

*ಪ್ರಸಾದ್ ಶೆಟ್ಟಿಗಾರ್ ಬೆಂಗಳೂರು
ಸಮರ್ಥ ನಾಯಕತ್ವ, ಅನುಭವಿ ಬ್ಯಾಟರ್ಗಳ ಜವಾಬ್ದಾರಿಯುತ ಆಟ, ಆಲ್ರೌಂಡರ್ಗಳ ಉಪಯುಕ್ತ ಕೊಡುಗೆ, ನಾಲ್ವರು ಸ್ಪಿನ್ನರ್ಗಳಿಂದ ಎದುರಾಳಿಗಳಿಗೆ ಕಡಿವಾಣ, ಫಿನಿಷರ್ ಪಾತ್ರದಲ್ಲೂ ಮಿಂಚಿದ ವಿಕೆಟ್ ಕೀಪರ್... ಈ ಯಶಸ್ವಿ ಕಾರ್ಯತಂತ್ರಗಳ ಮೂಲಕ ಭಾರತ ತಂಡ "ಮಿನಿ ವಿಶ್ವಕಪ್' ಖ್ಯಾತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಅಜೇಯವಾಗಿ ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನೀಗ "ಮೆಗಾ ವಿಶ್ವಕಪ್' ಅಂದರೆ 2027ರ ಏಕದಿನ ವಿಶ್ವಕಪ್ನತ್ತ ಭಾರತ ಗಮನಹರಿಸಬೇಕಾಗಿದೆ. ಏಕದಿನ ವಿಶ್ವಕಪ್ಗೆ ಇನ್ನೂ ಎರಡು ವರ್ಷಗಳು ಬಾಕಿ ಇರುವುದರಿಂದ ಹಾಲಿ ತಂಡದಲ್ಲೇ ಕೆಲ ಬದಲಾವಣೆಗಳನ್ನು ಮಾಡಿ ಇನ್ನಷ್ಟು ಬಲಿಷ್ಠ ತಂಡವನ್ನು ರೂಪಿಸುವ ಸವಾಲು ಭಾರತದ ಮುಂದಿದೆ.
2027ರ ಅಕ್ಟೋಬರ್ನಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಆತಿಥ್ಯದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಅಲ್ಲಿಯವರೆಗೆ ಭಾರತ ತಂಡ ಕನಿಷ್ಠ 27 ಏಕದಿನ ಪಂದ್ಯಗಳನ್ನು ಆಡಲಿದ್ದು, ಬಲಿಷ್ಠ ತಂಡವನ್ನು ಕಟ್ಟಲು ಈ ಪಂದ್ಯಗಳನ್ನು ಬಳಸಿಕೊಳ್ಳಬೇಕಿದೆ.
ಕಳೆದ ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಗಳಲ್ಲಿ ಭಾರತ ಸ್ಪಿನ್ ಅಸ್ತ್ರವನ್ನು ಯಶಸ್ವಿಯಾಗಿ ಬಳಸಿಕೊಂಡು ಯಶ ಸಾಧಿಸಿದೆ. ಆದರೆ 2027ರ ಏಕದಿನ ವಿಶ್ವಕಪ್, ವೇಗದ ಬೌಲಿಂಗ್ ಸ್ನೇಹಿ ಎನಿಸಿರುವ ಆಫ್ರಿಕಾ ನೆಲದಲ್ಲಿ ನಡೆಯಲಿರುವುದರಿಂದ ಭಾರತ ವೇಗದ ಬೌಲಿಂಗ್ ವಿಭಾಗವನ್ನು ಬಲಪಡಿಸಲು ಮತ್ತು ವೇಗದ ಬೌಲಿಂಗ್ ಆಲ್ರೌಂಡರ್ಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಈಗಿನ ಕಾಂಬಿನೇಷನ್ ಮತ್ತು ಕಾರ್ಯತಂತ್ರದಲ್ಲೇ ಹರಿಣಗಳ ನಾಡಿಗೆ ಹೋದರೆ ಯಶಸ್ಸು ಸಾಧಿಸುವುದು ಕಷ್ಟವೆನಿಸಬಹುದು.
ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡದಲ್ಲಿ ನಾಯಕ ರೋಹಿತ್ ಶರ್ಮ 2027ರ ವಿಶ್ವಕಪ್ವರೆಗೆ ಮುಂದುವರಿಯುವ ಖಚಿತತೆ ಇಲ್ಲ. ಆದರೆ 36 ವರ್ಷದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಲಿ ಫಾರ್ಮ್ ಮತ್ತು ಫಿಟ್ನೆಸ್ನಲ್ಲಿ 2027ರ ವಿಶ್ವಕಪ್ನಲ್ಲೂ ಆಡುವ ವಿಶ್ವಾಸವಿಡಬಹುದು. ಆದರೆ 36 ವರ್ಷದ ಆಲ್ರೌಂಡರ್ ರವೀಂದ್ರ ಜಡೇಜಾ ಮತ್ತು 34 ವರ್ಷದ ವೇಗಿ ಮೊಹಮದ್ ಶಮಿ 2027ರ ವಿಶ್ವಕಪ್ವರೆಗೆ ತಂಡದಲ್ಲಿ ಉಳಿದುಕೊಳ್ಳುವ ಸಾಧ್ಯತೆ ಇಲ್ಲ.
ಆರಂಭಿಕನಾಗಿ ಶುಭಮಾನ್ ಗಿಲ್, 4ನೇ ಕ್ರಮಾಂಕದ ಬ್ಯಾಟರ್ ಆಗಿ ಶ್ರೇಯಸ್ ಅಯ್ಯರ್, ವಿಕೆಟ್ ಕೀಪರ್ ಆಗಿ ಕೆಎಲ್ ರಾಹುಲ್, ಸ್ಪಿನ್ ಬೌಲಿಂಗ್ ಆಲ್ರೌಂಡರ್ ಆಗಿ ಅಕ್ಷರ್ ಪಟೇಲ್, ತಜ್ಞ ಸ್ಪಿನ್ನರ್ ಆಗಿ ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ವೇಗಿಗಳಾಗಿ ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್ 2027ರ ವಿಶ್ವಕಪ್ವರೆಗೂ ಮುಂದುವರಿಯಬಹುದಾಗಿದೆ. ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಫಿಟ್ ಆಗಿದ್ದರೆ ಭಾರತ ಇನ್ನಷ್ಟು ಬಲ ಪಡೆದುಕೊಳ್ಳಲಿದೆ. ಈ ನಡುವೆ ಹಾರ್ದಿಕ್ ಪಾಂಡ್ಯ ಜತೆಗೆ ವೇಗದ ಬೌಲಿಂಗ್ ಆಲ್ರೌಂಡರ್ ಆಗಿ ನಿತೀಶ್ ಕುಮಾರ್ ರೆಡ್ಡಿ ಅವರನ್ನೂ ಬೆಳೆಸುವ ಭಾರತ ಗಮನಹರಿಸಿದರೆ, ದ. ಆಫ್ರಿಕಾದ ಪಿಚ್ಗಳಲ್ಲಿ ನೆರವಿಗೆ ಬರಲಿದ್ದಾರೆ.
ಇನ್ನು ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್, ಕೀಪರ್ ರಿಷಭ್ ಪಂತ್, ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಮುಂತಾದ ಕೆಲ ಆಟಗಾರರನ್ನು ಭಾರತ ಮೀಸಲು ಬಳಗದಲ್ಲಿ ಬಳಸಿಕೊಳ್ಳಬೇಕಿದೆ. ಆಗ ಮೂರನೇ ಬಾರಿ ಏಕದಿನ ವಿಶ್ವಕಪ್ ಗೆಲ್ಲುವ ನಿಟ್ಟಿನಲ್ಲೂ ಭಾರತ ಬಲಿಷ್ಠ ತಂಡವನ್ನು ಕಟ್ಟಬಹುದು.
ಚಾಂಪಿಯನ್ಸ್ ಟ್ರೋಫಿ ಗೆಲುವಿಗೆ ಭಾರತೀಯರ ಕೊಡುಗೆ:
ರೋಹಿತ್ ಶರ್ಮ: 180 ರನ್
ಶುಭಮಾನ್ ಗಿಲ್: 188 ರನ್
ವಿರಾಟ್ ಕೊಹ್ಲಿ: 218 ರನ್
ಶ್ರೇಯಸ್ ಅಯ್ಯರ್: 243 ರನ್
ಅಕ್ಷರ್ ಪಟೇಲ್, 140 ರನ್, 5 ವಿಕೆಟ್
ಕೆಎಲ್ ರಾಹುಲ್: 140 ರನ್
ಹಾರ್ದಿಕ್ ಪಾಂಡ್ಯ: 99 ರನ್, 4 ವಿಕೆಟ್
ರವೀಂದ್ರ ಜಡೇಜಾ: 27 ರನ್, 5 ವಿಕೆಟ್
ಕುಲದೀಪ್ ಯಾದವ್: 7 ವಿಕೆಟ್
ವರುಣ್ ಚಕ್ರವರ್ತಿ: 9 ವಿಕೆಟ್
ಮೊಹಮದ್ ಶಮಿ: 9 ವಿಕೆಟ್
ಹರ್ಷಿತ್ ರಾಣಾ: 4 ವಿಕೆಟ್
ರೋಹಿತ್ ಸಾರಥ್ಯ ಕುತೂಹಲ...
ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬೆನ್ನಲ್ಲೇ ನಾಯಕ ರೋಹಿತ್ ಶರ್ಮ, ಏಕದಿನ ಮಾದರಿಯಿಂದ ಸದ್ಯಕ್ಕೆ ನಿವೃತ್ತಿಯಾಗುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. 8 ತಿಂಗಳ ಅಂತರದಲ್ಲಿ 2 ಐಸಿಸಿ ಟ್ರೋಫಿ ಗೆದ್ದುಕೊಟ್ಟ ನಾಯಕನನ್ನು ಬದಲಾಯಿಸಲು ಬಿಸಿಸಿಐ ಕೂಡ ಸದ್ಯಕ್ಕೆ ಮನಸ್ಸು ಮಾಡದು. ಆದರೆ ಇದರಿಂದ ರೋಹಿತ್ ಇನ್ನು ಎಷ್ಟು ಸಮಯ ನಾಯಕರಾಗಿ ಮುಂದುವರಿಯುವರು ಮತ್ತು 2027ರ ಏಕದಿನ ವಿಶ್ವಕಪ್ವರೆಗೂ ಆಡುವರೇ ಎಂಬ ಕುತೂಹಲ ಸೃಷ್ಟಿಯಾಗಿದೆ. 37 ವರ್ಷದ ರೋಹಿತ್ 2027ರ ವಿಶ್ವಕಪ್ ವೇಳೆ 40ರ ಸನಿಹ ತಲುಪಲಿದ್ದಾರೆ. ಅಲ್ಲಿಯವರೆಗೆ ಅವರಿಗೆ ಫಾರ್ಮ್-ಫಿಟ್ನೆಸ್ ಸಾಥ್ ನೀಡುವುದೇ ಎಂಬ ಪ್ರಶ್ನೆ ಮೂಡುತ್ತದೆ. ಅಥವಾ ಉಪನಾಯಕ ಶುಭಮಾನ್ ಗಿಲ್ ಪಕ್ವತೆ ಪಡೆಯುವವರೆಗೆ ರೋಹಿತ್ ನಾಯಕರಾಗಿ ಮುಂದುವರಿದು, ನಂತರ ನಾಯಕತ್ವ ಹಸ್ತಾಂತರಿಸಿ ನಿರ್ಗಮಿಸುವುದನ್ನೂ ತಳ್ಳಿಹಾಕುವಂತಿಲ್ಲ. ಈ ನಡುವೆ, ಏಕದಿನ ತಂಡದ ನಾಯಕತ್ವಕ್ಕೆ ಹಾರ್ದಿಕ್ ಪಾಂಡ್ಯ ಕೂಡ ರೇಸ್ನಲ್ಲಿದ್ದಾರೆ ಎಂದು ವರದಿಯಾಗಿತ್ತು. 2019 ಮತ್ತು 2023ರ ವಿಶ್ವಕಪ್ಗೆ ಮುನ್ನ ಧೋನಿ, ಕೊಹ್ಲಿ 2 ವರ್ಷ ಮುಂಚಿತವಾಗಿಯೇ ನಾಯಕತ್ವ ತ್ಯಜಿಸಿದ್ದರು. ಆದರೆ ಈಗ ಭವಿಷ್ಯದ ನಾಯಕನ ಬಗ್ಗೆ ಹೆಚ್ಚಿನ ಸ್ಪಷ್ಟತೆ ಇಲ್ಲದಿರುವುದರಿಂದ ರೋಹಿತ್ ಇನ್ನೂ ಕನಿಷ್ಠ ಒಂದು ವರ್ಷ ತಂಡವನ್ನು ಮುನ್ನಡೆಸುವ ನಿರೀಕ್ಷೆ ಹೆಚ್ಚಿದೆ.
2027ರ ಮೇ ತನಕ ಭಾರತದ
ಏಕದಿನ ಕ್ರಿಕೆಟ್ ಸರಣಿಗಳು...
2025&ಆಗಸ್ಟ್: ಬಾಂಗ್ಲಾದೇಶದಲ್ಲಿ 3 ಪಂದ್ಯ
2025&ಅಕ್ಟೋಬರ್: ಆಸ್ಟ್ರೆಲಿಯಾದಲ್ಲಿ 3 ಪಂದ್ಯ
2025&ನವೆಂಬರ್: ದ. ಆಫ್ರಿಕಾ ವಿರುದ್ಧ 3 ಪಂದ್ಯ
2026&ಜನವರಿ: ನ್ಯೂಜಿಲೆಂಡ್ ವಿರುದ್ಧ 3 ಪಂದ್ಯ
2026&ಜೂನ್: ಅ್ಘಾನಿಸ್ತಾನ ವಿರುದ್ಧ 3 ಪಂದ್ಯ
2026&ಜುಲೈ: ಇಂಗ್ಲೆಂಡ್ ನೆಲದಲ್ಲಿ 3 ಪಂದ್ಯ
2026&ಅಕ್ಟೋಬರ್: ವಿಂಡೀಸ್ ವಿರುದ್ಧ 3 ಪಂದ್ಯ
2026&ನವೆಂಬರ್: ನ್ಯೂಜಿಲೆಂಡ್ನಲ್ಲಿ 3 ಪಂದ್ಯ
2026&ಡಿಸೆಂಬರ್: ಶ್ರೀಲಂಕಾ ವಿರುದ್ಧ 3 ಪಂದ್ಯ
*ಒಟ್ಟು 27 ಏಕದಿನ ಪಂದ್ಯಗಳು.