

ಕಾನ್ಪುರ: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆದ ದೌರ್ಜನ್ಯದ ಹಿನ್ನೆಲೆಯಲ್ಲಿ ಪ್ರವಾಸಿ ತಂಡದ ವಿರುದ್ಧ ಕಾನ್ಪುರದಲ್ಲಿ ಪ್ರತಿಭಟನೆ ನಡೆಯುವ ಭೀತಿ ಎದುರಾಗಿದೆ. ಬಾಂಗ್ಲಾ ವಿರುದ್ಧ ಕ್ರಿಕೆಟ್ ಸರಣಿ ಆಡಬಾರದು ಎಂದು ಕಾನ್ಪುರದ ಹಿಂದು ಸಂಘಟನೆಗಳು ಬೆದರಿಕೆಯನ್ನೂ ಹಾಕಿದ್ದವು. ಇದರಿಂದಾಗಿ ಬಿಸಿಸಿಐ, ಪಂದ್ಯವನ್ನು ಲಖನೌಗೆ ಸ್ಥಳಾಂತರಿಸುವ ಬಗ್ಗೆಯೂ ಹಿಂದೊಮ್ಮೆ ಚಿಂತನೆ ನಡೆಸಿತ್ತು. ಅಂತಿಮವಾಗಿ ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ ಪಂದ್ಯವನ್ನು ಕಾನ್ಪುರದಲ್ಲೇ ನಡೆಸಲು ನಿರ್ಧರಿಸಿತ್ತು. ಹೀಗಾಗಿ ಪ್ರವಾಸಿ ಬಾಂಗ್ಲಾ ತಂಡಕ್ಕೆ ಕಾನ್ಪುರದಲ್ಲಿ ಬಿಗಿ ಭದ್ರತೆ ಒದಗಿಸಲಾಗುತ್ತಿದೆ.
ಪಂದ್ಯದ ಸಮಯದಲ್ಲೂ ಪ್ರತಿಭಟನೆಗಳಾಗದಂತೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಾನ್ಪುರದ ಹೆಚ್ಚುವರಿ ಪೊಲೀಸ್ ಆಯುಕ್ತ ಹರೀಶ್ ಚಂದರ್ ತಿಳಿಸಿದ್ದಾರೆ.
ಈ ನಡುವೆ ಅಖಿಲೇಶ್ ಭಾರತೀಯ ಹಿಂದು ಮಹಾಸಭಾ ಬಾಂಗ್ಲಾ ವಿರುದ್ಧದ ಕಾನ್ಪುರ ಟೆಸ್ಟ್ ಮತ್ತು ಗ್ವಾಲಿಯರ್ ಟಿ20 ಪಂದ್ಯಕ್ಕೆ ಅಡ್ಡಿಪಡಿಸುವ ಬೆದರಿಕೆ ಒಡ್ಡಿದೆ. ಜತೆಗೆ ಗ್ರೀನ್ಪಾರ್ಕ್ ಸ್ಟೇಡಿಯಂ ಸಮೀಪದ ರಸ್ತೆಯಲ್ಲಿ ಹವನ ನಡೆಸಿ ಅಡಚಣೆಗೆ ಯತ್ನಿಸಿದೆ. ಇದರಿಂದ ಯುಪಿ ಪೊಲೀಸರು, 20 ಜನರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.