ಟೆನ್ನಿಸ್​: ಜೋಕೋವಿಕ್​ರ ಕ್ಯಾಲೆಂಡರ್​ ಸ್ಲಾಂ ಕನಸು ಭಗ್ನ; ರಷ್ಯಾದ ಮೆಡ್ವೆಡೆವ್​ಗೆ ಒಲಿದ ಯುಎಸ್​ ಓಪನ್​ ಟ್ರೋಫಿ

tennisopen
Published on

ನ್ಯೂಯಾರ್ಕ್​: ಪ್ರತಿಷ್ಠಿತ ಯುಎಸ್​ ಓಪನ್ ಗ್ರ್ಯಾಂಡ್​ ಸ್ಲಾಂ ಟೆನ್ನಿಸ್​ ಟೂರ್ನಿಯ ಪುರುಷರ ಸಿಂಗಲ್ಸ್​ ವಿಭಾಗದ ಟ್ರೋಫಿಯು ರಷ್ಯಾದ ಡಾನಿಲ್​ ಮೆಡ್ವೆಡೆವ್​ ಅವರ ಪಾಲಾಗಿದೆ. ಭಾನುವಾರ ವರ್ಲ್ಡ್​ ನಂ.1 ನೋವಾಕ್​ ಜೊಕೋವಿಕ್​ ಅವರು ವಿರುದ್ಧ ನಡೆದ ತೀವ್ರ ಹಣಾಹಣಿಯ ಫೈನಲ್​ ಪಂದ್ಯದಲ್ಲಿ 6-4, 6-4 6-4 ಸ್ಕೋರ್​ನೊಂದಿಗೆ ಮೆಡ್ವೆಡೆವ್​​ ಗೆಲುವು ಸಾಧಿಸಿದ್ದಾರೆ.

ತನ್ಮೂಲಕ ಜಾಗತಿಕವಾಗಿ ಎರಡನೇ ರಾಂಕ್​ ಹೊಂದಿದ್ದ ಮೆಡ್ವೆಡೆವ್​ಗೆ ಮೊದಲನೇ ಪ್ರಮುಖ ಚ್ಯಾಂಪಿಯನ್​ಶಿಪ್​ ಲಭಿಸಿದೆ. ಆದರೆ, ಮತ್ತೊಂದೆಡೆ, ಸೆರ್ಬಿಯಾದ ನೋವಾಕ್​ ಜೋಕೋವಿಕ್​ಗೆ ತಮ್ಮ ಮೊದಲ ಕ್ಯಾಲೆಂಡರ್​ ಇಯರ್​ ಸ್ಲಾಮ್​ ಸಾಧಿಸುವ ಕನಸು ಭಗ್ನವಾಗಿದೆ. ಈ ವರ್ಷ ಮೂರು ಗ್ರ್ಯಾಂಡ್ ಸ್ಲಾಂ ಟೈಟಲ್​ಗಳನ್ನು ಗೆದ್ದಿದ್ದ ಜೋಕೋವಿಕ್​ ಅವರು, ಯುಎಸ್​ ಓಪನ್​ ಗೆದ್ದಿದ್ದರೆ, 1969ರ ನಂತರ ಪುರುಷರ ಟೆನ್ನಿಸ್​ನಲ್ಲಿ ಚೊಚ್ಚಲ ಕ್ಯಾಲೆಂಡರ್​ ಸ್ಲಾಂ ಪಡೆದು ಇತಿಹಾಸ ರಚಿಸಬಹುದಿತ್ತು. ಇದೀಗ ಆ ಅವಕಾಶ ಕೈತಪ್ಪಿದೆ.

ನ್ಯೂಯಾರ್ಕಿನ ಆರ್ತರ್​ ಆಶ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯಾವಳಿಯಲ್ಲಿ ಸೋಲನುಭವಿಸಿದ ನಂತರ ಜೋಕೋವಿಕ್ ಕಂಗಳಲ್ಲಿ ನೀರು ಮೂಡಿದವು. ಸ್ಪರ್ಧೆಯ ನಡುವಲ್ಲಿ ಕೂಡ ಪಾಯಿಂಟ್​ ಒಂದನ್ನು ಸೋತಾಗ ಜೋಕೋವಿಕ್​ ತಮ್ಮ ರಾಕೆಟ್ಟನ್ನು ನೆಲಕ್ಕೆ ಕುಟ್ಟಿ ಅಸಮಾಧಾನ ಹೊರಹಾಕಿದ್ದು ಕಂಡುಬಂದಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net