

ನ್ಯೂಯಾರ್ಕ್: ಇಲ್ಲಿನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ-20 ವಿಶ್ವಕಪ್ನ 08ನೇ ಪಂದ್ಯದಲ್ಲಿ ಅಲ್ರೌಂಡ್ ಪ್ರದರ್ಶನದ ಫಲವಾಗಿ ಐರ್ಲೆಂಡ್ ವಿರುದ್ಧ 08 ವಿಕೆಟ್ಗಳ ಭರ್ಜರಿ ಜಯಗಳಿಸಿದೆ. ಈ ಮೂಲಕ ಟೂರ್ನಿಯಲ್ಲಿ ಶುಭಾರಂಭ ಕಂಡಿರುವ ಭಾರತ ಮುಂದಿನ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡುವುದಾಗಿ ಎದುರಾಳಿ ತಂಡಗಳಿಗೆ ಸಂದೇಶ ರವಾನಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡವನ್ನು ಇನ್ನಿಲ್ಲದಂತೆ ಕಾಡಿದ ಟೀಮ್ ಇಂಡಿಯಾ ಬೌಲರ್ಗಳು ಎದುರಾಳಿ ತಂಡವನ್ನು 97ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. 98 ರನ್ಗಳ ಸುಲಭ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ (52 ರನ್, 37 ಎಸೆತ, 4 ಬೌಂಡರಿ, 3 ಸಿಕ್ಸರ್), ರಿಷಭ್ ಪಂತ್ (36 ರನ್, 26 ಎಸೆತ, 3 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ ಗುರಿಯನ್ನು 12.2 ಓವರ್ಗಳಲ್ಲಿ ತಲುಪುವ ಮೂಲಕ ಗೆಲುವಿನ ನಗೆ ಬೀರಿತ್ತು.
ಪಂದ್ಯದ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ನಡೆದ ಸಭೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ವೀಶೇಷ ಗೌರವ ನೀಡಲಾಯಿತು. ಈ ವೇಳೆ ಮೊಹಮ್ಮದ್ ಸಿರಾಜ್ಗೆ ಫೀಲ್ಟರ್ ಆಫ್ ದಿ ಮ್ಯಾಚ್ ಮೆಡಲ್ಅನ್ನು ನೀಡಲಾಯಿತು. ಈ ಪಂದ್ಯದಲ್ಲಿ 26 ರನ್ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಡೆಲಾನಿ ಯನ್ನು ರನೌಟ್ ಮಾಡುವಲ್ಲಿ ಮೊಹಮ್ಮದ್ ಸಿರಾಜ್ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಫೀಲ್ಡಿಂಗ್ ಕೋಚ್ ದಿಲೀಪ್, ಸಿರಾಜ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದರು. ಸಿರಾಜ್ಗೆ ಪ್ರಶಸ್ತಿ ನೀಡಲು ವಿಶೇಷ ಅತಿಥಿ ಆಗಮಿಸಿದ್ದರು.
ಈ ಪಂದ್ಯದ ರಾಷ್ಟ್ರೀಯ ಗೀತೆಯ ವೇಳೆ ಕಾಣಿಸಿಕೊಂಡಿದ್ದ ಪಂಜಾಬಿ ಪುಟಾಣಿಯನ್ನು ಟೀಮ್ ಇಂಡಿಯಾ ಫೀಲ್ಡಿಂಗ್ ಕೋಚ್ ಡ್ರೆಸ್ಸಿಂಗ್ ರೂಮ್ಗೆ ಆಹ್ವಾನಿಸಿದ್ದರು. ಹೀಗೆ ಭಾರತ ತಂಡದ ಡ್ರೆಸ್ಸಿಂಗ್ ರೂಮ್ನಲ್ಲಿ ಕಾಣಿಸಿಕೊಂಡ ಸುಭೇಕ್ ಹೆಸರಿನ ಪುಟ್ಟ ಅಭಿಮಾನಿ ಮೊಹಮ್ಮದ್ ಸಿರಾಜ್ಗೆ ಬೆಸ್ಟ್ ಫೀಲ್ಡರ್ ಮೆಡಲ್ ನೀಡಿದರು. ಮೆಡಲ್ ಪಡೆದ ಬಳಿಕ ಹುಡುಗನನ್ನು ತಬ್ಬಿಕೊಂಡು ಸಂಭ್ರಮಿಸಿದ ಸಿರಾಜ್ ಥ್ಯಾಂಕ್ಯೂ ಪಾಜಿ ಎಂದು ಪುಟಾಣಿಗೆ ಹೇಳಿದ್ದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ಐರ್ಲೆಂಡ್ ವಿರುದ್ಧ ಭರ್ಜರಿ ಜಯ ಗಳಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಭಾರತ ಜೂನ್ 09ರಂದು ಪಾಕಿಸ್ತಾನದ ವಿರುದ್ಧ ತನ್ನ ಲೀಗ್ ಹಂತದ ಎರಡನೇ ಪಂದ್ಯವನ್ನು ಆಡಲಿದೆ.