WPL-2025: ಶೆಫಾಲಿ, ಕನ್ನಡತಿ ನಿಕಿ ಸಾಹಸ; ಮುಂಬೈ ಎದುರು ಡೆಲ್ಲಿ ಕ್ಯಾಪಿಟಲ್ಸ್​​ಗೆ ರೋಚಕ ಗೆಲುವು

web niki (1)
Published on

ವಡೋದರ: ಶೆಫಾಲಿ ವರ್ಮ (43 ರನ್​, 18 ಎಸೆತ, 7 ಬೌಂಡರಿ, 2 ಸಿಕ್ಸರ್​) ಮತ್ತು ಕನ್ನಡತಿ ನಿಕಿ ಪ್ರಸಾದ್​ (35 ರನ್​, 33 ಎಸೆತ, 4 ಬೌಂಡರಿ) ದಿಟ್ಟ ಬ್ಯಾಟಿಂಗ್​ ಸಾಹಸದಿಂದ ಹಾಲಿ ರನ್ನರ್​ ಅಪ್​ ಡೆಲ್ಲಿ ಕ್ಯಾಪಿಟಲ್ಸ್​ ತಂಡ "ಮಹಿಳಾ ಐಪಿಎಲ್​' ಖ್ಯಾತಿಯ ಮೂರನೇ ಆವೃತ್ತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲಿ ಮಾಜಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಎದುರು 2 ವಿಕೆಟ್​ಗಳಿಂದ ರೋಚಕ ಗೆಲುವು ದಾಖಲಿಸಿ ಶುಭಾರಂಭ ಕಂಡಿದೆ.

ಕೋಟಂಬಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಮುಂಬೈ ಆರಂಭಿಕ ಆಘಾತ ಎದುರಿಸಿತು. ಆಗ ಆಲ್ರೌಂಡರ್​ ನ್ಯಾಟ್​ ಸೀವರ್​ ಬ್ರಂಟ್​ (80* ರನ್​, 59 ಎಸೆತ, 13 ಬೌಂಡರಿ) ಹಾಗೂ ನಾಯಕಿ ಹರ್ಮಾನ್​ಪ್ರೀತ್​ ಕೌರ್​ (42 ರನ್​, 22 ಎಸೆತ, 4 ಬೌಂಡರಿ, 3 ಸಿಕ್ಸರ್​) ನಡೆಸಿದ ಜತೆಯಾಟದ ನಡುವೆಯೂ ಸ್ಲಾಗ್​ ಓವರ್​ಗಳಲ್ಲಿ ಲಯ ತಪ್ಪಿತು. ಇದರೊಂದಿಗೆ ಮುಂಬೈ 19.1 ಓವರ್​ಗಳಲ್ಲಿ 164 ರನ್​ಗಳಿಗೆ ಆಲೌಟ್​ ಆಯಿತು. ಪ್ರತಿಯಾಗಿ ಶೆಾಲಿ ಒದಗಿಸಿದ ಬಿರುಸಿನ ಆರಂಭ ಮತ್ತು ಕೊನೆಯಲ್ಲಿ ನಿಕಿ ಪ್ರಸಾದ್​ ಹೋರಾಟದಿಂದ ಡೆಲ್ಲಿ 8 ವಿಕೆಟ್​ಗೆ 165 ರನ್​ ಗಳಿಸಿ ಕೊನೇ ಎಸೆತದಲ್ಲಿ ಗೆಲುವು ದಾಖಲಿಸಿತು.

ಶೆಫಾಲಿ, ನಿಕಿ ಸಾಹಸಕ್ಕೆ ಜಯ

ಶೆಫಾಲಿ ವರ್ಮ (43 ರನ್​, 18 ಎಸೆತ, 7 ಬೌಂಡರಿ, 2 ಸಿಕ್ಸರ್​) ಬಿರುಸಿನ ಆಟವಾಡುವ ಮೂಲಕ ಡೆಲ್ಲಿಗೆ ಉತ್ತಮ ಆರಂಭ ಒದಗಿಸಿದರು. ಸೈಕಾ ಇಶಾಕ್​ ಎಸೆದ ಇನಿಂಗ್ಸ್​ನ 2ನೇ ಓವರ್​ನಲ್ಲಿ ಶೆಫಾಲಿ 1 ಸಿಕ್ಸರ್​, 4 ಬೌಂಡರಿ ಸಹಿತ 22 ರನ್​ ಸಿಡಿಸಿದರು. ಶೆಫಾಲಿ ಸಾಹಸದಿಂದ ಡೆಲ್ಲಿ ಪವರ್​ಪ್ಲೇನಲ್ಲಿ 60 ರನ್​ ಕಸಿಯಿತು. ಶೆಾಲಿ ಔಟಾದ ಬೆನ್ನಲ್ಲೇ ಡೆಲ್ಲಿ ರನ್​ಗತಿ ಕುಸಿಯಿತು ಮತ್ತು ವಿಕೆಟ್​ಗಳೂ ನಿರಂತರವಾಗಿ ಬಿದ್ದವು. ನಾಯಕಿ ಮೆಗ್​ ಲ್ಯಾನಿಂಗ್​ (15), ಜೆಮೀಮಾ ರೋಡ್ರಿಗಸ್​ (2), ಸುದರ್​ಲ್ಯಾಂಡ್​ (13), ಅಲಿಸ್​ ಕ್ಯಾಪ್ಸಿ (16) ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೊನೆಯಲ್ಲಿ ಕನ್ನಡತಿ ನಿಕಿ ಪ್ರಸಾದ್​, ಸಾರಾ ಬೆಸ್​ (21) ಹೋರಾಟದಿಂದ ಡೆಲ್ಲಿ ಗೆಲುವಿನ ದಡ ಸೇರಿತು. ಕೊನೇ ಓವರ್​ನಲ್ಲಿ 10 ರನ್​ ಬೇಕಿದ್ದಾಗ ನಿಕಿ ಮೊದಲ ಎಸೆತದಲ್ಲೇ ಬೌಂಡರಿ ಸಿಡಿಸಿದರು. ನಂತರ 2 ಎಸೆತಗಳಲ್ಲಿ 3 ರನ್​ ಕಸಿದರು. 4ನೇ ಎಸೆದಲ್ಲಿ ರಾಧಾ 1 ರನ್​ ಗಳಿಸಿದರೆ, 5ನೇ ಎಸೆತಕ್ಕೆ ನಿಕಿ ಔಟಾದರು. ಕೊನೇ ಎಸೆತದಲ್ಲಿ ಅರುಂಧತಿ ರೆಡ್ಡಿ 2 ರನ್​ ಕಸಿದು ಡೆಲ್ಲಿ ಗೆಲ್ಲಿಸಿದರು. ಗೆಲುವಿನ ರನ್​ ಕಸಿಯುವ ವೇಳೆ ಅರುಂಧತಿ ಕೂದಲೆಳೆ ಅಂತರದಿಂದ ರನೌಟ್​ನಿಂದ ಪಾರಾದರು.

ಮುಂಬೈ ಇಂಡಿಯನ್ಸ್​: 19.1 ಓವರ್​ಗಳಲ್ಲಿ 164 (ಮ್ಯಾಥ್ಯೂಸ್​ 0, ಭಾಟಿಯಾ 11, ನ್ಯಾಟ್​ ಸೀವರ್​ 80*, ಹರ್ಮಾನ್​ಪ್ರೀತ್​ 42, ಸಜನಾ 1, ಶಿಖಾ ಪಾಂಡೆ 14ಕ್ಕೆ 2, ಸುದರ್​ಲ್ಯಾಂಡ್​ 34ಕ್ಕೆ 3). ಡೆಲ್ಲಿ ಕ್ಯಾಪಿಟಲ್ಸ್​: 8 ವಿಕೆಟ್​ಗೆ 165 (ಲ್ಯಾನಿಂಗ್​ 15, ಶೆಫಾಲಿ 43, ಜೆಮೀಮಾ 2, ಸುದರ್​ಲ್ಯಾಂಡ್​ 13, ಕ್ಯಾಪ್ಸಿ 16, ನಿಕಿ ಪ್ರಸಾದ್​ 35, ಬೆಸ್​ 21, ಅಮೆಲಿಯಾ 22ಕ್ಕೆ 2, ಮ್ಯಾಥ್ಯೂಸ್​ 31ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net