ಈ ಒಂದು ಕಾರಣಕ್ಕೆ ನಾನು ಐಪಿಎಲ್​ನಿಂದ ದೂರ ಉಳಿದಿದ್ದೇನೆ! ಅಚ್ಚರಿ ಹೇಳಿಕೆ ನೀಡಿದ ಬೆನ್​ ಸ್ಟೋಕ್ಸ್​ | Ben Stokes

Ben Stokes
Published on

Ben Stokes : ವಿಶ್ವದ ಪ್ರಮುಖ ಕ್ರಿಕೆಟ್​ ಲೀಗ್​ಗಳಲ್ಲಿ ಇಂಡಿಯನ್​ ಪ್ರೀಮಿಯರ್​ ಲೀಗ್ ( IPL ) ಕೂಡ ಒಂದು. ಈ ಟೂರ್ನಿಯಲ್ಲಿ ಒಮ್ಮೆಯಾದರೂ ಆಡಬೇಕೆಂಬುದು ಎಲ್ಲ ಕ್ರಿಕೆಟಿಗರು ಬಯಕೆ. ಅವಕಾಶ ಸಿಕ್ಕರಂತೂ ಅವರಷ್ಟು ಅದೃಷ್ಟವಂತರೂ ಯಾರೂ ಇಲ್ಲ. ಆದರೆ, ಈ ಬಾರಿ ಇಂಗ್ಲೆಂಡ್​ ತಂಡದ ಆಲ್​ರೌಂಡರ್​ ಆಟಗಾರ ಬೆನ್​ ಸ್ಟೋಕ್ಸ್​ ಐಪಿಎಲ್​ ಹರಾಜಿನಿಂದ ದೂರ ಉಳಿಯುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಇದೀಗ ಸ್ಟೋಕ್ಸ್​ ತಮ್ಮ ನಿಲುವಿಗೆ ಕಾರಣ ಏನೆಂಬುದನ್ನು ಸಹ ತಿಳಿಸಿದ್ದಾರೆ.

ರಾಷ್ಟ್ರೀಯ ತಂಡಕ್ಕಾಗಿ ಸಾಧ್ಯವಾದಷ್ಟು ಕಾಲ ಆಡಲು ಬಯಸುತ್ತೇನೆ ಎಂದು ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಹೇಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಂತಹ ಇತರ ಟೂರ್ನಿಗಳಿಂದ ದೂರ ಉಳಿಯುತ್ತಿರುವುದಾಗಿಯೂ ತಿಳಿಸಿದ್ದಾರೆ.

ಬೆನ್​ ಸ್ಟೋಕ್ಸ್​ ಅವರು ಈ ಹಿಂದೆ ಪುಣೆ, ಚೆನ್ನೈ ಮತ್ತು ರಾಜಸ್ಥಾನ ತಂಡಗಳಲ್ಲಿ ಆಡಿದ್ದಾರೆ. ಅಲ್ಲದೆ, ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ಸಹ ನೀಡಿದ್ದಾರೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ ತಂಡಕ್ಕೆ ತಮ್ಮ ವೃತ್ತಿಜೀವನವನ್ನು ವಿಸ್ತರಿಸುವುದು ತಮ್ಮ ಮೊದಲ ಆದ್ಯತೆ ಎಂದು ಸ್ಟೋಕ್ಸ್​ ಸ್ಪಷ್ಟಪಡಿಸಿದ್ದಾರೆ. ಐಪಿಎಲ್‌ನ ಇತ್ತೀಚಿನ ನಿಯಮಗಳ ಪ್ರಕಾರ ಸ್ಟೋಕ್ಸ್​ ಅವರು 2026 ರವರೆಗೂ ಲೀಗ್‌ನಲ್ಲಿ ಆಡಲು ಸಾಧ್ಯವಿಲ್ಲ. ನಾನು ಈಗ ನನ್ನ ವೃತ್ತಿಜೀವನದ ಅಂತಿಮ ಹಂತವನ್ನು ಸಮೀಪಿಸುತ್ತಿದ್ದೇನೆ ಎಂಬುದು ಸತ್ಯ. ಹೀಗಾಗಿ ನಾನು ಸಾಧ್ಯವಾದಷ್ಟು ಕಾಲ ನಮ್ಮ ತಂಡಕ್ಕಾಗಿ ಆಡಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

ನನ್ನ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುವುದು ಕೂಡ ಬಹಳ ಮುಖ್ಯ. ಈ ಹಂತದಲ್ಲಿ ನಾನು ಯಾವಾಗ ಆಡಬೇಕೆಂಬುದರ ಬಗ್ಗೆ ಹಾಗೂ ನನ್ನ ಆದ್ಯತೆಗಳು ಯಾವುದು ಎಂಬುದನ್ನು ನಿರ್ಧರಿಸಬೇಕು ಮತ್ತು ನನ್ನ ವೃತ್ತಿಯನ್ನು ವಿಸ್ತರಿಸಲು ಕಾಳಜಿ ವಹಿಸಬೇಕು. ಪ್ರಸ್ತುತ ಇಂಗ್ಲೆಂಡ್‌ ತಂಡಕ್ಕಾಗಿ ದೀರ್ಘಕಾಲ ಆಡುವುದು ನನ್ನ ಆಸೆಯಾಗಿದೆ. ಅದಕ್ಕಾಗಿಯೇ ನಾನು ಐಪಿಎಲ್‌ನಿಂದ ಹೊರನಡೆದಿದ್ದೇನೆ ಎಂದು ಸ್ಟೋಕ್ಸ್ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ದೀರ್ಘಕಾಲದ ಮೊಣಕಾಲಿನ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ಸ್ಟೋಕ್ಸ್, 2026ರ ಅಕ್ಟೋಬರ್​ವರೆಗೆ ಇಂಗ್ಲೆಂಡ್ ಬೋರ್ಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಇಂದಿನಿಂದ ಪ್ರಾರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ಮೂರು ಟೆಸ್ಟ್‌ಗಳ ಸರಣಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಸ್ಟೋಕ್ಸ್‌ಗೆ ಮುಂದಿನ ವರ್ಷ ತವರಿನಲ್ಲಿ ಭಾರತ ವಿರುದ್ಧ ಮತ್ತು ಆನಂತರದ ಆಸಿಸ್​ ಸರಣಿ ನಿರ್ಣಾಯಕವಾಗಿರುತ್ತದೆ. ಕಳೆದ ವರ್ಷದ ವಿಶ್ವಕಪ್ ಬಳಿಕ ಏಕದಿನ ಪಂದ್ಯಗಳಿಂದ ದೂರ ಉಳಿದಿದ್ದ ಸ್ಟೋಕ್ಸ್ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಮತ್ತೊಮ್ಮೆ ಏಕದಿನ ಪಂದ್ಯ ಆಡುವ ಸಾಧ್ಯತೆ ಇದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net