

ನವದೆಹಲಿ: ಟಿ20 ವಿಶ್ವಕಪ್ನ ಸೆಮಿಸ್ ಲೆಕ್ಕಾಚಾರಗಳು ದಿನದಿಂದ ದಿನಕ್ಕೆ ಬದಲಾಗುತ್ತಿವೆ. ಗ್ರೂಪ್ 2ರಿಂದ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಮಿಸ್ ತಲುಪಿವೆ. ಆದರೆ ಗ್ರೂಪ್ 1ರಿಂದ ಭಾರತ ಮತ್ತು ಆಸ್ಟ್ರೇಲಿಯಾ ಸೆಮಿಸ್ ತಲುಪಲಿವೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆಸೀಸ್ ವಿರುದ್ಧ ಅಫ್ಘಾನಿಸ್ತಾನದ ಅನಿರೀಕ್ಷಿತ ಜಯದೊಂದಿಗೆ ಲೆಕ್ಕಾಚಾರಗಳೆಲ್ಲ ಉಲ್ಟಾಪಲ್ಟಾ ಆಯಿತು. ಅಫ್ಘಾನಿಸ್ತಾನದ ಗೆಲುವು ಭಾರತದ ಸೆಮಿಸ್ ಪ್ರವೇಶಿಸುವ ಸಾಧ್ಯತೆಯ ಮೇಲೆ ಭಾಗಶಃ ಪರಿಣಾಮ ಬೀರಿದೆ. ಇಂದು (ಜೂನ್ 24) ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ಸೋತರೆ ತವರಿಗೆ ಹೋಗಬೇಕಾಗುತ್ತದೆ. ಆ ಲೆಕ್ಕಾಚಾರಗಳು ಹೇಗಿವೆ ಎಂಬುದನ್ನು ನಾವೀಗ ನೋಡೋಣ.
ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನದ ಗೆಲುವು ಟೀಮ್ ಇಂಡಿಯಾಗೆ ತಲೆನೋವಾಗಿ ಪರಿಣಮಿಸಿದೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಸೋತಿದ್ದರೆ ಭಾರತ ತಂಡ ನೇರವಾಗಿ ಸೆಮಿಸ್‌ಗೆ ಪ್ರವೇಶಿಸುತ್ತಿತ್ತು. ಏಕೆಂದರೆ, ಭಾರತ ಮತ್ತು ಆಸ್ಟ್ರೇಲಿಯಾ ಸಮವಾಗಿ 4 ಅಂಕಗಳನ್ನು ಹೊಂದಿರುತ್ತಿದ್ದವು ಮತ್ತು ಉಳಿದ ತಂಡಗಳಿಗೆ ನಾಲ್ಕು ಅಂಕ ಪಡೆಯುವ ಅವಕಾಶವೇ ಇರುತ್ತಿರಲಿಲ್ಲ. ಆದರೆ, ಒಂದಏ ಒಂದು ಗೆಲುವಿನೊಂದಿಗೆ ಪರಿಸ್ಥಿತಿ ಇದೀಗ ಬದಲಾಗಿದೆ. ಅಫ್ಘಾನಿಸ್ತಾನ ಕೂಡ ಸೆಮಿಸ್ ರೇಸ್‌ಗೆ ಪ್ರವೇಶಿಸಿದೆ.
ಆದರೂ, ಈ ಟೂರ್ನಿಯಿಂದ ಟೀಮ್ ಇಂಡಿಯಾ ನಿರ್ಗಮಿಸುವ ಸಾಧ್ಯತೆ ತೀರಾ ಕಡಿಮೆ. ಆಸೀಸ್ ವಿರುದ್ಧ ಭಾರತ ಗೆದ್ದರೆ ನೇರವಾಗಿ ಸೆಮಿಸ್‌ಗೆ ಪ್ರವೇಶಿಸಲಿದೆ. ಆದರೆ, ಸೋತರೆ ನೆಟ್ ರನ್ ರೇಟ್ ಅನ್ನು ಅವಲಂಬಿಸಬೇಕಾಗುತ್ತದೆ. ಆದಾಗ್ಯೂ, +2.425ರ ನೆಟ್ ರನ್ ರೇಟ್ ಹೊಂದಿರುವ ಟೀಮ್ ಇಂಡಿಯಾ ಔಟ್ ಆಗುವ ಸಾಧ್ಯತೆ ತುಂಬಾ ಕಡಿಮೆ.
ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಈ ಟೂರ್ನಿಯಿಂದ ಟೀಮ್ ಇಂಡಿಯಾ ಹೊರಬೀಳಲು ಆಸ್ಟ್ರೇಲಿಯಾ 41 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳಿಂದ ಭಾರತದ ವಿರುದ್ಧ ಗೆಲ್ಲಬೇಕು. ಮತ್ತೊಂದೆಡೆ, ಅಫ್ಘಾನಿಸ್ತಾನವು ಬಾಂಗ್ಲಾದೇಶವನ್ನು 81 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳ ಅಂತರದಿಂದ ಸೋಲಿಸಬೇಕಾಗಿದೆ. ಹೀಗಾದಾಗ ಮಾತ್ರ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ಉತ್ತಮ ರನ್ ರೇಟ್ ಪಡೆಯಲಿದೆ. ಇದರೊಂದಿಗೆ ಟೀಮ್ ಇಂಡಿಯಾ ಟೂರ್ನಿಯಿಂದ ನಿರ್ಗಮಿಸಲಿದೆ. ಆದರೆ, ಇದು ಸಂಭವಿಸುವುದು ಬಹುತೇಕ ಅಸಾಧ್ಯ. ಏಕೆಂದರೆ ಸದ್ಯ ಟೀಮ್ ಇಂಡಿಯಾ ಸೂಪರ್ ಫಾರ್ಮ್ನಲ್ಲಿದೆ. ಅದನ್ನು ಆಸೀಸ್ ವಿರುದ್ಧದ ಪಂದ್ಯದಲ್ಲಿ ತೋರಿಸಿ ಗೆಲ್ಲುವ ಹಂಬಲದಲ್ಲಿದೆ.
ಇನ್ನು ಅಫ್ಘಾನಿಸ್ತಾನ ವಿರುದ್ಧದ ಸೋಲಿನ ನಂತರ, ಆಸೀಸ್ ಸ್ವಲ್ಪ ಆತ್ಮವಿಶ್ವಾಸವನ್ನು ಕಳೆದುಕೊಂಡಿದೆ. ಇದು ಭಾರತಕ್ಕೆ ವರವಾಗಬಹುದು. ಇದರ ಜೊತೆಗೆ ಬಾಂಗ್ಲಾದೇಶವನ್ನು 81ಕ್ಕೂ ಹೆಚ್ಚು ರನ್‌ಗಳಿಂದ ಸೋಲಿಸುವುದು ಅಫ್ಘಾನಿಸ್ತಾನಕ್ಕೆ ಕಷ್ಟವೆಂದೇ ಹೇಳಬೇಕು. ಆದರೆ, ಕ್ರಿಕೆಟ್ನಲ್ಲಿ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ಕ್ರೀಡಾ ತಜ್ಞರು. ಆದರೆ ಈ ಲೆಕ್ಕಾಚಾರಗಳು ಟೀಮ್ ಇಂಡಿಯಾ ಅಭಿಮಾನಿಗಳನ್ನು ಕೊಂಚ ಒತ್ತಡಕ್ಕೆ ಸಿಲುಕಿಸಿವೆ ಎನ್ನಬಹುದು. (ಏಜೆನ್ಸೀಸ್)