ಪಾಕ್ ನೆಲದಲ್ಲಿ ಆಡಲು ನಿರಾಕರಿಸಿದ ಭಾರತ! ಚಾಂಪಿಯನ್ಸ್ ಟ್ರೋಫಿಗಾಗಿ ಹೊಸ ಷರತ್ತು ಮುಂದಿಟ್ಟ BCCI

ವಿಜಯವಾಣಿ - 2024-11-08T165150.123
Published on

ಲಾಹೋರ್​: 2025ರಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ಈಗಿನಿಂದಲೇ ದೊಡ್ಡ ಮಟ್ಟದ ಲೆಕ್ಕಾಚಾರಗಳು ಶುರುವಾಗಿದ್ದು, ಈ ಬಾರಿಯ ಅತಿಥ್ಯವನ್ನು ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​ ವಹಿಸಿಕೊಂಡಿರುವುದು ಮತ್ತಷ್ಟು ವಿಶೇಷ. ತಂಡದಲ್ಲಿ ಯಾವ ಬೌಲರ್​, ಬ್ಯಾಟರ್​ ಹಾಗೂ ಆಲ್​ರೌಂಡರ್​ ಇದ್ದರೆ ನಮಗೆ ಗೆಲುವು ಬಹಳ ಸುಲಭವಾಗುತ್ತದೆ ಎಂಬುದನ್ನು ಯೋಚಿಸಬೇಕಿದ್ದ ಪಾಕ್​, ಇಲ್ಲಿಯವರೆಗೂ ತಮ್ಮ ನೆಲಕ್ಕೆ ಪ್ರಯಾಣಿಸದ ಟೀಮ್ ಇಂಡಿಯಾವನ್ನು ಹೇಗಾದರೂ ಮಾಡಿ ಕರೆಸಿಕೊಳ್ಳುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ನಾನಾ ರೀತಿಯ ಕಸರತ್ತು ಮಾಡುತ್ತಿರುವ ಪಿಸಿಬಿ ಆಯ್ಕೆಯನ್ನು ಇದೀಗ ಬಿಸಿಸಿಐ (BCCI) ನಿರಾಕರಿಸಿದೆ.

ಮುಂದಿನ ವರ್ಷ ನಡೆಯಲಿರುವ ಪಾಕ್ ಅತಿಥ್ಯದ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭಾರತ ನಿಮ್ಮ ನೆಲಕ್ಕೆ ಬರುವುದಿಲ್ಲ ಎಂದು ಬಿಸಿಸಿಐ ಈ ಹಿಂದೆಯೇ ಸ್ಪಷ್ಟವಾಗಿ ತಿಳಿಸಿತ್ತು. ಇಷ್ಟಾದರೂ ಸಹ ಹಲವು ಆಯ್ಕೆಗಳನ್ನು ಮುಂದಿಟ್ಟಿದ್ದ ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​ಗೆ ಮತ್ತೆ ಮನವರಿಕೆ ಮಾಡಿರುವ ಬಿಸಿಸಿಐ, ಲಾಹೋರ್​ನಲ್ಲಿ ಟೀಮ್ ಇಂಡಿಯಾ ಕಾಲಿಡುವುದಿಲ್ಲ. ಹೀಗಾಗಿ ನಿಮ್ಮ ನಿರ್ಧಾರವನ್ನು ಬದಲಿಸಿಕೊಳ್ಳಬೇಕು ಎಂದು ಭಾರತ ಹೊಸ ಡಿಮ್ಯಾಂಡ್​ ಇಟ್ಟಿದೆ. ಆ ಬೇಡಿಕೆ ಹೀಗಿದೆ.

ಏನದು ಬಿಸಿಸಿಐ ಬೇಡಿಕೆ?

ಪಾಕಿಸ್ತಾನದ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ನಡೆಯುವ 50 ಓವರ್‌ಗಳ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ವಿಶ್ವದ ಟಾಪ್ ಎಂಟು ತಂಡಗಳು ಸ್ಪರ್ಧಿಸಲು ಸಜ್ಜಾಗಿವೆ. ಈ ಪೈಕಿ ಭಾರತ ಪ್ರಬಲ ತಂಡವಾಗಿದೆ. ಇದೇ ವಿಷಯವನ್ನು ಮುಂದಿಟ್ಟು ತಮ್ಮ ನೆಲಕ್ಕೆ ಟೀಮ್ ಇಂಡಿಯಾ ಬಂದರೆ ಒಳಿತು. ಬೇಕಾದರೆ ಲಾಹೋರ್​ನಲ್ಲಿ ನಡೆಯುವ ಮ್ಯಾಚ್​ ಅವಧಿ ಮಾತ್ರ ಭಾರತ ತಂಡ ಇಲ್ಲಿ ಇರಲಿ. ಪಂದ್ಯ ಮುಗಿಯುತ್ತಿದ್ದಂತೆ ಭಾರತದ ಚಂಡೀಗಢ ಅಥವಾ ದೆಹಲಿಗೆ ತರಳಲಿ ಎಂದು ಪಿಸಿಬಿ ತಿಳಿಸಿತು. ಆದರೆ, ಈ ಆಯ್ಕೆಗಳನ್ನು ತಿರಸ್ಕರಿಸುವ ಬಿಸಿಸಿಐ, ನಮ್ಮ ಸರ್ಕಾರದೊಂದಿಗೆ ಸಮಾಲೋಚಿಸಿದ ನಂತರ ನಾವು ಈ ನಿಲುವಿಗೆ ಅಂಟಿಕೊಳ್ಳಲು ನಿರ್ಧರಿಸಿದ್ದೇವೆ. ಈಗಾಗಲೇ ನಾವು ಪಿಸಿಬಿಗೆ ಪತ್ರ ಬರೆದು, ನಮ್ಮ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸುವಂತೆ ಕೋರಿದ್ದೇವೆ. ಇದಕ್ಕೆ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಮುಂದೇನು?

ಒಂದೆಡೆ ದುಬೈಗೆ ಭಾರತ ವಿರುದ್ಧದ ಪಂದ್ಯಗಳನ್ನು ವರ್ಗಾಯಿಸಲು ಪಾಕಿಸ್ತಾನ ಸಿದ್ಧವಿಲ್ಲ. ಮತ್ತೊಂದೆಡೆ, ಟೀಮ್ ಇಂಡಿಯಾವನ್ನು ಲಾಹೋರ್​ಗೆ ಕಳಿಸಲು ಬಿಸಿಸಿಐ ಒಪ್ಪಿಗೆ ನೀಡುತ್ತಿಲ್ಲ. ಈ ಎಲ್ಲಾ ಬೆಳವಣಿಗೆಯ ಮಧ್ಯೆ ಪಾಕಿಸ್ತಾನಕ್ಕೆ ಉಳಿದಿರುವ ಕಡೆಯ ಆಯ್ಕೆ ಎಂದರೆ ಅದು ಟೀಮ್ ಇಂಡಿಯಾ ಪಂದ್ಯಗಳನ್ನು ದುಬೈ ವರ್ಗಾಯಿಸುವುದು. ಈ ವಿಚಾರಕ್ಕೆ ಪಿಸಿಬಿ ಏನು ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net