

ನವದೆಹಲಿ: ಈ ಭೂಮ ಮಂಡಲದಲ್ಲಿ ವಿಚಿತ್ರವಾಗಿ ಕಾಣುವ ಅನೇಕ ಜೀವಿಗಳಿವೆ. ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು ಹ್ಯಾಮರ್ ಹೆಡ್ ಬ್ಯಾಟ್. ಹಣ್ಣುಗಳನ್ನು ತಿಂದು ಬದುಕುವ ಈ ಜೀವಿಗಳನ್ನು ಕಂಡರೆ ಭಯ ಹುಟ್ಟುವುದು ಸಹಜ. ಆದರೆ, ಈ ಜೀವಿ ಸೌಮ್ಯ ಸ್ವಭಾವದ್ದು. ಇವುಗಳನ್ನು ದೊಡ್ಡ ತುಟಿಯ ಬಾವಲಿ ಎಂದೂ ಕರೆಯುತ್ತಾರೆ.
ಈ ಜೀವಿಗಳು ಹೆಚ್ಚಾಗಿ ಪಶ್ಚಿಮ ಮತ್ತು ಮಧ್ಯ ಆಫ್ರಿಕಾದಲ್ಲಿ ಕಂಡುಬರುತ್ತವೆ. ಸುತ್ತಿಗೆಯನ್ನು ಹೋಲುವ ದೈತ್ಯಾಕಾರದ ತಲೆಯನ್ನು ಹೊಂದಿದೆ. ತುಟಿಗಳು ಮತ್ತು ಮೂಗು ತುಂಬಾ ದೊಡ್ಡದಾಗಿವೆ. ಇವು ಆಫ್ರಿಕನ್ ಖಂಡದ ಅತಿದೊಡ್ಡ ಬಾವಲಿ ಜಾತಿಗಳಾಗಿವೆ. ರೆಕ್ಕೆಗಳು 3.3 ಅಡಿಗಳವರೆಗೆ ಇರುತ್ತವೆ. ಗಂಡು ಬಾವಲಿಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಹ್ಯಾಮರ್ ಹೆಡ್ ಬಾವಲಿಗಳು ಬೂದು ಮಿಶ್ರಿತ ಕಂದು ಬಣ್ಣದಲ್ಲಿರುತ್ತವೆ.
ಇವು ಮನುಷ್ಯರ ಮೇಲೆ ದಾಳಿ ಮಾಡದಿದ್ದರೂ ಎಲ್ಲ ಹಣ್ಣುಗಳನ್ನು ಗುಳಂ ಎನಿಸುವ ಮೂಲಕ ಮಾನವರಿಗೆ ತಲೆನೋವು ತರಿಸುತ್ತವೆ. ಈ ಜೀವಿಗಳ ನೆಚ್ಚಿನ ಆಹಾರವೆಂದರೆ ಅಂಜೂರ, ಮಾವು ಮತ್ತು ಬಾಳೆಹಣ್ಣು. ಇವು ರಾತ್ರಿಯಲ್ಲಿ ತುಂಬಾ ಜೋರಾಗಿ ಶಬ್ದ ಮಾಡುತ್ತವೆ. ಮಾಂಸಾಹಾರ ಸೇವಿಸಲು ಹಿಂಜರಿಯುವುದಿಲ್ಲ ಎಂದು ತಿಳಿದು ಬಂದಿದೆ.
ಮಾರಣಾಂತಿಕ ಎಬೋಲಾ ವೈರಸ್ನ ಮೂಲದ ಹುಡುಕಾಟದಲ್ಲಿ ಹ್ಯಾಮರ್ಹೆಡ್ ಬಾವಲಿಗಳು ಮೇಲೆಯೂ ಸಂಶೋಧನೆಗಳು ನಡೆಯುತ್ತಿವೆ. ಎಬೋಲಾ ವೈರಸ್ ವಿರುದ್ಧದ ಪ್ರತಿಕಾಯಗಳು ಹ್ಯಾಮರ್ ಹೆಡ್ ಬಾವಲಿಗಳಲ್ಲಿ ಕಂಡುಬಂದಿವೆ. ಇವುಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ, ಅಳಿವಿನಂಚಿನಲ್ಲಿರುವ ಜೀವಿಗಳ ಪಟ್ಟಿಯಲ್ಲಿ ಸೇರಿಸಲಾಗಿಲ್ಲ. (ಏಜೆನ್ಸೀಸ್)