ರಣಜಿಯಲ್ಲಿ ಆಡಲು ಬಿಸಿಸಿಐ ಸೂಚನೆ; ಟೆಸ್ಟ್​ ಕ್ರಿಕೆಟ್​ಗೆ ಹಾರ್ದಿಕ್​ ಪಾಂಡ್ಯ ಪುನರಾಗಮನ?

web hp test
Published on

ನವದೆಹಲಿ: ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಸುದೀರ್ ಸಮಯದ ಬಳಿಕ ಟೆಸ್ಟ್​ ಕ್ರಿಕೆಟ್​ಗೆ ಮರಳಲಿದ್ದಾರೆ ಎಂದು ವರದಿಯಾಗಿದೆ. ಟೆಸ್ಟ್​ ಕ್ರಿಕೆಟ್​ ಆಡುವುದಕ್ಕೆ ಪೂರ್ವಭಾವಿಯಾಗಿ ಹಾರ್ದಿಕ್​ ಪಾಂಡ್ಯ ಮುಂಬರುವ ರಣಜಿ ಟ್ರೋಫಿಯಲ್ಲಿ ಬರೋಡ ತಂಡದ ಪರ ಆಡಲಿದ್ದಾರೆ ಎಂದು ಹೇಳಲಾಗಿದೆ. ವರ್ಷಾಂತ್ಯದ ಮಹತ್ವದ ಆಸ್ಟ್ರೆಲಿಯಾ ಪ್ರವಾಸದಲ್ಲಿ ಹಾರ್ದಿಕ್​ ನಿರ್ಣಾಯಕ ಪಾತ್ರ ನಿರ್ವಹಿಸುವ ಸಾಧ್ಯತೆ ಇದೆ.

ಹಾರ್ದಿಕ್​ ಪಾಂಡ್ಯ ಕಳೆದ 6 ವರ್ಷಗಳಿಂದ ಟೆಸ್ಟ್​ ಪಂದ್ಯ ಆಡಿಲ್ಲ. 2018ರ ಆಗಸ್ಟ್​-ಸೆಪ್ಟೆಂಬರ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಸೌಥಾಂಪ್ಟನ್​ನಲ್ಲಿ ಕೊನೇ ಟೆಸ್ಟ್​ ಆಡಿದ್ದರು. ನಂತರದಲ್ಲಿ ಫಿಟ್ನೆಸ್​ ಸಮಸ್ಯೆಯಿಂದಾಗಿ ಅವರು ಟೆಸ್ಟ್​ ಕ್ರಿಕೆಟ್​ನಿಂದ ಸಂಪೂರ್ಣವಾಗಿ ದೂರ ಉಳಿದುಕೊಂಡಿದ್ದಾರೆ.

30 ವರ್ಷದ ಹಾರ್ದಿಕ್​ ಟೆಸ್ಟ್​ ಕ್ರಿಕೆಟ್​ಗೆ ಮರಳಿದರೆ ಭಾರತ ತಂಡ ತಂಡಕ್ಕೆ ವರ್ಷಾಂತ್ಯದ ಆಸ್ಟ್ರೆಲಿಯಾದ ಪ್ರವಾಸದ 5 ಪಂದ್ಯಗಳ ಬಾರ್ಡರ್​&ಗಾವಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯಲ್ಲಿ ಹೆಚ್ಚಿನ ನೆರವಾಗಲಿದೆ. ಇದೇ ಕಾರಣಕ್ಕಾಗಿ ಬಿಸಿಸಿಐ, ಮುಂಬರುವ ರಣಜಿ ಟ್ರೋಫಿಯಲ್ಲಿ ಆಡುವಂತೆ ಹಾರ್ದಿಕ್​ಗೆ ಸೂಚಿಸಿದೆ ಎನ್ನಲಾಗಿದೆ. ಇದೇ ಕಾರಣದಿಂದಾಗಿ ಹಾರ್ದಿಕ್​ ಈಗಾಗಲೆ ಕೆಂಪು ಚೆಂಡಿನಲ್ಲಿ ಬೌಲಿಂಗ್​ ಅಭ್ಯಾಸವನ್ನೂ ಆರಂಭಿಸಿದ್ದಾರೆ. ಕಳೆದ ವಾರ ಅವರು ಇಂಗ್ಲೆಂಡ್​ನಲ್ಲಿ ಕೆಂಪು ಚೆಂಡಿನಲ್ಲಿ ಬೌಲಿಂಗ್​ ಮಾಡುತ್ತಿರುವ ವಿಡಿಯೋ ಕೂಡ ವೈರಲ್​ ಆಗಿತ್ತು. ಸ್ವತಃ ಹಾರ್ದಿಕ್​ ಕೂಡ ಟೆಸ್ಟ್​ ಕ್ರಿಕೆಟ್​ಗೆ ಮರಳಲು ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ.

ಆಸ್ಟ್ರೆಲಿಯಾ ಪ್ರವಾಸಕ್ಕೆ ಪೂರ್ವಭಾವಿಯಾಗಿ ಹಾರ್ದಿಕ್​ ಪಾಂಡ್ಯ ತವರಿನಲ್ಲಿ ನಡೆಯಲಿರುವ ನ್ಯೂಜಿಲೆಂಡ್​ ವಿರುದ್ಧದ 3 ಟೆಸ್ಟ್​ ಪಂದ್ಯಗಳ ಸರಣಿಗೂ ಭಾರತ ತಂಡದ ಭಾಗವಾದರೆ ಅಚ್ಚರಿ ಇಲ್ಲ ಎನ್ನಲಾಗಿದೆ. ಹಾರ್ದಿಕ್​ ಪಾಂಡ್ಯ ಇದುವರೆಗೆ ಭಾರತ ಪರ 11 ಟೆಸ್ಟ್​ ಆಡಿದ್ದು, 1 ಶತಕ, 4 ಅರ್ಧಶತಕ ಸಹಿತ 532 ರನ್​ ಗಳಿಸಿದ್ದಾರೆ. ಜತೆಗೆ 17 ವಿಕೆಟ್​ ಕಬಳಿಸಿದ್ದಾರೆ. ಇದರಲ್ಲಿ ಒಂದು 5 ವಿಕೆಟ್​ ಗೊಂಚಲು ಕೂಡ ಸೇರಿದೆ.

ಟಿ20 ವಿಶ್ವಕಪ್​ ನಂತರ ಶ್ರೀಲಂಕಾ ಪ್ರವಾಸದ ಚುಟುಕು ಕ್ರಿಕೆಟ್​ ಸರಣಿಯಲ್ಲಿ ಕೊನೆಯದಾಗಿ ಭಾರತ ಪರ ಆಡಿರುವ ಹಾರ್ದಿಕ್​ ಇನ್ನು ಅಕ್ಟೋಬರ್​ನಲ್ಲಿ ಬಾಂಗ್ಲಾ ವಿರುದ್ಧದ ಟಿ20 ಸರಣಿಯಲ್ಲಿ ಆಡುವ ನಿರೀಕ್ಷೆ ಇದೆ. ನಂತರ ಅಕ್ಟೋಬರ್​ 11ರಿಂದ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್​ ಟೂರ್ನಿ ಶುರುವಾಗಲಿದೆ. ಬರೋಡ ತಂಡ ಮುಂಬೈ ವಿರುದ್ಧ ಮೊದಲ ಪಂದ್ಯ ಆಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net