

ನವದೆಹಲಿ: ಭಾರತ ತಂಡದ ನಾಯಕ ರೋಹಿತ್ ಶರ್ಮ ಆಸ್ಟ್ರೆಲಿಯಾ ಪ್ರವಾಸದ ಮೊದಲ ಟೆಸ್ಟ್ ಪಂದ್ಯಕ್ಕೆ ಗೈರಾಗುವುದಾದರೆ, ಉಪನಾಯಕ ಜಸ್ಪ್ರೀತ್ ಬುಮ್ರಾ ಅವರಿಗೇ ಇಡೀ ಸರಣಿಯ ನಾಯಕತ್ವ ವಹಿಸುವುದು ಉತ್ತಮ. ರೋಹಿತ್ ನಂತರ ಭಾರತ ತಂಡಕ್ಕೆ ಮರಳಿದಾಗ ಸರಣಿಯ ಇತರ ಪಂದ್ಯಗಳಲ್ಲಿ ಸಾಮಾನ್ಯ ಆಟಗಾರನಾಗಿ ಆಡಲಿ ಎಂದು ಮಾಜಿ ನಾಯಕ ಸುನೀಲ್ ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ ನವೆಂಬರ್ 22ರಂದು ಪರ್ತ್ನಲ್ಲಿ ಶುರುವಾಗಲಿದೆ. ರೋಹಿತ್ ಪತ್ನಿ ರಿತಿಕಾ 2ನೇ ಮಗುವಿಗೆ ಜನ್ಮ ನೀಡುವ ನಿರೀೆಯಲ್ಲಿ ಮೊದಲ ಟೆಸ್ಟ್ ತಪ್ಪಿಸಿಕೊಳ್ಳುವ ನಿರೀಕ್ಷೆ ಇದೆ. ಹೀಗಾಗಿ ಮೊದಲ ಟೆಸ್ಟ್ನಲ್ಲಿ ಬುಮ್ರಾ ನಾಯಕತ್ವ ನಿರ್ವಹಿಸುವುದು ಬಹುತೇಕ ಖಚಿತವೆನಿಸಿದೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೇರಲು ಭಾರತ, ಆಸೀಸ್ ಪ್ರವಾಸದ 5 ಪಂದ್ಯಗಳ ಸರಣಿಯಲ್ಲಿ 4-0 ಅಂತರದಿಂದ ಗೆಲ್ಲಬೇಕಾಗಿದೆ. ಆದರೆ ಭಾರತ ತಂಡ ಈಗ ಡಬ್ಲ್ಯುಟಿಸಿ ಫೈನಲ್ ಬಗ್ಗೆ ಯೋಚಿಸುವುದಕ್ಕಿಂತ ಆಸ್ಟ್ರೆಲಿಯಾದಲ್ಲಿ ಟೆಸ್ಟ್ ಸರಣಿ ಜಯಿಸುವತ್ತ ಮಾತ್ರ ಗಮನಹರಿಸುವುದು ಉತ್ತಮ. ಅದು 1-0, 2-0, 3-0, 3-1, 2-1 ಎಷ್ಟೇ ಅಂತರದಿಂದ ಆಗಿರಲಿ. ಇದರಿಂದ ಭಾರತೀಯ ಕ್ರಿಕೆಟ್ ಪ್ರೇಮಿಗಳೂ ಮತ್ತೆ ಸಂಭ್ರಮಿಸಲಿದ್ದಾರೆ ಎಂದು ಗಾವಸ್ಕರ್ ಹೇಳಿದ್ದಾರೆ.