

ಹೈದರಾಬಾದ್: ಟಾಲಿವುಡ್ ಸ್ಟಾರ್ ಹೀರೋ ಅಕ್ಕಿನೇನಿ ನಾಗಚೈತನ್ಯ ಜೀವನದಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಗೆಳತಿ ಹಾಗೂ ನಟಿ ಶೋಭಿತಾ ಧೂಳಿಪಾಲ ಜತೆ ನಾಗಚೈತನ್ಯ ಗುರುವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಪ್ರೇಮ ಪಕ್ಷಿಗಳ ನಿಶ್ಚಿತಾರ್ಥದ ಎಂಬ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಇಬ್ಬರ ನಡುವೆ ಪ್ರೀತಿ ಇದೆ ಎಂಬುದು ಇಷ್ಟು ದಿನ ಕೇವಲ ವದಂತಿಯಾಗಿತ್ತು. ಆದರೆ, ಈಗ ವದಂತಿ ನಿಜವಾಗಿದೆ.
ನಾಗಚೈತನ್ಯ-ಶೋಭಿತಾ ಅವರ ನಿಶ್ಚಿತಾರ್ಥದ ಫೋಟೋಗಳನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಅಕ್ಕಿನೇನಿ ನಾಗಾರ್ಜುನ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಚೈತನ್ಯ ಅವರು ಬಿಳಿ ಬಣ್ಣದ ಶೇರ್ವಾನಿ ತೊಟ್ಟಿದ್ದರೆ, ಶೋಭಿತಾ ಗುಲಾಬಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಅತ್ಯಂತ ಸರಳವಾಗಿ ಈ ನಿಶ್ಚಿತಾರ್ಥ ಸಮಾರಂಭ ಕೇವಲ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆದಿದೆ. ನಾಗಚೈತನ್ಯ ಈ ಹಿಂದೆ ನಟಿ ಸಮಂತಾರನ್ನು ಪ್ರೀತಿಸಿ ವಿವಾಹವಾಗಿದ್ದರು. 2017 ರಲ್ಲಿ ಮದುವೆಯಾಗಿ 2021 ರಲ್ಲಿ ಇಬ್ಬರು ಭಿನ್ನಾಭಿಪ್ರಾಯಗಳ ಕಾರಣದಿಂದ ಬೇರ್ಪಟ್ಟರು. ಇದು ಕೂಡ ಭಾರಿ ಸುದ್ದಿಯಾಗಿತ್ತು.
ಸಮಂತಾರಿಂದ ದೂರವಾದ ಬಳಿಕ ನಾಗಚೈತನ್ಯ ನಟಿ ಶೋಭಿತಾ ಅವರನ್ನು ಪ್ರೀತಿಸುತ್ತಿದ್ದರು. ಇವರಿಬ್ಬರೂ ಜೊತೆಯಾಗಿ ಹಲವು ಬಾರಿ ವಿದೇಶ ಪ್ರವಾಸ ಕೂಡ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ ಚೈತನ್ಯ ಆಗಲಿ ಶೋಭಿತಾ ಆಗಲಿ ತಮ್ಮ ಪ್ರೀತಿಯ ಬಗ್ಗೆ ಒಮ್ಮೆಯೂ ಬಾಯ್ಬಿಟ್ಟಿರಲಿಲ್ಲ. ಆದರೆ, ಇದೀಗ ತಮ್ಮ ಸಂಬಂಧಕ್ಕೆ ನಿಶ್ಚಿತಾರ್ಥದ ಮೂಲಕ ಅಧಿಕೃತ ಮುದ್ರೆಯನ್ನು ಒತ್ತಿದ್ದಾರೆ.
ಇತ್ತೀಚೆಗಷ್ಟೇ ನಾಗಾರ್ಜುನ ಅವರ ಟ್ವೀಟ್ ಮಾಡಿ, ನಿಶ್ಚಿತಾರ್ಥ ಸುದ್ದಿ ಖಚಿಪಡಿಸಿದ್ದಾರೆ. ನಮ್ಮ ಮಗ ನಾಗಚೈತನ್ಯ ಅವರ ನಿಶ್ಚಿತಾರ್ಥವು ಶೋಭಿತಾ ಧೂಳಿಪಾಲ ಅವರೊಂದಿಗೆ ಇಂದು (ಆಗಸ್ಟ್ 8) ಬೆಳಿಗ್ಗೆ 9.42ಕ್ಕೆ ನೇರವೇರಿತು ಎಂಬುದನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಆಕೆಯನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ನಾವು ತುಂಬಾ ಉತ್ಸುಕರಾಗಿದ್ದೇವೆ. ಇಬ್ಬರಿಗೂ ಅಭಿನಂದನೆಗಳು. ಜೀವನಪರ್ಯಂತ ಖುಷಿಯಾಗಿ, ಪ್ರೀತಿಯಿಂದ ಬಾಳುವಂತೆ ಆಶೀರ್ವದಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ, 8.8.8 ಎಂದು ವಿಶೇಷ ಸಂಖ್ಯೆಯನ್ನು ನಮೂದಿಸಿ, ದಿ ಬಿಗಿನಿಂಗ್ ಆಫ್ ಇನ್ಫಿನಿಟಿ ಲವ್ (ಅನಂತ ಪ್ರೀತಿಯ ಆರಂಭ) ಎಂದು ಬರೆದುಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ನಾಗಚೈತನ್ಯ-ಶೋಭಿತಾ ಅವರ ನಿಶ್ಚಿತಾರ್ಥ ಆಗಸ್ಟ್ 8 ರಂದೇ ನಡೆಯಲು ಕಾರಣವೇನು ಎಂಬ ಚರ್ಚೆ ನಡೆಯುತ್ತಿದೆ. ಇಲ್ಲಿ ಸಂಖ್ಯಾತ್ಮಕ ಮತ್ತು ವೈಜ್ಞಾನಿಕ ಕಾರಣವಿದೆ ಎಂದು ಹೇಳಲಾಗುತ್ತಿದೆ. ಆಗಸ್ಟ್ ಎಂದರೆ ಎಂಟನೇ ತಿಂಗಳು ಮತ್ತು ಇಂದು ಎಂಟನೇ ತಾರೀಖು ಹಾಗೂ 2024 (2+0+2+4+= 8) ಸೇರಿಸಿ 888 ಎಂದು ನಾಗಾರ್ಜುನ್ ಬರೆದಿದ್ದಾರೆ. ಇನ್ನು ಈ 8.8.8. ಅನ್ನು ರಿವರ್ಸ್ ಮಾಡಿದರೂ ಅದೇ ಅರ್ಥ ಬರುತ್ತದೆ. ಆದರೆ, ಬೇರೆ ಸಂಖ್ಯೆಗಳನ್ನು ರಿವರ್ಸ್ ಮಾಡಿದರೆ ಅರ್ಥ ಬೇರೆಯಾಗುತ್ತದೆ. ಅನಂತ ಪ್ರೀತಿಯ ಆರಂಭಕ್ಕೂ ಈ ಸಂಖ್ಯೆ ಸೂಚಿತವಾಗಿದೆ. ಇದರರ್ಥ ಈ ಪ್ರೀತಿಗೆ ಅಂತ್ಯವಿಲ್ಲ, ಯಾವಾಗ ಒಟ್ಟಿಗೆ ಇರುತ್ತಾರೆ ಎಂದು ಹೇಳಲು ಈ ದಿನಾಂಕದಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಖ್ಯೆಯು ಸಂಬಂಧದ ಬಲವನ್ನು ಸಹ ಸೂಚಿಸುತ್ತದೆ. ಹೀಗಾಗಿ ಇದೇ ದಿನ ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್ನು ಇಬ್ಬರ ಮದುವೆ ದಿನಾಂಕ ಘೋಷಣೆಯಾಗಿಲ್ಲ. ಈ ವರ್ಷ ಅಥವಾ ಮುಂದಿನ ವರ್ಷ ಮದುವೆ ನಡೆಯುವ ಸಾಧ್ಯತೆ ಇದೆ. (ಏಜೆನ್ಸೀಸ್)