

ಬೆಂಗಳೂರು: ಒಂದು ಹನಿಯಿಂದ ಶುರುವಾಗಿದ್ದು ಈಗ ಸಾಗರವಾಗಿದೆ! ಓರ್ವ ವಿಶ್ವನಾಥನ್ ಆನಂದ್ ತುಂಬಿದ ಸ್ಫೂರ್ತಿಯಿಂದ ಇಂದು ಪ್ರತಿಭಾವಂತ ಚೆಸ್ ಆಟಗಾರರ ದೊಡ್ಡ ಬಲವೇ ಭಾರತಕ್ಕೆ ಸಿಕ್ಕಿದೆ. ಚದುರಂಗ ಆಟ ಹುಟ್ಟಿದ್ದು ಭಾರತದಲ್ಲೇ. ಪುರಾಣದಲ್ಲೂ ಇದರ ಉಲ್ಲೇಖಗಳಿವೆ. ಆದರೆ ಚೆಸ್ ಒಂದು ವೃತ್ತಿಪರ ಕ್ರೀಡೆಯೂ ಆಗಬಹುದು ಎಂಬುದನ್ನು ಭಾರತೀಯರಿಗೆ ತೋರಿಸಿಕೊಟ್ಟಿದ್ದು ವಿಶ್ವನಾಥನ್ ಆನಂದ್. ರಷ್ಯಾ ಸೇರಿ ಸೋವಿಯತ್ ಒಕ್ಕೂಟವು ಚೆಸ್ ಆಟವನ್ನು ಗಂಭೀರ ಕ್ರೀಡೆಯಾಗಿ ಪರಿಗಣಿಸಿದಂತೆ ಭಾರತ, ಜಾಗತಿಕ ಮಟ್ಟದಲ್ಲಿ ತನ್ನ ಆಧುನಿಕ ಚೆಸ್ ಬುದ್ದಿಮತ್ತೆಯನ್ನು ಪರಿಚಯಿಸಿದ್ದು ಆನಂದ್ ಗ್ರಾಂಡ್ಮಾಸ್ಟರ್ ಆದ ನಂತರದಲ್ಲೇ. ಭಾರತದಲ್ಲಿ ಚೆಸ್ ಎಂದರೆ ವಿಶ್ವನಾಥನ್ ಆನಂದ್ ಎಂಬಷ್ಟರ ಮಟ್ಟಿಗೆ ಬೆಳೆದವರು. ಈಗ ಅವರದೇ ಸ್ಫೂರ್ತಿಯಲ್ಲಿ ದೇಶದಲ್ಲಿ 85 ಗ್ರಾಂಡ್ ಮಾಸ್ಟರ್ಗಳು, 124 ಅಂತಾರಾಷ್ಟ್ರೀಯ ಮಾಸ್ಟರ್ಗಳಿದ್ದಾರೆ. ಹಂಗೆರಿಯ ಬುಡಾಪೆಸ್ಟ್ನಲ್ಲಿ ನಡೆದ 45ನೇ ಚೆಸ್ ಒಲಿಂಪಿಯಾಡ್ನಲ್ಲಿ ಮೊಟ್ಟಮೊದಲ ಬಾರಿಗೆ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಸ್ವರ್ಣ ಪದಕ ಗೆದ್ದುಕೊಳ್ಳುವ ಮೂಲಕ ಈ ಸಾಧನೆಗೆ ಹೊಸ ಕಳಶವಿಟ್ಟಿದೆ. ಈ ಮೂಲಕ ಭಾರತೀಯ ಚದುರಂಗದ ಸ್ವರ್ಣಯುಗವನ್ನು ಸಾರಿದೆ.
ಕ್ರಿಕೆಟ್, ಹಾಕಿ, ಫುಟ್ಬಾಲ್ಯಲ್ಲಿ ವಿಶ್ವಕಪ್, ಟೆನಿಸ್ನಲ್ಲಿ ಡೇವಿಸ್ ಕಪ್, ಬ್ಯಾಡ್ಮಿಂಟನ್ನಲ್ಲಿ ಥಾಮಸ್-ಉಬೆರ್ ಕಪ್, ಇತರ ಕ್ರೀಡೆಗಳಲ್ಲಿ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದಷ್ಟೇ ಮಹತ್ವದ ಸಾಧನೆ ಚೆಸ್ ಒಲಿಂಪಿಯಾಡ್ ಸ್ವರ್ಣ ಗೆಲುವಿನ ಸಾಧನೆಯೂ ಆಗಿದೆ. ಯಾಕೆಂದರೆ ಚೆಸ್ ಒಲಿಂಪಿಯಾಡ್ನಲ್ಲಿ ಮುಕ್ತ ವಿಭಾಗದಲ್ಲಿ 195 ದೇಶ ಮತ್ತು ಮಹಿಳಾ ವಿಭಾಗದಲ್ಲಿ 181 ದೇಶದ ತಂಡಗಳು ಕಣದಲ್ಲಿದ್ದವು. ಹಿಂದಿನ 44 ಆವೃತ್ತಿಗಳಲ್ಲಿ ಒಟ್ಟಾರೆ ಕೇವಲ 3 ಕಂಚಿನ ಪದಕವನ್ನಷ್ಟೇ ಜಯಿಸಿದ್ದ ಭಾರತ, ಈ ಬಾರಿ ಎರಡೂ ವಿಭಾಗಗಳಲ್ಲಿ ಏಕಕಾಲದಲ್ಲಿ ಸ್ವರ್ಣ ಪದಕ ಗೆದ್ದು ಬೀಗಿರುವುದು ಹಿಂದೆಂದೂ ಯಾವ ಕ್ರೀಡೆಯಲ್ಲೂ ಕಂಡುಕೇಳರಿಯದಂಥ ಮೇರು ಸಾಧನೆ ಎನಿಸಿದೆ.
ಸ್ವರ್ಣ ಪದಕ ಗೆದ್ದ ಭಾರತ ತಂಡದ ಸದಸ್ಯರನ್ನು ನೋಡಿದಾಗ ಈ ಸಾಧನೆ ಇನ್ನಷ್ಟು ವಿಶೇಷವೆನಿಸುತ್ತದೆ. ಯಾಕೆಂದರೆ ಪುರುಷರ ತಂಡದಲ್ಲಿ ಪಿ. ಹರಿಕೃಷ್ಣ, ಮಹಿಳಾ ತಂಡದಲ್ಲಿ ದ್ರೋಣವಲ್ಲಿ ಹರಿಕಾ, ತಾನಿಯಾ ಸಚ್ದೇವ್ ಹೊರತುಪಡಿಸಿ ಉಳಿದೆಲ್ಲರೂ ಯುವ ಚೆಸ್ ತಾರೆಯರು. ಹದಿಹರೆಯ ಮತ್ತು 30 ವರ್ಷದೊಳಗಿನ ಈ ಚೆಸ್ ಆಟಗಾರರ ಕೈಯಲ್ಲಿ ಭಾರತೀಯ ಚದುರಂಗದ ಭವಿಷ್ಯ ಉಜ್ವಲವೆನಿಸಿದೆ. ಅಲ್ಲದೆ ಈ ಗೆಲುವು ಬರೀ ಆರಂಭ ಮಾತ್ರ ಎಂಬುದರಲ್ಲಿ ಅನುಮಾನವಿಲ್ಲ.
ಕಳೆದ ವರ್ಷ ಆರ್. ಪ್ರಜ್ಞಾನಂದ ಚೆಸ್ ವಿಶ್ವಕಪ್ನಲ್ಲಿ ರನ್ನರ್ಅಪ್ ಎನಿಸಿದ್ದರೆ, ಹಾಲಿ ವರ್ಷದ ಕ್ಯಾಂಡಿಡೇಟ್ ಚೆಸ್ ಟೂರ್ನಿಯಲ್ಲಿ ಭಾರತದ ಒಟ್ಟು ಐವರು (ಪುರುಷರಲ್ಲಿ 3, ಮಹಿಳೆಯರಲ್ಲಿ 2) ಕಣಕ್ಕಿಳಿದಿದ್ದರು. ಈ ಪೈಕಿ ದೊಮ್ಮರಾಜು ಗುಕೇಶ್ ಪುರುಷರ ವಿಭಾಗದ ವಿಜೇತರಾಗಿ ಹೊರಹೊಮ್ಮಿದ್ದು, ನವೆಂಬರ್ 25ರಿಂದ ಡಿಸೆಂಬರ್ 13ರವರೆಗೆ ಸಿಂಗಾಪುರದಲ್ಲಿ ಚೀನಾದ ಡಿಂಗ್ ಲಿರೆನ್ ಎದುರು "ವಿಶ್ವ ಚಾಂಪಿಯನ್' ಪಟ್ಟಕ್ಕಾಗಿ ಹೋರಾಡಲಿದ್ದಾರೆ. ಇದರಲ್ಲಿ ಗುಕೇಶ್ ಗೆಲುವು ಸಾಧಿಸಿದರೆ ಭಾರತೀಯ ಚದುರಂಗ ತನ್ನ ಉತ್ತುಂಗವನ್ನು ತಲುಪಿದಂತಾಗುತ್ತದೆ.
ಗೆಲುವಿನ ಕಾರಣಗಳು
ಭಾರತದ ಅಗ್ರ ಶ್ರೇಯಾಂಕಿತ ಅರ್ಜುನ್ ಇರಿಗೈಸಿ ಅವರನ್ನು 3ನೇ ಬೋರ್ಡ್ನಲ್ಲಿ ಆಡಿಸುವ ನಾಯಕ ಶ್ರೀನಾಥ್ ನಿರ್ಧಾರ ಮಾಸ್ಟರ್ಸ್ಟ್ರೊಕ್ ಎನಿಸಿತು. 11ರಲ್ಲಿ 10ರಲ್ಲಿ ಗೆದ್ದು ಅರ್ಜುನ್ ಪ್ರಾಬಲ್ಯ ಸಾಧಿಸಿದರು. ಡಿ. ಗುಕೇಶ್ ಮೊದಲ ಬೋರ್ಡ್ನಲ್ಲಿ 10ರಲ್ಲಿ 9 ಪಂದ್ಯ ಗೆದ್ದು ಬೀಗಿದರು. 7ನೇ ಸುತ್ತಿನಲ್ಲಿ ಮಾಜಿ ಚಾಂಪಿಯನ್ ಚೀನಾ ಎದುರು ಮತ್ತು 10ನೇ ಸುತ್ತಿನಲ್ಲಿ ಅಗ್ರ ಶ್ರೇಯಾಂಕಿತ ಅಮೆರಿಕ ತಂಡದ ಎದುರು ಗೆದ್ದಿದ್ದು ಭಾರತದ ಸ್ವರ್ಣ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು. ಮಹಿಳೆಯರ ವಿಭಾಗದಲ್ಲಿ ರಷ್ಯಾ ತಂಡದ ಗೈರು ಮತ್ತು ಚೀನಾ 2ನೇ ದರ್ಜೆ ತಂಡವನ್ನು ಕಣಕ್ಕಿಳಿಸಿದ್ದು ಭಾರತದ ಸ್ವರ್ಣ ಗೆಲುವಿಗೆ ನೆರವಾಯಿತು. 8ನೇ ಸುತ್ತಿನಲ್ಲಿ ಪೋಲೆಂಡ್ ಎದುರು ಸೋತರೂ, 9ನೇ ಸುತ್ತಿನಲ್ಲಿ ಅಮೆರಿಕ ಎದುರು ಡ್ರಾ ಸಾಧಿಸುವ ಮೂಲಕ ಭಾರತ ರೇಸ್ನಲ್ಲಿ ಉಳಿದುಕೊಂಡಿತು.
ನೆರವಾದ ಆನಂದ್
ಆರನೇ ವಯಸ್ಸಿನಲ್ಲೇ ಅಮ್ಮ ಸುಶೀಲಾರಿಂದ ಚೆಸ್ ಆಟವನ್ನು ಕಲಿತ ವಿಶ್ವನಾಥನ್ ಆನಂದ್, 1988ರಲ್ಲಿ 18ನೇ ವಯಸ್ಸಿನಲ್ಲೇ ಗ್ರಾಂಡ್ಮಾಸ್ಟರ್ ಪಟ್ಟವೇರಿದ ಮೊದಲ ಭಾರತೀಯರೆನಿಸಿದ್ದರು. ನಂತರದಲ್ಲಿ 5 ಬಾರಿ ವಿಶ್ವ ಚಾಂಪಿಯನ್ ಎನಿಸಿದ ಆನಂದ್, 2007ರಲ್ಲಿ ಫಿಡೆ ರ್ಯಾಂಕಿಂಗ್ನಲ್ಲಿ ವಿಶ್ವ ನಂ. 1 ಆಗಿದ್ದರು. ಈಗ 54ನೇ ವಯಸ್ಸಿನಲ್ಲಿ ಆನಂದ್ ವೃತ್ತಿಪರ ಚೆಸ್ ಆಟದಿಂದ ಸ್ವಲ್ಪ ವಿರಾಮಯಲ್ಲಿದ್ದರೂ, ಇನ್ನೂ ನಿವೃತ್ತಿ ಪಡೆದಿಲ್ಲ. ಚೆಸ್ ಒಲಿಂಪಿಯಾಡ್ನಲ್ಲೂ ಭಾರತದ ಯುವ ಆಟಗಾರರಿಗೆ ಅವರು ತಂದೆಯ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ನೀಡಿದ್ದಾರೆ. ಟೂರ್ನಿಗೆ ಮೊದಲೇ ಭಾರತ ಈ ಬಾರಿ ಸ್ವರ್ಣ ಪದಕ ಗೆದ್ದೇ ಗೆಲ್ಲುತ್ತದೆ ಎಂಬ ಭವಿಷ್ಯವನ್ನೂ ನುಡಿದಿದ್ದರು. ಅಂತಾರಾಷ್ಟ್ರೀಯ ಚೆಸ್ ಒಕ್ಕೂಟ ಆನಂದ್ ಅವರನ್ನು "ಭಾರತೀಯ ಆಧುನಿಕ ಚೆಸ್ನ ಪಿತಾಮಹಾ' ಎಂದೂ ಕರೆದಿದೆ. ಆದರೆ ಆನಂದ್ ಈ ಸಾಧನೆಯ ಶ್ರೇಯವನ್ನು ಆಟಗಾರರ ಹೆತ್ತವರು ಮತ್ತು ಕೋಚ್ಗಳಿಗೆ ನೀಡಲು ಬಯಸಿದ್ದಾರೆ. ಜತೆಗೆ ಸೋವಿಯತ್ ಯೂನಿಯನ್ನಲ್ಲಿ ಶಾಲೆಗಳಲ್ಲಿ ಚೆಸ್ ಕಲಿಸುವುದನ್ನು ತಾನು 3 ದಶಕಗಳ ಹಿಂದೆಯೇ ನೋಡಿದ್ದ ಸ್ಫೂರ್ತಿಯಿಂದ ಸ್ಥಾಪಿಸಿರುವ ತನ್ನ ಚೆಸ್ ಅಕಾಡೆಮಿಯೂ (ವೆಸ್ಟ್ಬ್ರಿಡ್ಜ್ ಆನಂದ್ ಚೆಸ್ ಅಕಾಡೆಮಿ) ಪ್ರಮುಖ ಪಾತ್ರವಹಿಸಿದೆ ಎಂದಿದ್ದಾರೆ.
ಪ್ರಧಾನಿ ಸಹಿತ ಗಣ್ಯರ ಮೆಚ್ಚುಗೆ
ಚೆಸ್ ಒಲಿಂಪಿಯಾಡ್ನಲ್ಲಿ ಅವಳಿ ಸ್ವರ್ಣ ಗೆದ್ದ ಭಾರತ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಿತ ದೇಶದ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. "ಭಾರತೀಯ ಚೆಸ್ ತಂಡಕ್ಕೆ ಇದೊಂದು ಐತಿಹಾಸಿಕ ಗೆಲುವು. ಈ ಅಪೂರ್ವ ಸಾಧನೆಗಾಗಿ ಅಭಿನಂದನೆಗಳು. ಇದು ಭಾರತೀಯ ಕ್ರೀಡಾಪಥದಲ್ಲಿ ಹೊಸ ಅಧ್ಯಾಯವಾಗಿದೆ. ಈ ಸಾಧನೆ ಇನ್ನಷ್ಟು ಚೆಸ್ ಉತ್ಸಾಹಿತಗಳಿಗೆ ಪ್ರೇರಣೆ ತುಂಬಲಿ' ಎಂದು ಮೋದಿ ಶ್ಲಾಘಿಸಿದ್ದಾರೆ. ಕ್ರೀಡಾ ಸಚಿವ ಮಾನ್ಸುಖ್ ಮಾಂಡವೀಯ, "ಇದು ಭಾರತೀಯ ಚೆಸ್ನಲ್ಲಿ ಸ್ವರ್ಣಯುಗವಾಗಿದೆ. ಭಾರತೀಯ ಚೆಸ್ ಶ್ರೇಷ್ಠ ಜಗತ್ತಿನಲ್ಲಿ ಮಿಂಚುತ್ತಿದೆ' ಎಂದು ಹೊಗಳಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, "ಒಂದು ದೇಶ, ಎರಡು ಚಿನ್ನ' ಎಂದು ಕೊಂಡಾಡಿದ್ದಾರೆ. ಲೋಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, "ಮೊಟ್ಟಮೊದಲ ಚೆಸ್ ಒಲಿಂಪಿಯಾಡ್ ಸ್ವರ್ಣ ಪದಕ ಗೆಲುವು ರೋಮಾಂಚನ ತಂದಿದೆ. ನಮ್ಮ ಚಾಂಪಿಯನ್ ಚೆಸ್ ಆಟಗಾರರ ಬಗ್ಗೆ ಹೆಮ್ಮೆಯಾಗುತ್ತಿದೆ. ಇದು ಭಾರತಕ್ಕೆ ಐತಿಹಾಸಿಕ ದಿನ' ಎಂದು ಪ್ರಶಂಸಿಸಿದ್ದಾರೆ.
3 ಟ್ರೋಫಿ ಗೆಲುವು
ಭಾರತ ತಂಡ ಚೆಸ್ ಒಲಿಂಪಿಯಾಡ್ ಗೆಲುವಿಗಾಗಿ ಒಟ್ಟು 3 ಟ್ರೋಫಿ ತನ್ನದಾಗಿಸಿಕೊಂಡಿತು. ಮುಕ್ತ ವಿಭಾಗದಲ್ಲಿ ಹ್ಯಾಮಿಲ್ಟನ್&ರಸೆಲ್ ಕಪ್ ಪಡೆದರೆ, ಮಹಿಳಾ ವಿಭಾಗದಲ್ಲಿ ವೆರಾ ಮೆನ್ಚಿಕ್ ಕಪ್ ಗೆದ್ದುಕೊಂಡಿತು. ಎರಡೂ ವಿಭಾಗ ಸೇರಿ ಸಮಗ್ರ ಪ್ರಶಸ್ತಿಯಾಗಿ ಗಪ್ರಿಂಡಶ್ವಿಲಿ ಕಪ್ ಪಡೆಯಿತು. ಇದನ್ನು ಭಾರತ 2022ರಲ್ಲೂ ಗೆದ್ದುಕೊಂಡಿತ್ತು. ಆದರೆ ಆಗ ನೀಡಲಾಗಿದ್ದ ರೋಲಿಂಗ್ ಟ್ರೋಫಿ, ಅಖಿಲ ಭಾರತ ಚೆಸ್ ಒಕ್ಕೂಟದ (ಎಐಸಿಎ್) ಕಚೇರಿಯಿಂದ ಕಾಣೆಯಾಗಿದ್ದು, ಈ ಸಂಬಂಧ ಪೊಲೀಸರಿಗೆ ದೂರು ಕೂಡ ದಾಖಲಾಗಿದೆ. ಹೀಗಾಗಿ ಈ ಬಾರಿ ಬದಲಿ ಡುಪ್ಲಿಕೇಟ್ ಟ್ರೋಫಿ ವಿತರಿಸಲಾಗಿದೆ.
ಬಂಗಾರದ ಬೇಟೆಗಾರರು
ಪುರುಷರು:
*ಡಿ. ಗುಕೇಶ್: ಚೆನ್ನೈನ 18 ವರ್ಷದ ಗುಕೇಶ್ 7ನೇ ವಯಸ್ಸಿನಲ್ಲಿ ಪಠ್ಯೇತರ ಚಟುವಟಿಕೆಯಾಗಿ ಚೆಸ್ ಕಲಿತು ಬಳಿಕ ಅದೇ ನೆಚ್ಚಿನ ಕ್ರೀಡೆಯಾಯಿತು ಮತ್ತು 2019ರಲ್ಲಿ 12 ವರ್ಷ 7 ತಿಂಗಳು, 17 ದಿನ ವಯಸ್ಸಿನಲ್ಲೇ ಗ್ರಾಂಡ್ಮಾಸ್ಟರ್ ಪಟ್ಟವೇರಿದ್ದರು. ತಾನಾಡಿದ 2ನೇ ಒಲಿಂಪಿಯಾಡ್ನಲ್ಲೇ ಈಗ ಚಿನ್ನ ಗೆದ್ದಿದ್ದು, ಮುಂದಿನ ಗುರಿ ವಿಶ್ವ ಚಾಂಪಿಯನ್ ಪಟ್ಟವಾಗಿದೆ.
ಪಂದ್ಯ: 10, ಜಯ: 8, ಡ್ರಾ 2.
*ಆರ್. ಪ್ರಜ್ಞಾನಂದ: ಚೆನ್ನೈನ 19 ವರ್ಷದ ಪ್ರಜ್ಞಾನಂದ ಅಕ್ಕ ವೈಶಾಲಿ ಸ್ಫೂರ್ತಿಯಲ್ಲೇ ಚೆಸ್ ಕಲಿತು 12 ವರ್ಷ 10 ತಿಂಗಳು, 13 ದಿನ ವಯಸ್ಸಿನಲ್ಲೇ ಗ್ರಾಂಡ್ಮಾಸ್ಟರ್ ಆಗಿದ್ದರು. ಕಳೆದ ವರ್ಷ ಚೆಸ್ ವಿಶ್ವಕಪ್ನಲ್ಲಿ ಆನಂದ್ ಬಳಿಕ ೈನಲ್ಗೇರಿದ 2ನೇ ಭಾರತೀಯರಾಗಿದ್ದರು. ಒಲಿಂಪಿಯಾಡ್ನಲ್ಲಿ ಬೋರ್ಡ್&2ರಲ್ಲಿ ಪ್ರಾಬಲ್ಯ ಮೆರೆದರು.
ಪಂದ್ಯ: 10, ಜಯ: 3, ಸೋಲು: 1, ಡ್ರಾ 6
*ಅರ್ಜುನ್ ಇರಿಗೈಸಿ: ಹಾಲಿ ವರ್ಷ ವಿಶ್ವನಾಥನ್ ಆನಂದ್ರನ್ನು ಹಿಂದಿಕ್ಕಿ ಭಾರತದ ಅಗ್ರ ಶ್ರೇಯಾಂಕಿತ ಚೆಸ್ ಆಟಗಾರ ಎನಿಸಿರುವ ತೆಲಂಗಾಣದ ವಾರಂಗಲ್ನ ಅರ್ಜುನ್, 14 ವರ್ಷ, 11 ತಿಂಗಳು, 13 ದಿನ ವಯಸ್ಸಿನಲ್ಲೇ ಗ್ರಾಂಡ್ಮಾಟರ್ ಎನಿಸಿದ್ದರು. ಒಲಿಂಪಿಯಾಡ್ನಲ್ಲಿ ಭರ್ಜರಿ ಾಮ್ರ್ನಲ್ಲಿದ್ದ 21 ವರ್ಷದ ಅರ್ಜುನ್, ಕೆಲ ರಿಸ್ಕ್ಗಳನ್ನು ಗೆದ್ದುಕೊಂಡು ಅದರಲ್ಲಿ ಯಶ ಸಾಧಿಸಿದರು.
ಪಂದ್ಯ: 11, ಜಯ: 9, ಡ್ರಾ: 2
*ವಿದಿತ್ ಗುಜರಾತಿ: ಮಹಾರಾಷ್ಟ್ರದ ನಾಸಿಕ್ನ 21 ವರ್ಷದ ವಿದಿತ್, 2013ರಲ್ಲಿ ಭಾರತದ 30ನೇ ಗ್ರಾಂಡ್ಮಾಸ್ಟರ್ ಎನಿಸಿದ್ದರು. ಕಳೆದ ವರ್ಷ ಕ್ಯಾಂಡಿಡೇಟ್ ಟೂರ್ನಿಯಲ್ಲೂ ಆಡಿದ್ದರು. ಒಲಿಂಪಿಯಾಡ್ನಲ್ಲಿ 4ನೇ ಬೋರ್ಡ್ನಲ್ಲಿ ಸ್ಥಿರ ನಿರ್ವಹಣೆ ತೋರಿ ಭಾರತದ ಗೆಲುವಿಗೆ ನೆರವಾದರು.
ಪಂದ್ಯ: 10, ಜಯ: 5, ಡ್ರಾ: 5.
*ಪಿ. ಹರಿಕೃಷ್ಣ: ಪುರುಷರ ತಂಡದ ಅತ್ಯಂತ ಹಿರಿಯ ಮತ್ತು ಅನುಭವಿ ಆಟಗಾರ ಆಂಧ್ರದ ಗುಂಟೂರಿನ 38 ವರ್ಷದ ಪಿ. ಹರಿಕೃಷ್ಣ. 2001ರಲ್ಲಿ 15ನೇ ವಯಸ್ಸಿನಲ್ಲೇ ಗ್ರಾಂಡ್ಮಾಸ್ಟರ್ ಪಟ್ಟವೇರಿ ಆಗಿನ ಅತಿಕಿರಿಯ ಸಾಧಕರಾಗಿದ್ದ ಹರಿಕೃಷ್ಣ, ಆನಂದ್ ಉತ್ತರಾಧಿಕಾರಿ ಎಂದೇ ಕರೆಯಲ್ಪಟ್ಟಿದ್ದರು. ಒಲಿಂಪಿಯಾಡ್ನಲ್ಲಿ ಆಡಿದ್ದು ಮೂರೇ ಪಂದ್ಯವಾದರೂ, ಯುವಕರ ಯಶಸ್ಸಿಗೆ ನೆರವಾದರು.
ಪಂದ್ಯ: 3, ಜಯ: 2, ಡ್ರಾ: 1
ಮಹಿಳೆಯರು:
*ದ್ರೋಣವಲ್ಲಿ ಹರಿಕಾ: 2004ರಿಂದ ಒಲಿಂಪಿಯಾಡ್ನಲ್ಲಿ ಆಡುತ್ತ ಬಂದಿರುವ ಆಂಧ್ರದ ಗುಂಟೂರಿನ 33 ವರ್ಷದ ಹರಿಕಾ, 2022ರಲ್ಲಿ ತುಂಬು ಗರ್ಭಿಣಿಯಾಗಿದ್ದ ನಡುವೆ ಆಡಿ ಕಂಚು ಗೆದ್ದಿದ್ದರು. ಈ ಬಾರಿ 2 ವರ್ಷದ ಮಗುವನ್ನು ಮನೆಯಲ್ಲಿ ಬಿಟ್ಟು ಆಡಿದ ಹರಿಕಾ ತಂಡಕ್ಕೆ ಅನುಭವದ ಬಲ ತುಂಬಿದರು.
ಪಂದ್ಯ: 9, ಜಯ: 3, ಸೋಲು: 3, ಡ್ರಾ: 3
*ಆರ್. ವೈಶಾಲಿ: ಹಂಪಿ, ಹರಿಕಾ ಬಳಿಕ ಭಾರತದ 3ನೇ ಮಹಿಳಾ ಗ್ರಾಂಡ್ಮಾಸ್ಟರ್ ಆಗಿರುವ 23 ವರ್ಷದ ವೈಶಾಲಿ, ಹಾಲಿ ವರ್ಷ ಕ್ಯಾಂಡಿಡೇಟ್ ಟೂರ್ನಿಯಲ್ಲಿ ಸತತ 5 ಪಂದ್ಯ ಗೆದ್ದು ಮಿಂಚಿದ್ದರು. ಒಲಿಂಪಿಯಾಡ್ನಲ್ಲಿ ಮಿಶ್ರ ಲಿತಾಂಶ ಕಂಡ ನಡುವೆ ಭಾರತದ ಜಯಕ್ಕೆ ನೆರವಾದರು.
ಪಂದ್ಯ: 10, ಜಯ: 4, ಸೋಲು: 2, ಡ್ರಾ: 4
*ದಿವ್ಯಾ ದೇಶ್ಮುಖ್: ಮಹಾರಾಷ್ಟ್ರದ ನಾಗ್ಪುರದ 18 ವರ್ಷದ ದಿವ್ಯಾ ತಂದೆ&ತಾಯಿ ಇಬ್ಬರೂ ವೈದ್ಯರು. ಒಲಿಂಪಿಯಾಡ್ನಲ್ಲಿ ಭಾರತದ ಅತ್ಯಂತ ಯಶಸ್ವಿ ಆಟಗಾರ್ತಿ ಎನಿಸಿದರು. ಇದರಿಂದ ಅವರೀಗ ಫಿಡೆ ಲೈವ್ ರೇಟಿಂಗ್ನಲ್ಲಿ ಕೊನೆರು ಹಂಪಿ ಬಳಿಕ ಭಾರತದ 2ನೇ ಶ್ರೇಯಾಂಕಿತ ಆಟಗಾರ್ತಿ ಎನಿಸಿದ್ದಾರೆ.
ಪಂದ್ಯ: 11, ಜಯ: 8, ಡ್ರಾ: 3
*ವಂತಿಕಾ ಅಗರ್ವಾಲ್: ದೆಹಲಿಯ 21 ವರ್ಷದ ವಂತಿಕಾ ಮಹಿಳಾ ವಿಭಾಗದ ಬೋರ್ಡ್ 4ರಲ್ಲಿ ಪ್ರಾಬಲ್ಯ ಸಾಧಿಸಿದರು. ಅಮೆರಿಕ ವಿರುದ್ಧದ ಕಠಿಣ ಹೋರಾಟದಲ್ಲಿ ಇರಿನಾ ಕ್ರಶ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಗೆದ್ದು ಭಾರತಕ್ಕೆ ನೆರವಾಗಿದ್ದರು. ಒಲಿಂಪಿಯಾಡ್ನಲ್ಲಿ ದಿವ್ಯಾ ಬಳಿಕ ಭಾರತದ ಅತ್ಯಂತ ಯಶಸ್ವಿ ಆಟಗಾರ್ತಿ ಎನಿಸಿದರು.
ಪಂದ್ಯ: 9, ಜಯ: 6, ಡ್ರಾ: 3
*ತಾನಿಯಾ ಸಚ್ದೇವ್: ಚೆಸ್ ಪಂದ್ಯಗಳ ವೀಕ್ಷಕವಿವರಣೆಗಾರ್ತಿಯಾಗಿಯೂ ಗಮನಸೆಳೆದಿರುವ ದೆಹಲಿಯ 38 ವರ್ಷದ ತಾನಿಯಾ, ಇತ್ತೀಚೆಗೆ ಹೆಚ್ಚಿನ ವೃತ್ತಿಪರ ಟೂರ್ನಿಗಳಲ್ಲಿ ಆಡಿಲ್ಲ. ಇದರ ನಡುವೆಯೂ ಒಲಿಂಪಿಯಾಡ್ನಲ್ಲಿ ಸಿಕ್ಕ ಅವಕಾಶಗಳಲ್ಲಿ ಭಾರತದ ಗೆಲುವಿಗೆ ನೆರವಾದರು. ಕೊನೆರು ಹಂಪಿ ಗೈರಿನಲ್ಲಿ ತಂಡಕ್ಕೆ ಬೇಕಿದ್ದ ಅನುಭವದ ಬಲ ತುಂಬಿದರು.
ಪಂದ್ಯ: 5, ಜಯ: 2, ಡ್ರಾ: 3
*ಇದು ಕನಸು ನನಸಾದ ಅನುಭವ ನೀಡಿದೆ. ಅಪಾರ ಸಂತೋಷವಾಗುತ್ತಿದೆ. ವೈಯಕ್ತಿಕವಾಗಿ ಮತ್ತು ತಂಡದ ಜತೆಗೆ ಈ ಗೆಲುವನ್ನು ಆನಂದಿಸುತ್ತಿರುವೆ.
| ಡಿ. ಗುಕೇಶ್
*ಇವರೆಲ್ಲರೂ ವೃತ್ತಿಪರ ಆಟಗಾರರು. ನಾನು ಅವರಿಗೆ ಹೆಚ್ಚಿನ ಸಲಹೆಗಳನ್ನು ನೀಡಿಲ್ಲ. ಹೇಗೆ ಆಡಬೇಕೆಂದು ಅವರಿಗೆ ಗೊತ್ತಿದೆ. ನಾನು ಅವರನ್ನು ತಂಡವಾಗಿ ಒಟ್ಟುಗೂಡಿಸುವಲ್ಲಿ ಕೆಲ ಸಿದ್ಧತೆಗಳನ್ನು ನಡೆಸಿದೆ. ಉಳಿದಂತೆ ಹಿಂದೆ ಕುಳಿತು ಅವರ ಆಟವನ್ನು ಆನಂದಿಸಿದೆ.
| ಶ್ರೀನಾಥ್ ನಾರಾಯಣನ್, ಭಾರತ ಪುರುಷರ ತಂಡದ ನಾಯಕ
*ನಾನು 14ನೇ ವಯಸ್ಸಿನಲ್ಲೇ ಮೊದಲ ಬಾರಿ ಒಲಿಂಪಿಯಾಡ್ನಲ್ಲಿ ಆಡಿದ್ದೆ. ಚಿನ್ನದ ಪದಕ ಗೆಲುವಿನ ತಂಡದ ಭಾಗವಾಗುವುದು ಪ್ರತಿ ಚೆಸ್ ಆಟಗಾರರ ಕನಸು. ನಾನು ಇದನ್ನು ನನಸಾಗಿಸಿಕೊಳ್ಳಲು 11 ಒಲಿಂಪಿಯಾಡ್ಗಳಲ್ಲಿ ಆಡಬೇಕಾಯಿತು. ಆದರೆ ಇಲ್ಲಿಂದ ಮುಂದೆ ಭಾರತಕ್ಕೆ ಹಲವು ಸ್ವರ್ಣ ಪದಕಗಳು ಒಲಿದುಬರುವ ಭರವಸೆ ಇದೆ.
| ಪಿ. ಹರಿಕೃಷ್ಣ
*ನಾನು ಒಲಿಂಪಿಯಾಡ್ನಲ್ಲಿ 20 ವರ್ಷಗಳ ಕಾಲ ಆಡಿದ ಬಳಿಕ ಈ ಸ್ವರ್ಣ ಪದಕವನ್ನು ನೋಡುತ್ತಿರುವೆ. ನಮ್ಮ ತಂಡದ ಆಟಗಾರ್ತಿಯರು ಅಮೋವಾಗಿ ಆಡಿದರು. ನನ್ನ ನಿರ್ವಹಣೆ ತೃಪ್ತಿಕರ ಎನಿಸಲಿಲ್ಲ. ಆದರೆ ನಮ್ಮ ತಂಡದ ಸ್ವರ್ಣ ಗೆಲುವು ನಾನು ಎಲ್ಲವನ್ನೂ ಮರೆಯುವಂತೆ ಮಾಡಿತು.
| ದ್ರೋಣವಲ್ಲಿ ಹರಿಕಾ
*ಕೊನೇ 2 ಸುತ್ತುಗಳು ನಮಗೆ ನಿರ್ಣಾಯಕವಾಗಿದ್ದವು. ದಿವ್ಯಾ ಮತ್ತು ವಂತಿಕಾ ಅಮೋ ಆಟವಾಡಿದರು. ವೈಶಾಲಿ ಕೊನೆಯಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಿದರು. ಹರಿಕಾ ಮತ್ತು ತಾನಿಯಾ ನಮಗೆ ಉತ್ತಮ ಆರಂಭ ಒದಗಿಸಿದರು.
| ಅಭಿಜಿತ್ ಕುಂಟೆ, ಮಹಿಳಾ ತಂಡದ ನಾಯಕ