

ನವದೆಹಲಿ: ಭಾರತ ತಂಡ ಮುಂಬರುವ ಆಸ್ಟ್ರೆಲಿಯಾ ಪ್ರವಾಸದ ಆರಂಭದಲ್ಲಿ ಬಾರ್ಡರ್&ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಮುನ್ನ ಭಾರತ ಎ ತಂಡದ ವಿರುದ್ಧ ಪರ್ತ್ನಲ್ಲಿ ಆಡಬೇಕಾಗಿದ್ದ ತ್ರಿದಿನ ಅಭ್ಯಾಸ ಪಂದ್ಯವನ್ನು ರದ್ದುಗೊಳಿಸಲಾಗಿದೆ. 5 ಟೆಸ್ಟ್ ಪಂದ್ಯಗಳ ಸುದೀರ್ ಸರಣಿಗೆ ಮುನ್ನ ಆಟಗಾರರು ಹೆಚ್ಚುವರಿ ನೆಟ್ ಅಭ್ಯಾಸದತ್ತ ಗಮನಹರಿಸಬೇಕೆಂದು ಟೀಮ್ ಮ್ಯಾನೇಜ್ಮೆಂಟ್ ಬಯಸಿರುವುದು ಇದಕ್ಕೆ ಕಾರಣವಾಗಿದೆ.
ಈ ಹಿಂದಿನ ವೇಳಾಪಟ್ಟಿಯ ಪ್ರಕಾರ, ರೋಹಿತ್ ಶರ್ಮ ಸಾರಥ್ಯದ ಭಾರತ ಟೆಸ್ಟ್ ತಂಡ ನವೆಂಬರ್ 15ರಿಂದ 17ರವರೆಗೆ ಋತುರಾಜ್ ಗಾಯಕ್ವಾಡ್ ಸಾರಥ್ಯದ ಭಾರತ ಎ ತಂಡದ ವಿರುದ್ಧ ವಾಕಾದಲ್ಲಿ ಅಭ್ಯಾಸ ಪಂದ್ಯ ಆಡಬೇಕಾಗಿತ್ತು. ಭಾರತ ಎ ತಂಡ ಸದ್ಯ ಆಸ್ಟ್ರೆಲಿಯಾ ಪ್ರವಾಸದಲ್ಲೇ ಇರುವುದರಿಂದ ಈ ಪಂದ್ಯ ಆಯೋಜಿಸಲಾಗಿತ್ತು. ಆದರೆ ಮುಖ್ಯ ಕೋಚ್ ಗೌತಮ್ ಗಂಭೀರ್ ಜತೆಗೆ ಭಾರತ ತಂಡದ ಕೆಲ ಹಿರಿಯ ಆಟಗಾರರು ಆಸೀಸ್ನಲ್ಲಿ ನೆಟ್ಸ್ನಲ್ಲೇ ಹೆಚ್ಚಿನ ಅಭ್ಯಾಸ ನಡೆಸಲು ಬಯಸಿದ್ದಾರೆ. ನವೆಂಬರ್ 22ರಿಂದ ಪರ್ತ್ನಲ್ಲೇ ಟೆಸ್ಟ್ ಸರಣಿ ಶುರುವಾಗಲಿದೆ.
ತವರಿನಲ್ಲಿ ಕಿವೀಸ್ ವಿರುದ್ಧ ಸರಣಿ ಸೋತಿರುವುದರಿಂದ ಭಾರತ ತಂಡವೀಗ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೇರಲು ಆಸೀಸ್ ನೆಲದಲ್ಲಿ 3ರಿಂದ 4 ಪಂದ್ಯ ಗೆಲ್ಲುವ ಸವಾಲು ಎದುರಿಸುತ್ತಿದೆ. ಅಭ್ಯಾಸ ಪಂದ್ಯದಲ್ಲಿ ಬ್ಯಾಟರ್ ಬೇಗನೆ ಔಟಾದರೆ ಹೆಚ್ಚಿನ ಬ್ಯಾಟಿಂಗ್ ಅಭ್ಯಾಸ ನಡೆಸುವ ಅವಕಾಶ ತಪ್ಪಿಹೋಗುತ್ತದೆ. ಆದರೆ ನೆಟ್ಸ್ನಲ್ಲಾದರೆ ಬೇಕಾದಷ್ಟು ಸಮಯ ಬ್ಯಾಟಿಂಗ್ ನಡೆಸಬಹುದಾಗಿರುತ್ತದೆ.