

Virat & Rohit : ಇಂದು ಮೆಲ್ಬೋರ್ನ್ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಪಂದ್ಯದ ಐದನೇ ದಿನದಂದು ಆಸೀಸ್ ಪಡೆ ಮುಂದೆ ಸೋಲಿಗೆ ಶರಣಾದ ಟೀಮ್ ಇಂಡಿಯಾ ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪುವ ಹಂತದಿಂದ ಬಹಳ ದೂರ ಸರಿದಿದೆ. ಮುಂದಿನ ಹಾದಿ ಈಗ ಮತ್ತಷ್ಟು ಜಟಿಲವಾಗಿದ್ದು, ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತ ಸೋತಿರುವುದು ಕ್ರಿಕೆಟ್ ಅಭಿಮಾನಿಗಳನ್ನು ಭಾರೀ ಅಚ್ಚರಿಗೆ ದೂಡಿದೆ.
ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ 184 ರನ್ಗಳ ಹೀನಾಯ ಸೋಲು ಅನುಭವಿಸಿತು. 340 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಭಾರತ 79.1 ಓವರ್ಗಳಲ್ಲಿ 155 ರನ್ ಗಳಿಸಲಷ್ಟೇ ಶಕ್ತವಾಯಿತು. ಯಶಸ್ವಿ ಜೈಸ್ವಾಲ್ (84 ರನ್ 208 ಎಸೆತ, 8 ಬೌಂಡರಿ) ಹೆಚ್ಚು ರನ್ ಗಳಿಸಿದ ಟೀಮ್ ಇಂಡಿಯಾದ ಏಕೈಕ ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದರು. ಭಾರತ ಪಂದ್ಯ ಸೋತ ವಿಷಯ ಒಂದೆಡೆಯಾದರೆ, ಕ್ಯಾಪ್ಟನ್ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ನೀಡಿದ ಕಳಪೆ ಪ್ರದರ್ಶನ ಹಾಗೂ ನಿವೃತ್ತಿ ಬಗ್ಗೆ ಮತ್ತೊಂದೆಡೆ ಬಿಸಿ ಬಿಸಿ ಚರ್ಚೆಗಳು ಭುಗಿಲೆದ್ದಿವೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇಬ್ಬರು ದಿಗ್ಗಜ ಕ್ರಿಕೆಟಿಗರು ಅತ್ಯಂತ ಕಳಪೆ ಪ್ರದರ್ಶನ ತೋರಿರುವುದು ಹಲವರ ಟೀಕೆ, ಚರ್ಚೆಗೆ ಗ್ರಾಸವಾಗಿದೆ. ಮೊದಲ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದು ಬಿಟ್ಟರೆ, ಉಳಿದ್ಯಾವ ಮ್ಯಾಚ್ಗಳಲ್ಲಿ ಪವರ್ ಹಿಟ್ಟಿಂಗ್ ಕಾಣಿಸಲಿಲ್ಲ. ಅತ್ತ ರೋಹಿತ್ ಶರ್ಮ ತಮ್ಮ ಕ್ಯಾಪ್ಟನ್ ಆಟ ಆಡದಿರುವುದು ಅನೇಕರಲ್ಲಿ ಗೊಂದಲ ಮೂಡಿಸಿತು. ಈ ಇಬ್ಬರ ಮ್ಯಾಚ್ ವಿನ್ನಿಂಗ್ ಪ್ರದರ್ಶನಗಳು ಪಂದ್ಯ ಪೂರ ಎಲ್ಲಿಯೂ ಕಾಣದಿರುವುದು ಅವರ ಕ್ರಿಕೆಟ್ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಟೀಮ್ ಇಂಡಿಯಾದ ಮಾಜಿ ಹಿರಿಯ ಆಟಗಾರ ಸಂಜಯ್ ಮಂಜ್ರೇಕರ್, "ಟೆಸ್ಟ್ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ನಡುವೆ ಯಾವುದೇ ಹೋಲಿಕೆ ಇಲ್ಲ. ಇಬ್ಬರಿಗೂ ಅವರದ್ದೇ ಆದ ಕ್ರಿಕೆಟಿಂಗ್ ಕೌಶಲ್ಯಗಳಿವೆ. ಕೊಹ್ಲಿ ಒಬ್ಬ ಗ್ರೇಟ್ ಟೆಸ್ಟ್ ಬ್ಯಾಟರ್ ಆದರೆ, ರೋಹಿತ್ ರೆಡ್ ಬಾಲ್ ಫಾರ್ಮೆಟ್ನ ಉತ್ತಮ ಬ್ಯಾಟರ್. ವೈಟ್ ಬಾಲ್ನಲ್ಲಿಯೂ ಅವರು ಅತ್ಯುತ್ತಮ. ಟೆಸ್ಟ್ ಕ್ರಿಕೆಟ್ನ ಟಾಪ್ ಆಟಗಾರರ ಪೈಕಿ ಕೊಹ್ಲಿ ಕೂಡ ಒಬ್ಬರು. ಬ್ಯಾಟಿಂಗ್ನಲ್ಲಿ ಪ್ರಬಲವಾಗಿರುವ ಕೊಹ್ಲಿ ಇನ್ನೂ ಕೆಲವು ವರ್ಷಗಳು ಕ್ರಿಕೆಟ್ ಆಡಬಹುದು" ಎಂದರು.
“ಕಳೆದ ಪಂದ್ಯಗಳಲ್ಲಿ ರೋಹಿತ್ ಏರಿಳಿತ ನೋಡಿದ್ದಾರೆ. ಅವರ ವೃತ್ತಿಜೀವನದ ಬಗ್ಗೆ ನಿರ್ಧರಿಸುವುದು ಅವರಿಗೆ ಬಿಟ್ಟದ್ದು. ಆಯ್ಕೆ ಸಮಿತಿಯ ಅಧ್ಯಕ್ಷರು ಯಾರು ತಂಡದ ಭಾಗವಾಗಬಹುದೆಂದು ನಿರ್ಧರಿಸುವ ಹಕ್ಕು ಮತ್ತು ಅಧಿಕಾರವನ್ನು ಮಾತ್ರ ಹೊಂದಿರುತ್ತಾರೆ. ನನ್ನ ಪ್ರಕಾರ, ರೋಹಿತ್ ಶರ್ಮ ತಮ್ಮ ಆಟವನ್ನು ಆನಂದಿಸುತ್ತಿರುವಂತೆ ತೋರುತ್ತಿಲ್ಲ" ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).