RCBಗೆ ಬೆಂಬಲ ನೀಡಲು ಬರ್ತಿದ್ದಾರೆ ವಿಶೇಷ ಅತಿಥಿ! ಅವರಿದ್ರೆ ಕೊಹ್ಲಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ

RCB
Published on

ಬೆಂಗಳೂರು: ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮನೆಗೆ ವಾಪಸ್ಸಾಗುವ ಮೊದಲ ತಂಡವಾಗಲಿದೆ ಎಂದು ಹಲವರು ಭಾವಿಸಿದ್ದರು. ಏಕೆಂದರೆ ಮೊದಲಾರ್ಧದಲ್ಲಿ ಆಡಿದ 8 ಪಂದ್ಯಗಳಲ್ಲಿ ಒಂದೇ ಒಂದು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಆದರೆ, ನಂತರದಲ್ಲಿ ಅಸಾಧಾರಣವಾಗಿ ಚೇತರಿಸಿಕೊಂಡ ಆರ್​ಸಿಬಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಪ್ಲೇ ಆಫ್ ತಲುಪಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಕಿಂಗ್ ವಿರಾಟ್ ಕೊಹ್ಲಿ ಏಕಾಂಗಿಯಾಗಿ ತಂಡವನ್ನು ಪ್ಲೇ-ಆಫ್‌ಗೆ ಮುನ್ನಡೆಸಿದರು. ರಾಜಸ್ಥಾನ ಜೊತೆಗಿನ ಎಲಿಮಿನೇಟರ್ ಪಂದ್ಯದಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಈ ಕ್ರಮದಲ್ಲಿ ಆರ್‌ಸಿಬಿಯನ್ನು ಬೆಂಬಲಿಸಲು ವಿಶೇಷ ಅತಿಥಿಯೊಬ್ಬರು ಆಗಮಿಸಲಿದ್ದಾರೆ. ಅವರನ್ನು ಕಂಡರೆ ಕ್ರೀಡಾಂಗಣದಲ್ಲಿ ಕೊಹ್ಲಿಯ ಆರ್ಭಟವನ್ನು ತಡೆಯುವುದು ಕಷ್ಟ ಎನ್ನುತ್ತಿದ್ದಾರೆ ಅಭಿಮಾನಿಗಳು.

ಎಲಿಮಿನೇಟರ್ ಪಂದ್ಯವು ಮೇ 22ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ-ರಾಜಸ್ಥಾನ ತಂಡಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಸದ್ಯ ಸೂಪರ್ ಫಾರ್ಮ್‌ನಲ್ಲಿವೆ. ಈ ಪಂದ್ಯದಲ್ಲಿ ಆರ್‌ಸಿಬಿಯನ್ನು ಬೆಂಬಲಿಸಲು ವಿಶೇಷ ಅತಿಥಿಯೊಬ್ಬರು ಬರಲಿದ್ದಾರೆ. ಅವರು ಬೇರೆ ಯಾರು ಅಲ್ಲ, ವಿರಾಟ್ ಅವರ ಬಹುಕಾಲದ ಗೆಳೆಯ, ದಕ್ಷಿಣ ಆಫ್ರಿಕಾದ ದಿಗ್ಗಜ, ಮಾಜಿ ಆಟಗಾರ ಎಬಿ ಡಿವಿಲಿಯರ್ಸ್. ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿಯನ್ನು ಹುರಿದುಂಬಿಸಲು ಎಬಿಡಿ ಭಾರತಕ್ಕೆ ಬರಲಿದ್ದಾರೆ. ಅಭಿಮಾನಿಗಳೊಂದಿಗೆ ಲೈವ್ ಚಾಟ್ ಮಾಡಿರುವ ಡಿವಿಲಿಯರ್ಸ್ ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಪ್ಲೇಆಫ್​ಗೆ ನನ್ನೊಂದಿಗೆ ಸೇರಿಕೊಳ್ಳಿರಿ ಎಂದು ಕರೆ ಕೊಟ್ಟಿದ್ದಾರೆ.

ಇದೇ ಸಂದರ್ಭದಲ್ಲಿ ಡಿವಿಲಿಯರ್ಸ್ ಆರ್​ಸಿಬಿಗಾಗಿ 11 ಸೀಸನ್​​ಗಳಲ್ಲಿ ಆಡಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿಯೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಇವರಿಬ್ಬರು ಕೂಡಿ ಗಳಿಸಿದ 229 ರನ್‌ಗಳ ಜೊತೆಯಾಟ ಇಲ್ಲಿಯವರೆಗೆ ದಾಖಲೆಯಾಗೇ ಉಳಿದಿದೆ. ಈ ಜೋಡಿ ಬೆಂಗಳೂರಿಗೆ ಹಲವು ಸ್ಮರಣೀಯ ಗೆಲುವುಗಳನ್ನು ನೀಡಿದೆ. ಆದರೆ ಕಪ್ ನೀಡಲು ಸಾಧ್ಯವಾಗಲಿಲ್ಲ. ಕಳೆದ 16 ಸೀಸನ್‌ಗಳಿಂದ ಆರ್‌ಸಿಬಿ ಅಭಿಮಾನಿಗಳು ಕಪ್​ಗಾಗಿ ಎದುರು ನೋಡುತ್ತಿದ್ದಾರೆ. ತಮ್ಮ ನೆಚ್ಚಿನ ತಂಡ ಎಷ್ಟೇ ಸೋತರು ತಂಡದ ಪರ ನಿಂತು ಹುರಿದುಂಬಿಸುತ್ತಿದ್ದಾರೆ. ಅಲ್ಲದೇ ಮುಂದಿನ ಪಂದ್ಯಕ್ಕೆ ವಿಶೇಷ ಅತಿಥಿಯಾಗಿ ತಮ್ಮ ಹಳೆಯ ಗೆಳೆಯ ಎಬಿಡಿ ಬಂದರೆ, ಕೊಹ್ಲಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಗ್ರೌಂಡ್​ನಲ್ಲಿ 11 ವರ್ಷಗಳ ಕಾಲ ತಮ್ಮ ಜೊತೆ ಆಡಿದ ಎಬಿಡಿಯನ್ನು ನೋಡಿದರೆ, ಕೊಹ್ಲಿಗೆ ಎಲ್ಲಿಲ್ಲದ ಉತ್ಸಾಹ ಬರುವುದು ಖಚಿತ ಮತ್ತು ಬೌಲರ್​ಗಳನ್ನು ಬೆಂಡೆತ್ತುವುದು ಖಂಡಿತ ಎಂದು ಹೇಳುತ್ತಿದ್ದಾರೆ. ಈ ಸೀಸನ್​ನಲ್ಲಿ ವಿರಾಟ್ ಕೊಹ್ಲಿ ರನ್‌ಗಳ ಪ್ರವಾಹದ ಬಗ್ಗೆ ಹೇಳಬೇಕಾಗಿಲ್ಲ. ಕಿಂಗ್ ಕೊಹ್ಲಿ ಇದುವರೆಗೆ ಆಡಿರುವ 14 ಪಂದ್ಯಗಳಲ್ಲಿ 708 ರನ್ ಗಳಿಸಿದ್ದು, ಆರೆಂಜ್ ಕ್ಯಾಪ್ ಹೋಲ್ಡರ್ ಆಗಿ ಮುಂದುವರಿದಿದ್ದಾರೆ. ಇಷ್ಟೊಂದು ಬಿರುಸಿನ ಫಾರ್ಮ್​ನಲ್ಲಿರುವ ವಿರಾಟ್, ರಾಜಸ್ಥಾನ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಎಬಿಡಿ ಹಾಗೂ ಅಭಿಮಾನಿಗಳನ್ನು ರೇಂಜ್​ನಲ್ಲಿ ರೋಮಾಂಚನಗೊಳ್ಳುತ್ತಾರೋ ನೋಡಬೇಕು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net