

ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ನಮ್ಮ ಶತ್ರು ರಾಷ್ಟ್ರ ಪಾಕಿಸ್ತಾನದಲ್ಲು ಕೂಡ ಅಭಿಮಾನಿ ಬಳಗ ಪಡೆದ ಏಕೈಕ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಎಂಟ್ರಿಯಾದ ನಂತರ ಅತ್ಯಂತ ಸ್ಥಿರ ಪ್ರದರ್ಶನ ನೀಡಿದ ಕೆಲವೇ ಕ್ರಿಕೆಟಿಗರಲ್ಲಿ ಕೊಹ್ಲಿ ಕೂಡ ಒಬ್ಬರು.
ಭಾರತೀಯ ಕ್ರಿಕೆಟ್ನಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚುತ್ತಿರುವ ಕೊಹ್ಲಿ ಸದ್ಯ ವಿಶ್ವ ಕ್ರಿಕೆಟ್ನ ಪ್ರಮುಖ ಮುಖವಾಗಿದ್ದಾರೆ. ಇಂತಹ ಮಹಾನ್ ಆಟಗಾರನಿಗೆ ಚಿಕ್ಕಂದಿನಲ್ಲಿ ಕ್ರಿಕೆಟ್ ಕಲಿಸಿದ ಗುರು ಯಾರೆಂದರೆ ಅವರೇ ರಾಜ್ಕುಮಾರ್ ಶರ್ಮಾ. ವಿರಾಟ್ ಕೊಹ್ಲಿ ಬಾಲ್ಯದಲ್ಲಿ ಕೋಚಿಂಗ್ ಪಡೆಯುವಾಗ ಹೇಗಿರುತ್ತಿದ್ದರು ಎಂಬ ಕುತೂಹಲಕಾರಿ ಸಂಗತಿಗಳನ್ನು ಗುರುಪೂರ್ಣಿಮೆಯ ದಿನ ರಾಜ್ಕುಮಾರ್ ಅವರು ಬಿಚ್ಚಿಟ್ಟಿದ್ದಾರೆ.
ಕೊಹ್ಲಿ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗ. ತರಬೇತಿಗಾಗಿ ತಮ್ಮ ಬಳಿಗೆ ಬಂದಾಗ ಎಲ್ಲರಿಗಿಂತ ಆತ ಚುರುಕಾಗಿರುತ್ತಿದ್ದರು ಮತ್ತು ಆಗಲೇ ಅತ್ಯಂತ ಶಕ್ತಿಶಾಲಿ ಹೊಡೆತಗಳನ್ನು ಬಾರಿಸುತ್ತಿದ್ದರು. ಅಲ್ಲದೆ, ತನ್ನ ಆಟದ ಶೈಲಿಯಿಂದ ಆ ಸಮಯದಲ್ಲೇ ಎಲ್ಲರನ್ನು ತನ್ನತ್ತ ಸೆಳೆಯುತ್ತಿದ್ದರು ಎಂದು ರಾಜ್ಕುಮಾರ್ ಅವರು ತಮ್ಮ ಶಿಷ್ಯನ ಗುಣಗಾನ ಮಾಡಿದರು.
ಆ ಕಾಲದಲ್ಲಿ ತನ್ನ ಹಿರಿಯ ಆಟಗಾರರಿಗಿಂತ ಹೆಚ್ಚಿನ ಬಲವನ್ನು ವಿರಾಟ್ ಹೊಂದಿದ್ದರು. ಅಲ್ಲದೆ, ತನ್ನ ಸಹಪಾಠಿಗಳಿಗಿಂತಲೂ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಯಾವುದೇ ಪಂದ್ಯದಲ್ಲಿ ಕ್ರೀಸ್ಗೆ ಇಳಿದರೆ ಔಟ್ ಆಗುವುದು ತುಂಬಾ ಅಪರೂಪವಾಗಿತ್ತು. ಬಾಲ್ಯದಿಂದಲೂ ಸುದೀರ್ಘ ಇನ್ನಿಂಗ್ಸ್ ಆಡುವ ಅಭ್ಯಾಸ ಕೊಹ್ಲಿಗಿದೆ ಎಂದು ರಾಜ್ಕುಮಾರ್ ತಿಳಿಸಿದರು.
ತರಬೇತಿ ವೇಳೆ ಇದು ನಿಮಗೆ ಕೊನೆಯ ಸೆಷನ್ ಎಂದು ಹೇಳಿದರೆ, ಇಲ್ಲ ಸಾರ್, ಇನ್ನೂ ಎರಡು ಸೆಷನ್ಸ್ ಕೊಡಿ ಎಂದು ಕಠಿಣ ಅಭ್ಯಾಸ ಮಾಡುತ್ತಿದ್ದರು. ಕೊಹ್ಲಿಗೆ ಉತ್ತಮವಾಗಿ ಕಲಿಯುವ ಗುಣವಿತ್ತು. ಹೆಚ್ಚು ಕಾಲ ಕ್ರಿಕೆಟ್ನಲ್ಲೇ ಮುಳುಗಿರುತ್ತಿದ್ದರು. ಹೇಳಿದ ತಕ್ಷಣ ಅದನ್ನು ಗ್ರಹಿಸುತ್ತಿದ್ದರು ಎನ್ನುವ ಮೂಲಕ ಕೊಹ್ಲಿ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ರಾಜ್ಕುಮಾರ್ ಅವರು ಬಹಿರಂಗಪಡಿಸಿದ್ದಾರೆ. (ಏಜೆನ್ಸೀಸ್)