊತೆಗೆ, ರಿಷಭ್ ಪಂತ್ ಅವರನ್ನು ವಿಕೆಟ್ ಕೀಪರ್ ಕೋಟಾದಲ್ಲಿ ಆಯ್ಕೆ ಮಾಡಲಾಗಿದೆ. ಅಲ್ಲದೆ, ದೇಶೀಯ ಏಕದಿನ ಪಂದ್ಯಾವಳಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಸಂಜು ಆಡದಿರುವುದು ಕೂಡ ಅವರನ್ನು ಆಯ್ಕೆ ಮಾಡಡಿರಲು ಕಾರಣ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಸಂಜು ಕೇರಳ ತಂಡದ ನಾಯಕನಾಗಿ ಸೇವೆ ಸಲ್ಲಿಸಿದ ಸಂದರ್ಭಗಳಿವೆ. ಆದರೆ, ಈ ಬಾರಿ ಕೆಸಿಎ ಅವರ ಮೇಲೆ ಸ್ವಲ್ಪ ಕಠಿಣವಾಗಿ ವರ್ತಿಸಿದೆ. ವಿಜಯ್ ಹಜಾರೆ ಟ್ರೋಫಿ ತಂಡ ಆಯೋಜಿಸಿದ್ದ ಮೂರು ದಿನಗಳ ತರಬೇತಿ ಶಿಬಿರಕ್ಕೆ ಸಂಜು ಹಾಜರಾಗದ ಕಾರಣ ಅವರಿಗೆ ತಂಡದಲ್ಲಿ ಸ್ಥಾನ ನೀಡಲಿಲ್ಲ. ಅನಿವಾರ್ಯ ಕಾರಣಗಳಿಂದ ತರಬೇತಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ಸಂಜು ಪತ್ರ ಬರೆದಿದ್ದರು. ಆದರೂ, ತಂಡದಿಂದ ಅವರನ್ನು ಕೈಬಿಡಲಾಯಿತು. ಸಂಜು ಕೂಡ ಇತರ ಎಲ್ಲ ಆಟಗಾರರಂತೆಯೇ ಮತ್ತು ಅವರು ಬಯಸಿದಾಗಲೆಲ್ಲ ಬಂದು ಆಡಲು ಸಾಧ್ಯವಿಲ್ಲ ಎಂದು ಕೆಸಿಎ ಖಾರವಾಗಿ ಹೇಳಿತ್ತು.

ಸಂಜು ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ತನ್ನನ್ನು ತಾನು ಸಾಬೀತುಪಡಿಸಿದ್ದರೆ, ಅವರು ಖಂಡಿತವಾಗಿಯೂ ಚಾಂಪಿಯನ್ಸ್ ಟ್ರೋಫಿಯ ರೇಸ್‌ನಲ್ಲಿ ಇರುತ್ತಿದ್ದರು. ಈ ಬೆಳವಣಿಗೆಗಳ ನಂತರ, ಸಂಜು ಸ್ಯಾಮ್ಸನ್ ಅವರ ತಂದೆ ವಿಶ್ವನಾಥ್ ಪ್ರತಿಕ್ರಿಯಿಸಿದ್ದು, ಕೆಸಿಎಯಲ್ಲಿ ಕೆಲವು ಜನರು ನನ್ನ ಮಗನ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಮತ್ತು ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಇಲ್ಲಿಯವರೆಗೆ ನಾವು ಕೆಸಿಎ ವಿರುದ್ಧ ಒಂದೇ ಒಂದು ಮಾತನ್ನೂ ಆಡಿಲ್ಲ. ಆದರೆ ಈ ಬಾರಿ ಅವರ ಕ್ರಮಗಳು ತುಂಬಾ ಗಂಭೀರವಾಗಿವೆ. ಸಂಜು ಮಾತ್ರ ಶಿಬಿರಕ್ಕೆ ಹಾಜರಾಗಲಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಆದರೆ, ತರಬೇತಿ ಶಿಬಿರದಲ್ಲಿ ಭಾಗವಹಿಸದಿದ್ದರೂ ಅನೇಕ ಜನರನ್ನು ಆಯ್ಕೆ ಮಾಡಲಾಯಿತು. ಕೆಸಿಎ ಅಧ್ಯಕ್ಷ ಜಯೇಶ್ ಜಾರ್ಜ್ ಮತ್ತು ಕಾರ್ಯದರ್ಶಿ ವಿನೋದ್ ಈ ವಿಷಯದಲ್ಲಿ ಭಾಗಿಯಾಗಿದ್ದಾರೆಂದು ನಾನು ಭಾವಿಸುವುದಿಲ್ಲ. ಆದರೆ, ಕೆಲವು ಕೆಳಮಟ್ಟದ ಜನರು ಸಂಜು ಬಗ್ಗೆ ಸುಳ್ಳು ಪ್ರಚಾರವನ್ನು ಹರಡುತ್ತಿದ್ದಾರೆ ಮತ್ತು ಅವರ ಮನಸ್ಸಿನಲ್ಲಿ ವಿಷ ತುಂಬುತ್ತಿದ್ದಾರೆ ಎಂದು ವಿಶ್ವನಾಥ್ ಮಾತೃಭೂಮಿಗೆ ನೀಡಿದ ಸಂದರ್ಶನದಲ್ಲಿ ಆರೋಪಿಸಿದ್ದಾರೆ.

ಅಂದಹಾಗೆ ವಿಶ್ವನಾಥ್ ಅವರು ಈ ಹಿಂದೆಯೂ ಗಂಭೀರ ಹೇಳಿಕೆಗಳನ್ನು ನೀಡಿದ್ದರು. ನಾಯಕರಾದ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ತಮ್ಮ ಮಗನ ವೃತ್ತಿಜೀವನವನ್ನು ಹಾಳುಮಾಡಿದರು ಮತ್ತು ಹತ್ತು ವರ್ಷಗಳ ಸಮಯವನ್ನು ವ್ಯರ್ಥ ಮಾಡಿದರು ಎಂದು ಆರೋಪಿಸಿದ್ದರು. ಪ್ರಸ್ತುತ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಮಗನಿಗೆ ಬೆಂಬಲ ನೀಡುತ್ತಿರುವುದಾಗಿ ಹೇಳಿದ್ದಾರೆ. ಸಂಜು ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ತಯಾರಿಯಲ್ಲಿ ನಿರತರಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net