

ನವದೆಹಲಿ: ಮಧ್ಯಮ ವೇಗಿ ಥಾಮಸ್ ಡ್ರಾಕಾ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಇಟಲಿಯ ಮೊದಲ ಕ್ರಿಕೆಟಿಗ ಎನಿಸಿದ್ದಾರೆ. 24 ವರ್ಷದ ಡ್ರಾಕಾ 2024ರ ಗ್ಲೋಬಲ್ ಟಿ20 ಕೆನಡಾ ಟೂರ್ನಿಯಲ್ಲಿ 6 ಪಂದ್ಯಗಳಲ್ಲಿ 11 ವಿಕೆಟ್ ಕಬಳಿಸಿ ಮಿಂಚಿದ್ದರು. ಡ್ರಾಕಾ ಇಟಲಿ ಪರ 4 ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನೂ ಆಡಿದ್ದು 8 ವಿಕೆಟ್ ಕಬಳಿಸಿದ್ದಾರೆ.
ಯುಎಇಯ ಐಎಲ್ಟಿ20ಯಲ್ಲಿ ಆಡಲಿರುವ ಮುಂಬೈ ಎಮಿರೇಟ್ಸ್ ತಂಡದಲ್ಲೂ ಇತ್ತೀಚೆಗೆ ಸ್ಥಾನ ಪಡೆದಿದ್ದಾರೆ. ಡ್ರಾಕಾ ಐಪಿಎಲ್ ಹರಾಜಿಗೆ 30 ಲಕ್ಷ ರೂ. ಮೂಲಬೆಲೆಯೊಂದಿಗೆ ವಿದೇಶಿ ಆಲ್ರೌಂಡರ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಮಿಚೆಲ್ ಸ್ಟಾರ್ಕ್ ಮತ್ತೆ 2 ಕೋಟಿ ರೂ.ನಿಂದ ಶುರು!
ಕಳೆದ ವರ್ಷದ ಐಪಿಎಲ್ ಹರಾಜಿನಲ್ಲಿ ದಾಖಲೆಯ 24.50 ಕೋಟಿ ರೂ.ಗೆ ಕೆಕೆಆರ್ ತಂಡಕ್ಕೆ ಸೇಲಾಗಿದ್ದ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್, ಫೈನಲ್ನಲ್ಲಿ ಅಮೋ ದಾಳಿ ನಡೆಸಿ ಪ್ರಶಸ್ತಿ ಗೆದ್ದುಕೊಟ್ಟ ಸಾಧನೆಯ ನಡುವೆಯೂ ಈ ಬಾರಿ ರಿಟೇನ್ ಆಗಿಲ್ಲ. ಹೀಗಾಗಿ ಈ ಬಾರಿ ಮತ್ತೆ 2 ಕೋಟಿ ರೂ. ಮೂಲಬೆಲೆಯೊಂದಿಗೆ ಐಪಿಎಲ್ ಹರಾಜಿನಲ್ಲಿ ಭಾಗವಹಿಸಲಿದ್ದಾರೆ.
ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಕೂಡ 2 ಕೋಟಿ ರೂ. ಮೂಲಬೆಲೆಯೊಂದಿಗೆ ಪಾಲ್ಗೊಳ್ಳಲಿದ್ದಾರೆ. ಈ ಹಿಂದಿನ ಹರಾಜುಗಳಲ್ಲಿ ಬಿಕರಿಯಾಗದ ಆಸೀಸ್ ಅನುಭವಿ ಆಫ್ ಸ್ಪಿನ್ನರ್ ನಾಥನ್ ಲ್ಯಾನ್ ಈ ಬಾರಿ 2 ಕೋಟಿ ರೂ. ಮೂಲಬೆಲೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕಳೆದ ಟಿ20 ವಿಶ್ವಕಪ್ನಲ್ಲಿ ಅಮೆರಿಕ ಪರ ಆಡಿದ್ದ ಮುಂಬೈ ಮೂಲದ ವೇಗಿ ಸೌರಭ್ ನೇತ್ರವಲ್ಕರ್ 30 ಲಕ್ಷ ರೂ. ಮೂಲಬೆಲೆಯೊಂದಿಗೆ ಹರಾಜಿನಲ್ಲಿ ಭಾಗವಹಿಸಲಿದ್ದಾರೆ.