

ಬೆಂಗಳೂರು: ಮಿನಿ ವಿಶ್ವಕಪ್ ಖ್ಯಾತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಮತ್ತು ದುಬೈನಲ್ಲಿ ವೇದಿಕೆ ಸಜ್ಜಾಗಿದೆ. ಏಕದಿನ ಕ್ರಿಕೆಟ್ ಪ್ರಕಾರದ ಈ ಟೂರ್ನಿಗೆ ಎಲ್ಲ ತಂಡಗಳು ಪೂರ್ವಸಿದ್ಧತೆಯಲ್ಲಿ ತೊಡಗಿಕೊಂಡಿರುವ ನಡುವೆ ಗಾಯ ಮತ್ತು ಇತರ ಕಾರಣಗಳಿಂದಾಗಿ ಕೆಲ ಪ್ರಮುಖ ಆಟಗಾರರು ಅಲಭ್ಯರಾಗಿದ್ದಾರೆ. ಇದರಲ್ಲಿ ಸ್ಟಾರ್ ಬೌಲರ್ಗಳೇ ಹೆಚ್ಚಿರುವುದು ಕಳವಳಕಾರಿ ಎನಿಸಿದೆ. ಇದರಿಂದಾಗಿ ಚಾಂಪಿಯನ್ಸ್ ಟ್ರೋಫಿ ಚಾಂಪಿಯನ್ ಬೌಲರ್ಗಳಿಲ್ಲದ ಟೂರ್ನಿಯಂತಾಗುವ ಭೀತಿ ಎದುರಾಗಿದೆ. ಅಲ್ಲದೆ ಏಕದಿನ ಕ್ರಿಕೆಟ್ನಲ್ಲಿ ಸದ್ಯ ಬ್ಯಾಟರ್ಗಳ ಆರ್ಭಟ ಹೆಚ್ಚಾಗಿರುವ ನಡುವೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ಇನ್ನಷ್ಟು ಹೆಚ್ಚಿನ ರನ್ಮಳೆ ಹರಿಯುವ ನಿರೀಕ್ಷೆಯೂ ಮೂಡಿದೆ. ಫಾರ್ಮ್ನಲ್ಲಿಲ್ಲದ ವಿಶ್ವದ ಕೆಲ ಪ್ರಮುಖ ಬ್ಯಾಟರ್ಗಳಿಗೆ ಲಯ ಕಂಡುಕೊಳ್ಳಲು ಕೂಡ ಇದೊಂದು ಉತ್ತಮ ಅವಕಾಶವೆನಿಸಿದೆ.
*ಜಸ್ಪ್ರೀತ್ ಬುಮ್ರಾ
ಭಾರತ ಮತ್ತು ವಿಶ್ವದ ಅಗ್ರ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾ ಬೆನ್ನುನೋವಿನ ಸಮಸ್ಯೆಯಿಂದಾಗಿ ಟೂರ್ನಿ ತಪ್ಪಿಸಿಕೊಂಡಿದ್ದಾರೆ. ಕಳೆದ ಆಸೀಸ್ ಪ್ರವಾಸದ ಬಾರ್ಡರ್&ಗಾವಸ್ಕರ್ ಟ್ರೋಫಿಯಲ್ಲಿ ಅದ್ಭುತ ನಿರ್ವಹಣೆ ತೋರುವ ಮೂಲಕ ಭಾರತ ಏಕಪಯವಾಗಿ ಸೋಲುವುದನ್ನು ತಪ್ಪಿಸಿದ್ದ ಬುಮ್ರಾ, ಇದ್ದರೆ ಭಾರತೀಯ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಶಕ್ತಿ ಸಿಗುತಿತ್ತು. ಬುಮ್ರಾ ಇಲ್ಲದಿದ್ದರೆ ಭಾರತ ಪ್ರಶಸ್ತಿ ಗೆಲ್ಲುವ ಸಾಧ್ಯತೆ ಶೇ. 30&35ರಷ್ಟು ಕುಸಿಯುತ್ತದೆ ಎಂದು ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದರು.
*ಆಸೀಸ್ ತ್ರಿವಳಿಗಳು ಗೈರು
ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಅತ್ಯಂತ ಹೆಚ್ಚಿನ ಹೊಡೆತ ಎದುರಿಸಿರುವ ಬೌಲಿಂಗ್ ವಿಭಾಗ ಆಸ್ಟ್ರೆಲಿಯಾದ್ದಾಗಿದೆ. 2023ರ ವಿಶ್ವಕಪ್ ಗೆಲುವಿನಲ್ಲಿ ಆಸೀಸ್ಗೆ ನೆರವಾಗಿದ್ದ ವೇಗಿಗಳಾದ ನಾಯಕ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಸಲ್ವುಡ್ ಈ ಬಾರಿ ಗೈರಾಗಲಿದ್ದಾರೆ. ಕಮ್ಮಿನ್ಸ್, ಹ್ಯಾಸಲ್ವುಡ್ ಗಾಯದಿಂದ ಬಳಲುತ್ತಿದ್ದರೆ, ಸ್ಟಾರ್ಕ್ ವೈಯಕ್ತಿಕ ಕಾರಣದಿಂದ ಹಿಂದೆ ಸರಿದಿದ್ದಾರೆ. ಇದರೊಂದಿಗೆ ವೇಗದ ಬೌಲಿಂಗ್ ಆಲ್ರೌಂಡರ್ಗಳಾದ ಮಿಚೆಲ್ ಮಾರ್ಷ್, ಮಾರ್ಕಸ್ ಸ್ಟೋಯಿನಿಸ್ ಕೂಡ ಅಲಭ್ಯರಾಗಿರುವುದರಿಂದ ಆಸೀಸ್ ವೇಗದ ಬೌಲಿಂಗ್ ವಿಭಾಗ ಸಂಪೂರ್ಣವಾಗಿ ಬಲ ಕಳೆದುಕೊಂಡಿದೆ.
*ಕೋಟ್ಜೀ, ನೋಕಿಯಾ
ದಣ ಆಫ್ರಿಕಾ ತಂಡ ಪ್ರಮುಖ ವೇಗಿಗಳಾದ ಗೆರಾಲ್ಡ್ ಕೋಟ್ಜೀ ಮತ್ತು ಅನುಭವಿ ಅನ್ರಿಚ್ ನೋಕಿಯಾರನ್ನು ಗಾಯದಿಂದಾಗಿ ಮಿಸ್ ಮಾಡಿಕೊಳ್ಳಲಿದೆ. 2023ರ ಏಕದಿನ ವಿಶ್ವಕಪ್ನಲ್ಲಿ ಗಮನಾರ್ಹ ನಿರ್ವಹಣೆ ತೋರಿದ್ದ ಕೋಟ್ಜೀ ತೊಡೆಸಂದು ನೋವಿನಿಂದ ಬಳಲುತ್ತಿದ್ದರೆ, ಗಂಟೆಗೆ 150 ಕಿಲೋಮೀಟರ್ಗಿಂತ ವೇಗವಾಗಿ ಚೆಂಡೆಸೆಯಬಲ್ಲ ನೋಕಿಯಾ, ಎಸ್ಎ20 ಲೀಗ್ಗಿಂತ ಮುನ್ನ ಮತ್ತೆ ಬೆನ್ನುನೋವಿನ ಸಮಸ್ಯೆ ಎದುರಿಸಿದ್ದಾರೆ. ಇವರಿಬ್ಬರ ಗೈರು ಹರಿಣಗಳ ಬೌಲಿಂಗ್ ವಿಭಾಗದ ಹರಿತವನ್ನು ತಗ್ಗಿಸಿದೆ.
*ಘಜನ್ಫರ್, ಮುಜೀಬ್
ಅಫ್ಘಾನಿಸ್ತಾನ ಸ್ಪಿನ್ ವಿಭಾಗದ ಯುವ ಅಸ್ತ್ರಗಳೆನಿಸಿದ ಮುಜೀಬ್ ಉರ್ ರೆಹಮಾನ್ ಮತ್ತು ಅಲ್ಲಾ ಘಜನ್ಫರ್ ಗಾಯದಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. 2023ರ ವಿಶ್ವಕಪ್ನಲ್ಲಿ ಬಲಿಷ್ಠ ತಂಡಗಳಿಗೆ ಆಘಾತ ನೀಡಿ ಗಮನಸೆಳೆದಿದ್ದ ಅಫ್ಘಾನಿಸ್ತಾನ, ಚೊಚ್ಚಲ ಬಾರಿ ಆಡುತ್ತಿರುವ ಚಾಂಪಿಯನ್ಸ್ ಟ್ರೋಫಿಯಲ್ಲೂ ಮಿಂಚಲು ಇವರಿಬ್ಬರ ಗೈರು ಹಿನ್ನಡೆಯಾಗಬಹುದು. ಅನುಭವಿ ಸ್ಪಿನ್ನರ್ ರಶೀದ್ ಖಾನ್ ಇವರಿಬ್ಬರ ಸಮರ್ಥ ಬೆಂಬಲವನ್ನು ಮಿಸ್ಮಾಡಿಕೊಳ್ಳಲಿದ್ದಾರೆ.
*ಬೆನ್ ಸಿಯರ್ಸ್
ನ್ಯೂಜಿಲೆಂಡ್ ಬೌಲಿಂಗ್ ವಿಭಾಗಕ್ಕೆ ಇತ್ತೀಚೆಗೆ ಹೊಸ ಸೇರ್ಪಡೆಯಾಗಿದ್ದ ವೇಗಿ ಬೆನ್ ಸಿಯರ್ಸ್ ಗಾಯದಿಂದಾಗಿ ಕೊನೇಕ್ಷಣದಲ್ಲಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಪಾಕಿಸ್ತಾನದಲ್ಲಿ ತ್ರಿಕೋನ ಏಕದಿನ ಸರಣಿಯಲ್ಲಿ ಆಡುತ್ತಿದ್ದ ವೇಳೆ ಕಾಲಿನ ಸ್ನಾಯುಸೆಳೆತದ ಸಮಸ್ಯೆಯಿಂದಾಗಿ ಸಿಯರ್ಸ್ ಅಲಭ್ಯರಾಗಿದ್ದಾರೆ. ಆದರೆ ಇತ್ತೀಚೆಗೆ ಏಷ್ಯಾದಲ್ಲೇ 3 ಸೀಮಿತ ಕ್ರಿಕೆಟ್ ಸರಣಿಯಲ್ಲಿ ಗೆದ್ದು ಬೀಗಿರುವ ಕಿವೀಸ್ಗೆ ಇದು ಹೆಚ್ಚಿನ ಹಿನ್ನಡೆಯಾಗುವ ಸಾಧ್ಯತೆ ಇಲ್ಲ.
*ಶಕಿಬ್ ಅಲ್ ಹಸನ್
ಬಾಂಗ್ಲಾದೇಶದ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಶಕೀಬ್ ಅಲ್ ಹಸನ್ ಐಸಿಸಿಯಿಂದ ಅನುಮಾನಾಸ್ಪದ ಬೌಲಿಂಗ್ ಶೈಲಿಗಾಗಿ ನಿಷೇಧಕ್ಕೆ ಒಳಗಾಗಿರುವುದರಿಂದ ಟೂರ್ನಿಗೆ ಆಯ್ಕೆಯಾಗಿಲ್ಲ. ಬೌಲಿಂಗ್ ಶೈಲಿಯ ಮರುಪರೀೆಯಲ್ಲೂ ಅವರು ವಿಲರಾಗಿದ್ದಾರೆ. ಹೀಗಾಗಿ ಕೇವಲ ಬ್ಯಾಟರ್ ಆಗಿ ಅವರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿಲ್ಲ. ಜತೆಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿ ವೃತ್ತೀಜಿವನ ಕೊನೆಗೊಳಿಸುವ 37 ವರ್ಷದ ಶಕೀಬ್ ಕನಸು ಕೂಡ ಭಗ್ನಗೊಂಡಿದೆ.