ಹೆಚ್ಚಿದ ಒತ್ತಡಕ್ಕೆ ಮಣಿದ ರೋಹಿತ್​: ಟೆಸ್ಟ್​ ಕ್ಯಾಪ್ಟನ್​ ಜವಾಬ್ದಾರಿ ವಿರಾಟ್​ ಕೊಹ್ಲಿಗೆ ಹಸ್ತಾಂತರ!? | Test Captain

ವಿಜಯವಾಣಿ (14)
Published on

Test Captain: ಪ್ರಸ್ತುತ ಬಾರ್ಡರ್​ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್​ ಪಂದ್ಯವನ್ನು ಭಾರತ ಹೀನಾಯವಾಗಿ ಸೋತ ದಿನದಿಂದಲೂ ಟೀಮ್ ಇಂಡಿಯಾದಲ್ಲಿ ಯಾವುದು ಸರಿ ಕಾಣುತ್ತಿಲ್ಲ. ಒಬ್ಬ ಜವಾಬ್ದಾರಿಯುತ ನಾಯಕನಾಗಿ ರೋಹಿತ್ ಶರ್ಮ ತೋರಿದ ಕಳಪೆ ಪ್ರದರ್ಶನಕ್ಕೆ ಟೀಮ್ ಇಂಡಿಯಾ ಕೋಚ್​ನಿಂದ ಹಿಡಿದು ಮಾಜಿ ಕ್ರಿಕೆಟಿಗರು ಭಾರೀ ಬೇಸರ ಹೊರಹಾಕಿದ್ದಾರೆ. ಸದ್ಯ ಇದೇ ರೋಹಿತ್​ರನ್ನು ಟೆಸ್ಟ್ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿಯುವಂತೆ ಪರೋಕ್ಷವಾಗಿ ಒತ್ತಾಯಿಸಿರುವುದು ಸದ್ಯ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತಂದಿದೆ.

ಕ್ಯಾಪ್ಟನ್​ ಜವಾಬ್ದಾರಿ

ಆಸೀಸ್​ ವಿರುದ್ಧ ಕ್ಯಾಪ್ಟನ್ ಆಟ ತೋರದ ರೋಹಿತ್ ಶರ್ಮ, ಅತ್ಯಂತ ಕಳಪೆ ಪ್ರದರ್ಶನದ ಮೂಲಕ ವ್ಯಾಪಕ ಟೀಕೆ, ವ್ಯಂಗ್ಯಗಳಿಗೆ ಗುರಿಯಾಗಿದ್ದಾರೆ. ವರದಿಯ ಪ್ರಕಾರ, ಆಸ್ಟ್ರೇಲಿಯಾ ವಿರುದ್ಧದ ಸರಣಿ ಸೋಲಿನ ನಂತರ ರೋಹಿತ್ ಟೆಸ್ಟ್ ಕ್ರಿಕೆಟ್​ ಕ್ಯಾಪ್ಟನ್ ಆಗಿ ಮುಂದುವರಿಯುವ ಸಾಧ್ಯತೆಯಿಲ್ಲ ಎನ್ನಲಾಗಿದ್ದು, ಮುಂಬರುವ ಟೆಸ್ಟ್​ ಮ್ಯಾಚ್​ಗಳಿಂದ ರೋಹಿತ್ ಕೇವಲ ಒಬ್ಬ ಆರಂಭಿಕ ಬ್ಯಾಟರ್​ ಆಗಿ ತಂಡದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

ಈ ವಿಷಯ ಕ್ರಿಕೆಟ್ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದ್ದು, ರೋಹಿತ್ ಕ್ಯಾಪ್ಟನ್ಸಿಯಿಲ್ಲ ಎಂದಾದರೆ, ಅವರ ಸ್ಥಾನಕ್ಕೆ ಮೊದಲ ಟೆಸ್ಟ್​ಗೆ ಕ್ಯಾಪ್ಟನ್​ ಆಗಿದ್ದ ಜಸ್ಪ್ರೀತ್ ಬುಮ್ರಾಗೆ ತಂಡದ ಜವಾಬ್ದಾರಿ ಹೊರಲಿದ್ದಾರೆಯೇ ಎಂಬ ಪ್ರಶ್ನೆಗಳು ಚರ್ಚೆಗೆ ಗ್ರಾಸವಾಗಿದೆ. ಆದ್ರೆ, ವರದಿಗಳು ಸೂಚಿಸಿರುವ ಪ್ರಕಾರ, ಬುಮ್ರಾ ಬದಲಿಗೆ ವಿರಾಟ್ ಕೊಹ್ಲಿ ಕ್ಯಾಪ್ಟನ್ ಜವಾಬ್ದಾರಿ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.

ಟೆಸ್ಟ್​ ಕ್ಯಾಪ್ಟನ್​ ಆಗಿ ವಿರಾಟ್

ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕನ ಪಾತ್ರದಿಂದ ಕೆಳಗಿಳಿದಿದ್ದ ವಿರಾಟ್​ ಕೊಹ್ಲಿ, ಟೀಮ್ ಇಂಡಿಯಾವನ್ನು 68 ಪಂದ್ಯಗಳಲ್ಲಿ ಅತ್ಯುತ್ತಮ ಗೆಲುವಿನ ಸರಾಸರಿಯೊಂದಿಗೆ ಮುನ್ನಡೆಸಿದ್ದಾರೆ. 40 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ವಿರಾಟ್​, ಕೇವಲ 17 ಮ್ಯಾಚ್​ಗಳಲ್ಲಿ ಮಾತ್ರ ಸೋಲನ್ನು ಕಂಡಿದ್ದಾರೆ. ಇದರ ಹೊರತಾಗಿಯೂ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದ ಮೊದಲ ಭಾರತೀಯ ನಾಯಕರಾಗಿ ಕೊಹ್ಲಿ ಹೊರಹೊಮ್ಮಿದ್ದಾರೆ (2018/19 ರಲ್ಲಿ 2-1 ಯಶಸ್ಸು). ಸದ್ಯ ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಆಯ್ಕೆಗಾರರು ವಿರಾಟ್​ಗೆ ನಾಯಕನ ಜವಾಬ್ದಾರಿ ಹಸ್ತಾಂತರಿಸಲು ದಿಟ್ಟ ನಿರ್ಧಾರ ಕೈಗೊಂಡಿರುವುದಾಗಿ ವರದಿಯೊಂದು ಉಲ್ಲೇಖಿಸಿದೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net