

ನವದೆಹಲಿ: ಪ್ರಸಕ್ತ ಐಪಿಎಲ್-2024 ಟೂರ್ನಿ ನಿರ್ಣಾಯಕ ಹಂತವನ್ನು ತಲುಪಿದೆ. ಇಂದಿನಿಂದ (ಮೇ 21) ಪ್ಲೇ ಆಫ್ ಪಂದ್ಯಗಳು ಆರಂಭವಾಗಲಿವೆ. ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್), ಸನ್‌ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್), ರಾಜಸ್ಥಾನ ರಾಯಲ್ಸ್ (ಆರ್ಆರ್), ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅಂಕಪಟ್ಟಿಯಲ್ಲಿ ಅಗ್ರ 4 ಸ್ಥಾನದಲ್ಲಿರುವ ತಂಡಗಳಾಗಿದ್ದು, ಈ ಪ್ಲೇ ಆಫ್‌ನಲ್ಲಿ ಮುಖಾಮುಖಿಯಾಗಲಿವೆ. ಒಟ್ಟು ಮೂರು ಪಂದ್ಯಗಳು ನಡೆಯಲಿವೆ. ಕ್ವಾಲಿಫೈಯರ್ ಒಂದು, ಎಲಿಮಿನೇಟರ್, ಕ್ವಾಲಿಫೈಯರ್ ಎರಡು… ಈ ಮೂರು ಪಂದ್ಯಗಳ ನಂತರ ಎರಡು ತಂಡಗಳು ಟ್ರೋಫಿಗಾಗಿ ಪರಸ್ಪರ ಮುಖಾಮುಖಿಯಾಗಲಿವೆ.
ಕೆಕೆಆರ್ ಮತ್ತು ಎಸ್ಆರ್ಎಚ್ ಅಗ್ರ ಎರಡು ತಂಡಗಳು ಕ್ವಾಲಿಫೈಯರ್ 1ರಲ್ಲಿ ಸ್ಪರ್ಧಿಸಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ತಲುಪಲಿದೆ. ಸೋತ ತಂಡವು ಎಲಿಮಿನೇಟರ್‌ನಲ್ಲಿ ವಿಜೇತ ತಂಡದ ವಿರುದ್ಧ ಕ್ವಾಲಿಫೈಯರ್ ಎರಡರಲ್ಲಿ ಆಡಲಿದೆ. ಎಲಿಮಿನೇಟರ್‌ನಲ್ಲಿ ಆರ್ಆರ್ ಮತ್ತು ಆರ್‌ಸಿಬಿ ತಂಡಗಳು ಮುಖಾಮುಖಿಯಾಗಲಿವೆ. ಸೋತ ತಂಡ ಮನೆಗೆ ಹೋದರೆ, ಗೆದ್ದ ತಂಡ ಕ್ವಾಲಿಫೈಯರ್ ಎರಡರಲ್ಲಿ ಆಡುತ್ತದೆ. ಫೈನಲ್ನಲ್ಲಿ ಯಾವ ಎರಡು ತಂಡಗಳು ಟ್ರೋಫಿಗಾಗಿ ಕಾದಾಡಲಿವೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಇದೀಗ ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಿಗ್ಗಜ ಹಾಗೂ ಆರ್‌ಸಿಬಿ ಮಾಜಿ ಆಟಗಾರ ಎ.ಬಿ. ಡಿವಿಲಿಯರ್ಸ್ ಭವಿಷ್ಯ ನುಡಿದಿದ್ದಾರೆ.
ಪ್ರಸಕ್ತ ಐಪಿಎಲ್ನಲ್ಲಿ ಆರ್‌ಸಿಬಿ ಫೈನಲ್ ತಲುಪುವುದು ಖಚಿತ ಎಂದು ಎಬಿಡಿ ಹೇಳಿದ್ದಾರೆ. ಬೆಂಗಳೂರು ಜತೆಗೆ ಗ್ರೂಪ್ ಹಂತದಲ್ಲಿ ಅಗ್ರಸ್ಥಾನಿಯಾಗಿದ್ದ ಕೋಲ್ಕತ್ತ ತಂಡವೂ ಫೈನಲ್‌ಗೆ ಅರ್ಹತೆ ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಪ್ರಶಸ್ತಿ ಹೋರಾಟದಲ್ಲಿ ಆರ್‌ಸಿಬಿ-ಕೆಕೆಆರ್ ಮುಖಾಮುಖಿಯಾಗಲಿದ್ದು, ಎರಡು ತಂಡಗಳಲ್ಲಿ ಒಂದು ಚಾಂಪಿಯನ್ ಆಗಿ ಹೊರಹೊಮ್ಮಲಿದೆ ಎಂದು ಡಿವಿಲಿಯರ್ಸ್ ಹೇಳಿದ್ದಾರೆ. ಎಸ್ಆರ್ಎಚ್ ಮತ್ತು ಆರ್ಆರ್ಗೆ ಯಾವುದೇ ಅವಕಾಶವಿಲ್ಲ ಎಂದು ಎಬಿಡಿ ಸ್ಪಷ್ಟಪಡಿಸಿದ್ದಾರೆ. ಆರ್‌ಸಿಬಿ ತಂಡ ಸತತ 6 ಪಂದ್ಯಗಳನ್ನು ಗೆದ್ದು ಅಬ್ಬರಿಸಿದೆ. ಈ ಸೀಸನ್ನಲ್ಲಿ ಕೆಕೆಆರ್ ಅತ್ಯುತ್ತಮ ತಂಡವಾಗಿದೆ. ಹೀಗಾಗಿ ಈ ಎರಡು ತಂಡಗಳ ನಡುವೆ ಫೈನಲ್ ಫೈಟ್ ನಡೆಯುವ ಸಾಧ್ಯತೆ ಇದೆ ಎಂದು ಎಬಿಡಿ ಹೇಳಿದ್ದಾರೆ.
ಈ ಸೀಸನ್ನಲ್ಲಿ ಫೈನಲ್ ಪಂದ್ಯಕ್ಕೆ ಚೆನ್ನೈನ ಚೆಪಾಕ್ ಸ್ಟೇಡಿಯಂ ವೇದಿಕೆಯಾಗಲಿದೆ. ಒಂದು ವೇಳೆ ಕೋಲ್ಕತ್ತ ಫೈನಲ್ ತಲುಪಿದರೆ ಚೆಪಾಕ್ ಪಿಚ್ನಿಂದ ಹೆಚ್ಚಿನ ಬೆಂಬಲ ಸಿಗುವ ಸಾಧ್ಯತೆ ಇದೆ ಎಂದು ಎಬಿಡಿ ಹೇಳಿದ್ದಾರೆ. ಚೆಪಾಕ್ ಪಿಚ್ ಸ್ವಾಭಾವಿಕವಾಗಿ ಸ್ಪಿನ್‌ಗೆ ಹೇಳಿ ಮಾಡಿಸಿದಂತಿದೆ. ಈ ಹಿನ್ನಲೆಯಲ್ಲಿ ವರುಣ್ ಚಕ್ರವರ್ತಿ ಹಾಗೂ ಸುನಿಲ್ ನರೈನ್ರಂತಹ ವಿಶ್ವ ದರ್ಜೆಯ ಸ್ಪಿನ್ನರ್‌ಗಳನ್ನು ಹೊಂದಿರುವ ಕೋಲ್ಕತ್ತಗೆ ಈ ಮೈದಾನ ಹೆಚ್ಚು ಅನುಕೂಲಕರವಾಗುವ ಸಾಧ್ಯತೆಗಳಿವೆ ಎಂದು ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.
ಮತ್ತೊಂದೆಡೆ ಸನ್‌ರೈಸರ್ಸ್ ಅಭಿಮಾನಿಗಳು ಎಬಿಡಿ ಹೇಳಿಕೆಗೆ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ. ಎಸ್ಆರ್ಎಚ್ ತಂಡ ಕೆಕೆಆರ್ಗೆ ಶಾಕ್ ನೀಡುವುದು ಖಚಿತ. ಫೈನಲ್ನಲ್ಲಿ ಕಣಕ್ಕಿಳಿಯೋಣ ಎಂದು ಕಾಮೆಂಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್)