ಭಾರತದ ಷಟ್ಲರ್ ಸೈನಾ ನೆಹ್ವಾಲ್‌ಗೆ ನಿರಾಸೆ

saina nehwal for web
Published on

ಬ್ಯಾಂಕಾಕ್: ಭಾರತದ ಸ್ಟಾರ್ ಷಟ್ಲರ್ ಸೈನಾ ನೆಹ್ವಾಲ್ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ನಿರಾಸೆ ಅನುಭವಿಸಿದ್ದಾರೆ. ಭರವಸೆಯ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಸೋಲು ಕಂಡರೆ, ಮಾಜಿ ವಿಶ್ವ ನಂ.1 ಕೆ.ಶ್ರೀಕಾಂತ್ ಸ್ನಾಯು ಸೆಳೆತದಿಂದಾಗಿ ಕಣದಿಂದ ಹಿಂದೆ ಸರಿದರು. ಸೈನಾ ಸೋಲಿನಿಂದ ಟೂರ್ನಿಯಲ್ಲಿ ಭಾರತದ ಸಿಂಗಲ್ಸ್ ವಿಭಾಗದ ಹೋರಾಟ ಅಂತ್ಯಗೊಂಡಂತಾಗಿದೆ.

ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಸೈನಾ ನೆಹ್ವಾಲ್ 23-21, 14-21, 16-21 ರಿಂದ ಸ್ಥಳೀಯ ಆಟಗಾರ್ತಿ ಬುಸಾನನ್ ಎದುರು 68 ನಿಮಿಷಗಳ ಕಾದಾಟದಲ್ಲಿ ಸೋಲು ಕಂಡರು. ವಿಶ್ವ ನಂ.12 ಥಾಯ್ಲೆಂಡ್ ಆಟಗಾರ್ತಿ ಎದುರು ಸೈನಾ ಅನುಭವಿಸಿದ ಸತತ 4ನೇ ಸೋಲು ಇದಾಗಿದೆ. ಮೊದಲ ಗೇಮ್‌ನಲ್ಲಿ ರೋಚಕ ಜಯ ದಾಖಲಿಸಿದರೂ ಎರಡನೇ ಗೇಮ್‌ನಲ್ಲಿ ಸೈನಾ ನಿರಾಸೆ ಕಂಡರು. ನಿಣಾರ್ಯಕ 3ನೇ ಹಾಗೂ ಅಂತಿಮ ಗೇಮ್‌ನಲ್ಲಿ ಸೈನಾ ಆರಂಭದಲ್ಲೇ 0-3 ರಿಂದ ಹಿನ್ನಡೆ ಕಂಡರು. ಸತತ ಪಾಯಿಂಟ್ಸ್ ಸಂಗ್ರಹಿಸಿ 6-5 ರಿಂದ ಅಲ್ಪ ಮುನ್ನಡೆ ಸಾಧಿಸಿದರೂ ಮೊದಲ ಬ್ರೇಕ್ ಅಂತ್ಯಕ್ಕೆ 9-11ರಿಂದ ಹಿನ್ನಡೆಯಲ್ಲಿ ಉಳಿದರು. ಬಳಿಕ ಏಕಾಏಕಿ 11-18 ರಿಂದ ಹಿನ್ನಡೆಯಲ್ಲಿ ಉಳಿದ ಸೈನಾ ಸತತ ಅಂಕಗಳನ್ನು ಕಲೆಹಾಕಿದರೂ ಜಯ ಒಲಿಸಿಕೊಳ್ಳಲು ವಿಫಲರಾದರು.

* ಸಾತ್ವಿಕ್-ಚಿರಾಗ್ ಜೋಡಿಗೆ ಶಾಕ್

ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಜೋಡಿ 19-21, 17-21 ನೇರ ಗೇಮ್‌ಗಳಿಂದ ಇಂಡೋನೇಷ್ಯಾದ ಮೊಹಮದ್ ಅಶಾನ್ ಹಾಗೂ ಹೆಂದ್ರಾ ಸೆಟಿಯಾವನ್ ಜೋಡಿಗೆ ಶರಣಾಯಿತು. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮಾಜಿ ವಿಶ್ವ ನಂ.1 ಕೆ.ಶ್ರೀಕಾಂತ್ ಎರಡನೇ ಸುತ್ತಿನ ಪಂದ್ಯದಿಂದ ಹಿಂದೆ ಸರಿದರು. ಸ್ನಾಯು ಸೆಳೆತಕ್ಕೆ ಒಳಗಾದ ಶ್ರೀಕಾಂತ್ ಕಣಕ್ಕಿಳಿಯಲಿಲ್ಲ. ಮಲೇಷ್ಯಾದ 8ನೇ ಶ್ರೇಯಾಂಕಿತ ಆಟಗಾರ ಲೀ ಜೀ ಅವರನ್ನು ಶ್ರೀಕಾಂತ್ ಎದುರಿಸಬೇಕಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net