

ಪಣಜಿ: ಹಾಲಿ ವರ್ಷ ಮಾರ್ಚ್ನಲ್ಲಿ ಮುಂಬೈನಲ್ಲಿ ನಡೆದ ಮಹಿಳಾ ಐಪಿಎಲ್ ಖ್ಯಾತಿಯ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಆಯೋಜನೆಯಿಂದ ಬಿಸಿಸಿಐ ಬರೋಬ್ಬರಿ 377.49 ಕೋಟಿ ರೂ. ಆದಾಯ ಗಳಿಸಿದೆ. ಬಿಸಿಸಿಐ ಖಜಾಂಚಿ ಆಶಿಶ್ ಶೆಲಾರ್ ಎಜಿಎಂನಲ್ಲಿ 2022-23ರ ವಿತ್ತ ವರ್ಷದ ವರದಿಯಲ್ಲಿ ಇದನ್ನು ತಿಳಿಸಿದ್ದಾರೆ. 5 ತಂಡಗಳ ಮಹಿಳಾ ಟಿ20 ಟೂರ್ನಿ ಆಯೋಜನೆಯಿಂದ ಬಿಸಿಸಿಐ ವಾರ್ಷಿಕ ಆದಾಯ ಶೇ. 6 ಏರಿಕೆ ಕಂಡಿದೆ. ಐಪಿಎಲ್ ಪ್ರಸಾರ ಹಕ್ಕು ಮಾರಾಟದಿಂದ ಗರಿಷ್ಠ ಶೇ. 38 ಆದಾಯ ಬಂದಿದ್ದರೆ, ಟೀಮ್ ಇಂಡಿಯಾದ ಅಂತಾರಾಷ್ಟ್ರೀಯ ಸರಣಿಗಳಿಂದ ಶೇ. 10 ಆದಾಯ ಗಳಿಸಿದೆ.
ಒಟ್ಟು 6,558 ಕೋಟಿ ರೂ. ಆದಾಯ
2022-23ರ ವಿತ್ತ ವರ್ಷದಲ್ಲಿ ಬಿಸಿಸಿಐ ಒಟ್ಟು 6,558.80 ಕೋಟಿ ರೂ. ಆದಾಯ ಗಳಿಸಿದೆ. ಇದು 2021-22ರ ಆದಾಯಕ್ಕಿಂತ (4,360.57 ಕೋಟಿ ರೂ) 2,198 ಕೋಟಿ ರೂ. ಅಧಿಕವಾಗಿದೆ. ಕರೊನಾ ಭೀತಿಯಿಂದಾಗಿ 2021-22ರ ಸಾಲಿನ ದೇಶೀಯ ಕ್ರಿಕೆಟ್ ಋತುವಿನಲ್ಲಿ ಕೆಲ ಟೂರ್ನಿಗಳನ್ನು ರದ್ದುಗೊಳಿಸಿದ್ದರಿಂದಾಗಿ ಆದಾಯ ಕುಸಿದಿತ್ತು.
ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ 100 ಕೋಟಿ ರೂ. ಹಂಚಿಕೆ
ಪ್ರಮುಖ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ 100 ಕೋಟಿ ರೂ. ಮತ್ತು ಈಶಾನ್ಯ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ 12.5 ಕೋಟಿ ರೂ. ಹಂಚಿಕೆ ಮಾಡಲು ಬಿಸಿಸಿಐ ನಿರ್ಧರಿಸಿದೆ. ಪುದುಚೇರಿ ಕ್ರಿಕೆಟ್ ಸಂಸ್ಥೆಗೆ 17.5 ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ. ಈ ಪೈಕಿ ಶೇ. 85 ಮೊತ್ತವನ್ನು ಕ್ರಿಕೆಟ್ ಆಟದ ನಿರ್ವಹಣೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಬಳಸುವಂತೆಯೂ ಬಿಸಿಸಿಐ ಸೂಚಿಸಿದೆ.