ಇಂದು ದುಲೀಪ್​ ಟ್ರೋಫಿ ವಿಜೇತರ ನಿರ್ಧಾರ; ರೇಸ್​ನಲ್ಲಿವೆ ಭಾರತ ಎ, ಸಿ ತಂಡಗಳು...

web duleep
Published on

ಅನಂತರಪುರ: ರಿಯಾನ್​ ಪರಾಗ್​ (73) ಮತ್ತು ಶಾಶ್ವತ್​ ರಾವತ್​ (53) ಅರ್ಧಶತಕಗಳ ಬಲದಿಂದ ಭಾರತ ಎ ತಂಡ ದುಲೀಪ್​ ಟ್ರೋಫಿ ದೇಶೀಯ ಕ್ರಿಕೆಟ್​ ಟೂರ್ನಿಯ 3ನೇ ಹಾಗೂ ನಿರ್ಣಾಯಕ ಅಂತಿಮ ಸುತ್ತಿನ ಪಂದ್ಯದಲ್ಲಿ ಭಾರಿ ಮುನ್ನಡೆ ಸಾಧಿಸಿ ಗೆಲುವಿನತ್ತ ದೃಷ್ಟಿನೆಟ್ಟಿದೆ. ಈ ಮೂಲಕ ಮಯಾಂಕ್​ ಅಗರ್ವಾಲ್​ ಬಳಗ ಪ್ರಶಸ್ತಿಯ ಮೇಲೂ ಕಣ್ಣಿಟ್ಟಿದೆ.

ಆರ್​ಡಿಟಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶನಿವಾರ 7 ವಿಕೆಟ್​ಗೆ 216 ರನ್​ಗಳಿಂದ 3ನೇ ದಿನದಾಟ ಮುಂದುವರಿಸಿದ ಭಾರತ ಸಿ ತಂಡ 71 ಓವರ್​ಗಳಲ್ಲಿ 234 ರನ್​ಗಳಿಗೆ ಸರ್ವಪತನ ಕಂಡು, ಮೊದಲ ಇನಿಂಗ್ಸ್​ನಲ್ಲಿ 63 ರನ್​ ಮುನ್ನಡೆ ಬಿಟ್ಟುಕೊಟ್ಟಿತು. ನಂತರ 2ನೇ ಇನಿಂಗ್ಸ್​ ಆರಂಭಿಸಿದ ಭಾರತ ಎ ತಂಡ ದಿನದಂತ್ಯಕ್ಕೆ 64 ಓವರ್​ಗಳಲ್ಲಿ 6 ವಿಕೆಟ್​ಗೆ 270 ರನ್​ ಮುನ್ನಡೆ ಸಾಧಿಸಿದೆ. ಈ ಮೂಲಕ ಭಾರತ ಎ ತಂಡ ಒಟ್ಟು 333 ರನ್​ ಮುನ್ನಡೆಯಲ್ಲಿದ್ದು, ಕೊನೇ ದಿನ ಭಾರತ ಸಿ ತಂಡವನ್ನು ಬೇಗನೆ ಆಲೌಟ್​ ಮಾಡಿ ಗೆಲುವು ಸಾಧಿಸಲು ಪ್ರಯತ್ನಿಸುವ ನಿರೀಕ್ಷೆ ಇದೆ.

ಭಾರತ ಎ: 297 ಮತ್ತು 64 ಓವರ್​ಗಳಲ್ಲಿ 6 ವಿಕೆಟ್​ಗೆ 270 (ಪ್ರಥಮ್​ 11, ಮಯಾಂಕ್​ 34, ತಿಲಕ್​ 19, ಪರಾಗ್​ 73, ಶಾಶ್ವತ್​ 53, ಕುಶಾಗ್ರ 40*, ತನುಷ್​ 13*, ಅಂಶುಲ್​ ಕಂಬೋಜ್​ 52ಕ್ಕೆ 2, ಗೌರವ್​ ಯಾದವ್​ 60ಕ್ಕೆ 2, ಮಾನವ್​ ಸುಥರ್​ 75ಕ್ಕೆ 2), ಭಾರತ ಸಿ: 71 ಓವರ್​ಗಳಲ್ಲಿ 234 (ಪುಲ್ಕಿತ್​ 41, ವೈಶಾಕ್​ 18, ಆವೇಶ್​ ಖಾನ್​ 64ಕ್ಕೆ 3, ಅಕಿಬ್​ ಖಾನ್​ 43ಕ್ಕೆ 3, ಮುಲಾನಿ 30ಕ್ಕೆ 2).

ಶ್ರೇಯಸ್​ ಬಳಗಕ್ಕೆ ರಿಕಿ ಆಧಾರ

ಸತತ 2ನೇ ಪಂದ್ಯದಲ್ಲಿ ಶತಕದತ್ತ ಸಾಗಿರುವ ರಿಕಿ ಭುಯಿ (90*) ಭರ್ಜರಿ ಬ್ಯಾಟಿಂಗ್​ ನೆರವಿನಿಂದ ಶ್ರೇಯಸ್​ ಅಯ್ಯರ್​ ಸಾರಥ್ಯದ ಭಾರತ ಡಿ ತಂಡ ಅಭಿಮನ್ಯು ಈಶ್ವರನ್​ ನಾಯಕತ್ವದ ಭಾರತ ಬಿ ವಿರುದ್ಧ ಬಲಿಷ್ಠ ಬಲಿಷ್ಠ ಸ್ಥಿತಿಯಲ್ಲಿ ನೆಲೆಸಿದೆ. ಆರ್​ಡಿಟಿಎಸ್​ ಬಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 6 ವಿಕೆಟ್​ಗೆ 210 ರನ್​ಗಳಿಂದ 3ನೇ ದಿನದಾಟ ಆರಂಭಿಸಿದ ಭಾರತ ಬಿ ತಂಡ, ವಾಷಿಂಗ್ಟನ್​ ಸುಂದರ್​ (87) ಹೋರಾಟದ ನಡುವೆಯೂ 282 ರನ್​ಗಳಿಗೆ ಸರ್ವಪತನ ಕಂಡಿತು. ಇದರಿಂದ ಮೊದಲ ಇನಿಂಗ್ಸ್​ನಲ್ಲಿ 67 ರನ್​ ಮುನ್ನಡೆ ಸಾಧಿಸಿದ ಭಾರತ ಡಿ ತಂಡ ದಿನದಂತ್ಯಕ್ಕೆ ತನ್ನ 2ನೇ ಇನಿಂಗ್ಸ್​ನಲ್ಲಿ 5 ವಿಕೆಟ್​ಗೆ 244 ರನ್​ ಗಳಿಸಿದ್ದು, ಒಟ್ಟಾರೆ 311 ರನ್​ ಮುನ್ನಡೆ ಸಾಧಿಸಿದೆ. ಇದರಿಂದ ಪ್ರಶಸ್ತಿ ಗೆಲುವಿಗೆ ಈ ಪಂದ್ಯವನ್ನು ಗೆಲ್ಲಲೇಬೇಕಿರುವ ಭಾರತ ಬಿ ತಂಡ ತನ್ನ ಆಸೆಯನ್ನು ಬಹುತೇಕ ಕೈಚೆಲ್ಲುವಂತಾಗಿದೆ.

ಭಾರತ ಡಿ: 349 ಮತ್ತು 44 ಓವರ್​ಗಳಲ್ಲಿ 5 ವಿಕೆಟ್​ಗೆ 244 (ರಿಕಿ ಭುಯಿ 90*, ಶ್ರೇಯಸ್​ 50, ಸ್ಯಾಮ್ಸನ್​ 45, ಆಕಾಶ್​ ಸೇನ್​ಗುಪ್ತಾ 28*, ಮುಕೇಶ್​ 80ಕ್ಕೆ 3, ನವದೀಪ್​ ಸೈನಿ 40ಕ್ಕೆ 2), ಭಾರತ ಬಿ: 76.2 ಓವರ್​ಗಳಲ್ಲಿ 282 (ವಾಷಿಂಗ್ಟನ್​ 87, ಸೌರಭ್​ ಕುಮಾರ್​ 73ಕ್ಕೆ 5, ಅರ್ಷದೀಪ್​ 50ಕ್ಕೆ 3, ಆದಿತ್ಯ 52ಕ್ಕೆ 2).

ಇಂದು ವಿಜೇತರ ನಿರ್ಧಾರ

ದುಲೀಪ್​ ಟ್ರೋಫಿಯಲ್ಲಿ ಈ ಬಾರಿ ಫೈನಲ್​ ಪಂದ್ಯ ಇಲ್ಲ. 3 ಸುತ್ತಿನ ಲೀಗ್​ ಹಂತದ ಬಳಿಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸುವ ತಂಡ ಪ್ರಶಸ್ತಿ ಜಯಿಸಲಿದೆ. ಹೀಗಾಗಿ ಕೊನೇ ಸುತ್ತಿನ ಪಂದ್ಯಗಳ ಕೊನೇ ದಿನವಾದ ಭಾನುವಾರ ಪ್ರಶಸ್ತಿ ವಿಜೇತರ ನಿರ್ಧಾರವಾಗಲಿದೆ. ಎ ತಂಡ ಕೊನೇ ದಿನ ಗೆಲುವು ದಾಖಲಿಸದ ಹೊರತಾಗಿ ಸದ್ಯಕ್ಕೆ ಸಿ ತಂಡವೇ ಪ್ರಶಸ್ತಿ ಗೆಲುವಿನ ನೆಚ್ಚಿನ ತಂಡವೆನಿಸಿದೆ. ಸಿ ತಂಡ ಸದ್ಯ 9 ಅಂಕ ಹೊಂದಿದ್ದು, ಡಿ ಎದುರು ಇನಿಂಗ್ಸ್​ ಹಿನ್ನಡೆಯ ನಡುವೆಯೂ ಡ್ರಾ ಸಾಧಿಸಿದರೆ 1 ಅಂಕ ಗಳಿಸಲಿದ್ದು ಒಟ್ಟು 10 ಅಂಕದೊಂದಿಗೆ ಪ್ರಶಸ್ತಿ ಜಯಿಸುವ ಅವಕಾಶ ಹೊಂದಿದೆ. ಎ ತಂಡ ಸದ್ಯ 6 ಅಂಕ ಹೊಂದಿದ್ದು, ಸಿ ಎದುರು ಗೆಲುವು ದಾಖಲಿಸಿದರೆ 12 ಅಂಕಗಳೊಂದಿಗೆ ಪ್ರಶಸ್ತಿ ಜಯಿಸುವ ಅವಕಾಶ ಹೊಂದಿದೆ. ಬಿ ತಂಡ ಸದ್ಯ 7 ಅಂಕ ಹೊಂದಿದ್ದು, ಡಿ ಎದುರು ಇನಿಂಗ್ಸ್​ ಹಿನ್ನಡೆ ಅನುಭವಿಸಿರುವುದರಿಂದ, ಕೊನೇ ದಿನ ಅಚ್ಚರಿಯ ಗೆಲುವು ದಾಖಲಿಸಿದರಷ್ಟೇ ಪ್ರಶಸ್ತಿ ಜಯಿಸುವ ಅವಕಾಶ ಹೊಂದಿದೆ. ಆರಂಭಿಕ 2 ಪಂದ್ಯಗಳಲ್ಲಿ ಸೋತಿರುವ ಡಿ ತಂಡ ಕೊನೇ ಪಂದ್ಯದಲ್ಲಿ ಗೆದ್ದರೂ, ಪ್ರಶಸ್ತಿ ಒಲಿಸಿಕೊಳ್ಳುವ ಅವಕಾಶವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net