

ಟೆಹ್ರಾನ್ (ಇರಾನ್): ಭಾರತದ ಮಹಿಳೆಯರ ತಂಡ ಏಷ್ಯನ್ ಕಬಡ್ಡಿ ಚಾಂಪಿಯನ್ಷಿಪ್ನಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿ 5ನೇ ಬಾರಿ ಚಾಂಪಿಯನ್ ಪಟ್ಟವೇರಿದೆ. ಈ ಮೂಲಕ ಮಹಿಳಾ ದಿನದಂದು ದೇಶದ ಮಹಿಳೆಯರಿಗೆ ವಿಶೇಷ ಉಡುಗೊರೆಯನ್ನು ನೀಡಿದೆ.
ಕನ್ನಡತಿ ತೇಜಸ್ವಿನಿ ಬಾಯಿ ಮಾರ್ಗದರ್ಶನದ ಭಾರತ ತಂಡ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಆತಿಥೇಯ ಇರಾನ್ ವಿರುದ್ಧ 32-25 ಅಂಕಗಳಿಂದ ಹೋರಾಟಯುತ ಗೆಲುವು ದಾಖಲಿಸಿತು. ಮಾಜಿ ಏಷ್ಯನ್ ಗೇಮ್ಸ್ ಚಾಂಪಿಯನ್ ಇರಾನ್ ತಂಡ ರಕ್ಷಣಾ ವಿಭಾಗದಲ್ಲಿ ಉತ್ತಮ ಪ್ರತಿರೋಧ ತೋರಿದ ಕಾರಣ ಭಾರತ ತಂಡ ಟೂರ್ನಿಯ ಪಂದ್ಯವೊಂದರಲ್ಲಿ ಮೊದಲ ಬಾರಿಗೆ 35 ಅಂಕಗಳ ಗಡಿ ದಾಟಲು ವಿಫಲವಾಯಿತು. ಇರಾನ್ ತಂಡ ರಜತ ಪದಕಕ್ಕೆ ತೃಪ್ತಿಪಟ್ಟರೆ, ಬಾಂಗ್ಲಾದೇಶ, ನೇಪಾಳ ತಂಡಗಳು ಕಂಚಿನ ಪದಕ ಗಳಿಸಿದವು.
ಮಹಾರಾಷ್ಟ್ರದ ಸೋನಾಲಿ ಶಿಂಗಟೆ ನೇತೃತ್ವದ ಭಾರತ ಸತತ 2ನೇ ಬಾರಿ ಏಷ್ಯನ್ ಚಾಂಪಿಯನ್ಷಿಪ್ ಜಯಿಸಿತು. ಈ ಮೂಲಕ ಮುಂಬರುವ ಕಬಡ್ಡಿ ವಿಶ್ವಕಪ್ಗೆ ಉತ್ತಮ ಸಿದ್ಧತೆ ನಡೆಸಿದೆ. ಭಾರತ ಈ ಮುನ್ನ 2005, 2007, 2008, 2017ರಲ್ಲಿ ಏಷ್ಯನ್ ಕಬಡ್ಡಿ ಕಿರೀಟ ಗೆದ್ದಿತ್ತು.