

ಅಹಮದಾಬಾದ್: ಭಾರತ-ಪಾಕ್ ಪಂದ್ಯವನ್ನು ಕ್ರೀಡಾಂಗಣದಲ್ಲಿ ಆನಂದಿಸಿದ ದಿಗ್ಗಜ ಸಚಿನ್ ತೆಂಡುಲ್ಕರ್, ಬಳಿಕ ಪಾಕ್ ಮಾಜಿ ವೇಗಿ ಶೋಯಿಬ್ ಅಖ್ತರ್ಗೆ ಟಾಂಗ್ ನೀಡಿದರು.
ಹಿಂದೆ ಸಚಿನ್ರನ್ನು ಔಟ್ ಮಾಡಿದ ಚಿತ್ರವನ್ನು ಶುಕ್ರವಾರ ಎಕ್ಸ್ನಲ್ಲಿ ಪೋಸ್ಟ್ ಮಾಡಿ, ನಾಳೆಯೂ ಈ ರೀತಿ ಆಗಬೇಕೇ? ಎಂದು ಬರೆದು "ಥಂಡಾರಖ್' (ಶಾಂತವಾಗಿರಿ) ಎಂಬ ಹ್ಯಾಷ್ಟ್ಯಾಂಗ್ ಬಳಸಿದ್ದರು. ಪಂದ್ಯದ ನಂತರ ಸಚಿನ್, "ಗೆಳೆಯ ನಿಮ್ಮ ಸಲಹೆಯನ್ನು ಪಾಲಿಸಿದೆವು. ಎಲ್ಲವನ್ನೂ ಶಾಂತವಾಗಿ ಮುಗಿಸಿದೆವು' ಎಂದು ಪ್ರತಿಕ್ರಿಯಿಸಿದರು.
ಭಾನುವಾರ ಅಹಮದಾಬಾದ್ನಲ್ಲಿ ಭಾರತೀಯ ಕ್ರಿಕೆಟ್ ಪ್ರೇಮಿಗಳೆಲ್ಲರ ಕನಸಿನ ನಿರ್ವಹಣೆ ತೋರಿದ ಟೀಮ್ ಇಂಡಿಯಾ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಸರಾಗವಾಗಿ ಗೆದ್ದು ಬೀಗಿದೆ. ಈ ಮೂಲಕ ಏಕದಿನ ವಿಶ್ವಕಪ್ನಲ್ಲಿ ಪಾಕ್ ವಿರುದ್ಧದ ಅಜೇಯ ಓಟವನ್ನು ಭಾರತ ಸತತ 8ನೇ ಪಂದ್ಯಕ್ಕೆ ವಿಸ್ತರಿಸಿದೆ. ಜಸ್ಪ್ರೀತ್ ಬುಮ್ರಾ (19ಕ್ಕೆ 2) ಸಾರಥ್ಯದಲ್ಲಿ ಭಾರತೀಯ ಬೌಲರ್ಗಳು ಪಾಕಿಸ್ತಾನವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಲು ಶ್ರಮಿಸಿದರೆ, ರೋಹಿತ್ ಶರ್ಮ (86 ರನ್, 63 ಎಸೆತ, 6 ಬೌಂಡರಿ, 6 ಸಿಕ್ಸರ್) ನಾಯಕನಾಟ ಆಡುವ ಮೂಲಕ ಭಾರತವನ್ನು ಸುಲಭವಾಗಿಯೇ ಗುರಿ ಸೇರಿಸಿದರು. ಈ ಸರ್ವಾಂಗೀಣ ನಿರ್ವಹಣೆಯೊಂದಿಗೆ ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಗೆಲುವಿನ ಸಂಭ್ರಮ ಕಂಡ ಭಾರತ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದೆ.