ಗೆದ್ದಿದ್ದು ಒಂದೇ ಸರಣಿ ಬಿಲ್ಡಪ್​ ಮಾತ್ರ ಬೆಟ್ಟದಷ್ಟು! ಲಂಕಾ ಬೌಲರ್​ ಹೇಳಿಕೆಗೆ ಭಾರಿ ಆಕ್ರೋಶ

Lanka Bowler
Published on

ನವದೆಹಲಿ: ಟೀಮ್​ ಇಂಡಿಯಾ ವಿರುದ್ಧದ ಮೂರು ಏಕದಿನ ಸರಣಿ ಗೆದ್ದ ಬಳಿಕ ಶ್ರೀಲಂಕಾದ ಕೆಲ ಆಟಗಾರರಿಗೆ ಕಾಲು ನೆಲದ ಮೇಲೆ ನಿಲ್ಲುತ್ತಿಲ್ಲ. ತಮ್ಮ ತವರು ನೆಲದಲ್ಲಿ ಒಂದೋ ಎರಡೋ ಪಂದ್ಯಗಳಲ್ಲಿ ಭಾರತವನ್ನು ಸೋಲಿಸಿ ತಾವೇನೋ ಭಾರಿ ಸಾಧನೆ ಮಾಡಿರುವಂತೆ ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ಶ್ರೀಲಂಕಾದ ಸ್ಪಿನ್ನರ್ ಮಹೇಶ್ ತೀಕ್ಷಣ ಟೀಮ್​ ಇಂಡಿಯಾ ಆಟಗಾರರ ವಿರುದ್ಧ ಮಾಡಿರುವ ಕಾಮೆಂಟ್​ ವೈರಲ್​ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಟೀಂ ಇಂಡಿಯಾದ ಕ್ರಿಕೆಟಿಗರು ಹೆಚ್ಚಾಗಿ ಬ್ಯಾಟಿಂಗ್‌ಗೆ ಸೂಕ್ತವಾದ ಪಿಚ್‌ಗಳಲ್ಲಿ ಮಾತ್ರ ಆಡುತ್ತಾರೆ. ಭಾರತವು ಕೂಡ ಇದೇ ರೀತಿಯ ಪಿಚ್‌ಗಳನ್ನು ಹೊಂದಿದೆ ಮತ್ತು ಅಲ್ಲಿನ ಬೌಂಡರಿಗಳು ಸಹ ತುಂಬಾ ಚಿಕ್ಕದಾಗಿದೆ. ಆದರೆ, ಪ್ರೇಮದಾಸ ಕ್ರೀಡಾಂಗಣದಲ್ಲಿ ಚೆಂಡು ತಿರುವು ಪಡೆದುಕೊಳ್ಳುತ್ತದೆ. ಅದನ್ನು ನಮ್ಮ ಅನುಕೂಲವಾಗಿ ಬಳಸಿಕೊಂಡೆವು ಎಂದು ಮಹೇಶ್ ತೀಕ್ಷಣ ಹೇಳಿದ್ದಾರೆ.

ಮಹೇಶ್​ ತೀಕ್ಷಣ್​ ಅವರು ಮಾಡಿದ ಈ ಕಾಮೆಂಟ್‌ಗಳ ವಿರುದ್ಧ ಕೆಲವು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೋಪಗೊಂಡಿದ್ದಾರೆ. ಟೀಮ್​ ಇಂಡಿಯಾದ ಕ್ರಿಕೆಟಿಗರಿಗೆ ಸ್ಪಿನ್​ಗೆ ಉತ್ತಮವಾಗಿ ಆಡುವುದು ಹೊಸದಲ್ಲ, ಒಂದೆರಡು ಪಂದ್ಯ ಸೋತಿದಕ್ಕೆ ಟೀಮ್​ ಇಂಡಿಯಾವನ್ನು ಸ್ಪಿನ್ ಮೂಲಕ ಸೋಲಿಸಿದ್ದೇವೆ ಎಂದು ಹೇಳಿಕೆ ಕೊಡುವುದು ಸರಿಯಲ್ಲ. ಸ್ಪಿನ್ ಬೌಲಿಂಗ್‌ನಲ್ಲಿ ಅಷ್ಟೊಂದು ಉತ್ತಮವಾಗಿದ್ದರೆ ಟಿ20 ಸರಣಿಯನ್ನು 3-0 ಅಂತರದಲ್ಲಿ ಕಳೆದುಕೊಂಡಿದ್ದೇಕೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ಏಕದಿನ ಸರಣಿ ಸೋಲಿಗೆ ಟೀಮ್​ ಇಂಡಿಯಾ ಸೇಡು ತೀರಿಸಿಕೊಳ್ಳುವುದು ಖಚಿತ ಎಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳು ವಾಗ್ದಾಳಿ ನಡೆಸುತ್ತಿದ್ದಾರೆ.

ಆದಾಗ್ಯೂ, ಶ್ರೀಲಂಕಾದ ಕೊಲಂಬೊ ಪಿಚ್‌ನಲ್ಲಿ ಭಾರತೀಯ ಕ್ರಿಕೆಟಿಗರು ಸ್ಪಿನ್ ಬೌಲಿಂಗ್‌ಗೆ ಪರದಾಡಿದ್ದು ನಿಜವಾದರೂ, ಈ ಏಕದಿನ ಸರಣಿಯಲ್ಲಿ ಟಾಸ್ ಅತ್ಯಂತ ನಿರ್ಣಾಯಕವಾಗಿದೆ. ಮೂರೂ ಪಂದ್ಯಗಳಲ್ಲಿ ಟೀಮ್​ ಇಂಡಿಯಾ ಟಾಸ್ ಸೋತಿರುವುದು ಕೂಡ ಸೋಲಿಗೆ ಕಾರಣ ಎನ್ನಬಹುದು. ಮೂರು ಪಂದ್ಯಗಳಲ್ಲಿ ಶ್ರೀಲಂಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಟೀಮ್​​ ಇಂಡಿಯಾ ನಾಯಕ ರೋಹಿತ್ ಶರ್ಮ ಟಾಸ್ ಗೆದ್ದಿದ್ದರೆ ಫಲಿತಾಂಶವೇ ಬೇರೆಯಾಗುತ್ತಿತ್ತು ಎನ್ನುತ್ತಾರೆ ಕ್ರಿಕೆಟ್ ತಜ್ಞರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net