ಚಾಂಪಿಯನ್ಸ್​ ಟ್ರೋಫಿಯ ವಿಜೇತರು ಬಿಳಿ ಜಾಕೆಟ್​ ಏಕೆ ಧರಿಸಬೇಕು? ಇಲ್ಲಿದೆ ನೋಡಿ ಅಚ್ಚರಿಯ ಕಾರಣ! Team India

Team India
Published on

Team India : ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಈ ಮೂರು ಅಂತಾರಾಷ್ಟ್ರೀಯ ಕ್ರಿಕೆಟ್​ ಟೂರ್ನಿಗಳಲ್ಲಿ ವಿಜೇತರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಟ್ರೋಫಿಯನ್ನು ನೀಡುವುದು ಸಾಮಾನ್ಯ ಸಂಗತಿ. ಆದರೆ, ಇದೆಲ್ಲದಕ್ಕಿಂತ ವಿಭಿನ್ನವಾಗಿ ನಿಲ್ಲುತ್ತದೆ ಚಾಂಪಿಯನ್ಸ್ ಟ್ರೋಫಿ. ಏಕೆಂದರೆ, ಇಲ್ಲಿ ವಿಜೇತರಿಗೆ ಕೇವಲ ಟ್ರೋಫಿ ಮಾತ್ರವಲ್ಲ, ವಿಶೇಷವಾದ ಬಿಳಿ ಜಾಕೆಟ್‌ಗಳನ್ನು ಸಹ ನೀಡಲಾಗುತ್ತದೆ.

ಜಂಟಲ್‌ಮ್ಯಾನ್ಸ್​ ಗೇಮ್​ ಕ್ರಿಕೆಟ್‌ನಲ್ಲಿ ಪ್ರತಿಭೆ ಮತ್ತು ಗೌರವದ ಸಂಕೇತವಾಗಿ ಟ್ರೋಫಿಯೊಂದಿಗೆ ಈ ಬಿಳಿ ಜಾಕೆಟ್‌ಗಳನ್ನು ನೀಡಲಾಗುತ್ತದೆ. ವಿಜೇತ ತಂಡದ ಎಲ್ಲ ಸದಸ್ಯರು ಈ ಬಿಳಿ ಜಾಕೆಟ್‌ಗಳನ್ನು ಧರಿಸಿ, ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ, ಕುಣಿದು ಕುಪ್ಪಳಿಸುತ್ತಾರೆ. ಈ ಬಿಳಿ ಜಾಕೆಟ್​ಗೂ ಒಂದು ಹಿನ್ನೆಲೆ ಇದೆ. ಅದೇನೆಂದು ನಾವೀಗ ತಿಳಿದುಕೊಳ್ಳೋಣ.

ಅಂದಹಾಗೆ ಈ ಪಂದ್ಯಾವಳಿಯನ್ನು 1998ರಲ್ಲಿ ಬಾಂಗ್ಲಾದೇಶದಲ್ಲಿ ಮೊದಲು ಪ್ರಾರಂಭಿಸಲಾಯಿತು. ಆ ಸಮಯದಲ್ಲಿ ನಾಕೌಟ್ ಪಂದ್ಯಾವಳಿಯಾಗಿ ಪ್ರಾರಂಭವಾದ ಈ ಟೂರ್ನಮೆಂಟ್​ ಮಿನಿ ವಿಶ್ವಕಪ್ ಎಂದೇ ಬಣ್ಣಿಸಲಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ನಡೆದ 2009ರ ಆವೃತ್ತಿಯಲ್ಲಿ ಬಿಳಿ ಜಾಕೆಟ್​ಗಳನ್ನು ಪರಿಚಯಿಸಲಾಯಿತು. ಇದು ಗಣ್ಯ ಯಶಸ್ಸಿನ ಪ್ರಬಲ ಲಾಂಛನವಾಗಿ ಬೆಳೆದಿದೆ. ವಿಶ್ವದ ಅತ್ಯುತ್ತಮ ಏಕದಿನ ತಂಡಕ್ಕೆ ಗೌರವದ ಸಂಕೇತವಾಗಿ ಇದನ್ನು ನೀಡಲಾಗುತ್ತದೆ.

ಮುಂಬೈನ ಪ್ರಸಿದ್ಧ ಫ್ಯಾಷನ್ ಡಿಸೈನರ್ ಬಬಿತಾ ಅವರು ಈ ಬಿಳಿ ಜಾಕೆಟ್‌ಗಳ ವಿನ್ಯಾಸಕಿ. ನಮಗೆ, ಇದು ಸಾಮಾನ್ಯ ಬಿಳಿ ಸೂಟ್‌ನಂತೆ ಕಾಣುತ್ತದೆ. ಆದರೆ ಇದು ತುಂಬಾ ವಿಶೇಷವಾದ ಇಟಾಲಿಯನ್ ಉಣ್ಣೆಯಿಂದ ಮಾಡಲ್ಪಟ್ಟಿದೆ. ಈ ಜಾಕೆಟ್‌ಗಳು ನವೀನ ವಿನ್ಯಾಸಗಳು, ಪಟ್ಟೆಗಳು ಮತ್ತು ಚಾಂಪಿಯನ್ಸ್ ಟ್ರೋಫಿ ಲೋಗೋದೊಂದಿಗೆ ಚಿನ್ನದ ಕಸೂತಿ ಕೆಲಸಗಳನ್ನು ಒಳಗೊಂಡಿವೆ.

ಗಾಲ್ಫ್‌ನಲ್ಲಿ ದಿ ಮಾಸ್ಟರ್ಸ್‌ನ ಹಸಿರು ಜಾಕೆಟ್‌ಗಳಂತೆ ಪಂದ್ಯಾವಳಿಗೆ ಒಂದು ವಿಶಿಷ್ಟ ಗುರುತನ್ನು ನೀಡುವ ಐಸಿಸಿಯ ಕ್ರಮದ ಭಾಗವಾಗಿ ಇದನ್ನು ಮೊದಲು 2009 ಆಗಸ್ಟ್ 13ರಂದು ಅನಾವರಣಗೊಳಿಸಲಾಯಿತು. ಈ ಬಾರಿ ಪಾಕಿಸ್ತಾನ ಆಯೋಜನೆ ಮಾಡಿದ್ದರಿಂದ ಈ ವಿಶೇಷ ಜಾಕೆಟ್‌ಗಳನ್ನು ಆ ದೇಶದ ಕ್ರಿಕೆಟ್​ ದಂತಕಥೆ ಮತ್ತು ಮಾಜಿ ನಾಯಕ ವಾಸಿಮ್ ಅಕ್ರಮ್ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅಕ್ರಮ್, ಬಿಳಿ ಜಾಕೆಟ್ ಉತ್ಸಾಹವನ್ನು ಹೆಚ್ಚಿಸುತ್ತದೆ ಮತ್ತು ಉನ್ನತ ಮಟ್ಟದಲ್ಲಿ ಆಡಿದವರ ಸಾಧನೆಯನ್ನು ಗೌರವಿಸುತ್ತದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಅತ್ಯುತ್ತಮ ಪಂದ್ಯಾವಳಿಗೆ ಸಾಕ್ಷಿಯಾಗಿದೆ. ಇದು ಕ್ರಿಕೆಟ್‌ನ ಶ್ರೇಷ್ಠತೆಯನ್ನು ವಿಶ್ವಾದ್ಯಂತ ಹರಡಿದೆ. ಇದು ಪ್ರಾರಂಭದಿಂದಲೂ ಅಪಾರ ಜನಪ್ರಿಯತೆಯನ್ನು ಗಳಿಸಿದೆ ಎಂದು ಹೇಳಿದರು.

ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಎಂಟು ವರ್ಷಗಳ ಬಳಿಕ ಪುನರಾರಂಭಗೊಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಭಾರತ ತಂಡ ಅಜೇಯವಾಗಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ನಾಯಕ ರೋಹಿತ್ ಶರ್ಮ (76 ರನ್, 83 ಎಸೆತ, 7 ಬೌಂಡರಿ, 3 ಸಿಕ್ಸರ್) ಬಿರುಸಿನ ಆಟ ಹಾಗೂ ನಾಲ್ವರು ಸ್ಪಿನ್ನರ್‌ಗಳ ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು 4 ವಿಕೆಟ್‌ಗಳ ರೋಚಕ ಗೆಲುವು ಒಲಿಸಿಕೊಂಡಿದೆ. ಇದರೊಂದಿಗೆ ರೋಹಿತ್ ಶರ್ಮ ಸಾರಥ್ಯದಲ್ಲಿ 12 ವರ್ಷಗಳ ಬಳಿಕ ಭಾರತ ತಂಡ ‘ಮಿನಿ ವಿಶ್ವಕಪ್’ ಗೆದ್ದುಕೊಂಡಿದೆ. ಒಟ್ಟಾರೆ ಮೂರನೇ ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ, ಈ ಸಾಧನೆ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ರೋಹಿತ್ ಶರ್ಮ ಕಾಂಬಿನೇಷನ್‌ನಲ್ಲಿ ಗೆದ್ದ ಮೊದಲ ಐಸಿಸಿ ಟೂರ್ನಿ ಇದಾಗಿದೆ.

ದುಬೈ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತೀಯ ಸ್ಪಿನ್ನರ್‌ಗಳ ಕಡಿವಾಣದ ನಡುವೆ ಬ್ಯಾಟರ್ ಡೆರಿಲ್ ಮಿಚೆಲ್ (63 ರನ್, 101 ಎಸೆತ, 3 ಬೌಂಡರಿ) ಹಾಗೂ ಮಿಚೆಲ್ ಬ್ರೇಸ್‌ವೆಲ್ (53* ರನ್, 40 ಎಸೆತ, 3 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ನೆರವಿನಿಂದ ನ್ಯೂಜಿಲೆಂಡ್ 7 ವಿಕೆಟ್‌ಗೆ 251 ರನ್‌ಗಳ ಪೈಪೋಟಿಯುತ ಮೊತ್ತ ಕಲೆಹಾಕಿತು. ಪ್ರತಿಯಾಗಿ ರೋಹಿತ್ ಶರ್ಮ ಹಾಗೂ ಶುಭಮಾನ್ ಗಿಲ್ (31) ಒದಗಿಸಿದ ಬಿರುಸಿನ ಆರಂಭದ ನಡುವೆಯೂ 17 ರನ್‌ಗಳ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಶ್ರೇಯಸ್ ಅಯ್ಯರ್ (48 ರನ್, 62 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ಆಲ್ರೌಂಡರ್ ಅಕ್ಷರ್ ಪಟೇಲ್ (29) ಚೇಸಿಂಗ್ ಜೀವಂತವಿಟ್ಟರು. ಕೊನೆಯಲ್ಲಿ ಕನ್ನಡಿಗ ಕೆಎಲ್ ರಾಹುಲ್ (34* ರನ್, 33 ಎಸೆತ, 1 ಬೌಂಡರಿ, 1 ಸಿಕ್ಸರ್) ಉಪಯುಕ್ತ ಆಟದ ನೆರವಿನಿಂದ 49 ಓವರ್‌ಗಳಲ್ಲಿ 6 ವಿಕೆಟ್‌ಗೆ 254 ಭಾರತಕ್ಕೆ ಗೆಲುವು ತಂದುಕೊಟ್ಟರು. ಕೊನೆಯವರೆಗೂ ಪಂದ್ಯದಲ್ಲಿ ಹೋರಾಡಿದ ನ್ಯೂಜಿಲೆಂಡ್ ರನ್ನರ್ ಅಪ್‌ಗೆ ಸಮಾಧಾನ ಕಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net