

ಲಾಹೋರ್: 2025ರಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿಕೊಂಡಿರುವ ಪಾಕಿಸ್ತಾನ, ಟೀಮ್ ಇಂಡಿಯಾವನ್ನು ತಮ್ಮ ನೆಲಕ್ಕೆ ಕರೆಸಿಕೊಳ್ಳಲು ಭಾರೀ ಕಸರತ್ತು ನಡೆಸುತ್ತಿದೆ. ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಟೂರ್ನಿಗೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳಿಸಿಕೊಡಿ ಎಂದು ಪಿಸಿಬಿ ಈ ಹಿಂದೆಯೇ ಬಿಸಿಸಿಐಗೆ ಒತ್ತಾಯಿಸಿತ್ತು. ಆದ್ರೆ, ಇದಕ್ಕೆ ಕಿಂಚಿತ್ತು ಆಸ್ಪದ ನೀಡದ ಭಾರತೀಯ ಕ್ರಿಕೆಟ್ ಮಂಡಳಿ, ಯಾವುದೇ ಕಾರಣಕ್ಕೂ ಟೀಮ್ ಇಂಡಿಯಾ ಪಾಕ್ಗೆ ಬರೋದಿಲ್ಲ ಎಂದು ಖಡಕ್ ಆಗಿ ತಿಳಿಸಿತ್ತು. ಈ ವಿಚಾರ ದೊಡ್ಡ ವಿವಾದಕ್ಕೆ ತಿರುಗಿದ್ದು, ಮೆನ್ ಇನ್ ಬ್ಲ್ಯೂ ಪಡೆಯನ್ನು ಲಾಹೋರ್ಗೆ ಕರೆತರುವ ಪಾಕ್ನ ಎಲ್ಲಾ ಪ್ರಯತ್ನವೂ ಸದ್ಯ ವಿಫಲವಾಗಿದೆ. ಈ ಎಲ್ಲಾ ಬೆಳವಣಿಗೆ ಕಂಡ ಪಾಕ್ ಮಾಜಿ ಕ್ರಿಕೆಟಿಗ ಶಾಹೀದ್ ಆಫ್ರಿದಿ ಟೀಮ್ ಇಂಡಿಯಾ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಟೀಮ್ ಇಂಡಿಯಾವನ್ನು ಪಾಕ್ ನೆಲಕ್ಕೆ ಕಳಿಸಿಕೊಡಿ ಎಂದು ಬಿಸಿಸಿಐಗೆ ಪಿಸಿಬಿ ಮಾಡಿದ್ದ ಮನವಿ ವಿಫಲಗೊಂಡ ಬೆನ್ನಲ್ಲೇ ಪಾಕ್ ಮಾಜಿ ಹಿರಿಯ ಕ್ರಿಕೆಟಿಗರು ಇದ್ಯಾಕೋ ಸರಿಬರುವಂತೆ ತೋರುತ್ತಿಲ್ಲ ಎಂದು ಭಾವಿಸಿ, ನೇರವಾಗಿ ಐಸಿಸಿಗೆ ಗಾಳ ಹಾಕಿತ್ತು. ಐಸಿಸಿ ಅಧಿಕಾರಿಗಳಿಗೆ ಪತ್ರ ಬರೆದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ಚಾಂಪಿಯನ್ಸ್ ಟ್ರೋಫಿಗಾಗಿ ಭಾರತವನ್ನು ತಮ್ಮ ನೆಲಕ್ಕೆ ಕಳಿಸಿಕೊಡುವಲ್ಲಿ ನೀವು ಮುಂದಾಳತ್ವ ವಹಿಸಬೇಕು ಎಂದು ಮನವಿ ಸಲ್ಲಿಸಿದೆ. ಆದ್ರೆ, ಇಲ್ಲಿಂದ ಮುಂದೇನು? ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.
ಇನ್ನು ಈ ಕುರಿತಂತೆ ಪಾಕಿಸ್ತಾನ ಸುದ್ದಿಗಾರರೊಂದಿಗೆ ಮಾತನಾಡಿರುವ ಶಾಹೀದ್ ಆಫ್ರಿದಿ, ಚಾಂಪಿಯನ್ಸ್ ಟ್ರೋಫಿಗೆ 7 ತಿಂಗಳಷ್ಟೇ ಬಾಕಿ ಉಳಿದಿದೆ. ಹೀಗಿರುವಾಗ ಪಾಕಿಸ್ತಾನ ನೆಲಕ್ಕೆ ಬಂದು ಆಡಲು ಟೀಮ್ ಇಂಡಿಯಾ ರೆಡಿಯಿಲ್ಲ. ಇದಕ್ಕೆ ಅವರು ನೀಡುವ ಕಾರಣ ಭದ್ರತೆ ಸಮಸ್ಯೆ. ಇದನ್ನು ನಾನು ಖಂಡಿತ ಒಪ್ಪುವುದಿಲ್ಲ. ಅಂದು ನಾವು ಕೂಡ ಹಲವಾರು ಬೆದರಿಕೆ ಇದ್ದರೂ ಸಹ ಭಾರತ ನೆಲಕ್ಕೆ ಪ್ರಯಾಣ ಬೆಳೆಸಿದ್ದೆವು ಎಂದು ಹೇಳಿದರು.
ಅಂದು ನಮಗೂ ಹಲವಾರು ಬೆದರಿಕೆ ಇತ್ತು. ಭದ್ರತಾ ಸಮಸ್ಯೆಗಳು ಕಾಡುತ್ತಿತ್ತು. ಇಷ್ಟೆಲ್ಲಾ ಇದ್ದರೂ ಸಹ ನಾವು ಪದೇ ಪದೇ ಟೂರ್ನಿಯ ಮೇರೆಗೆ ಭಾರತಕ್ಕೆ ಪ್ರಯಾಣ ಮಾಡಿದ್ದೇವೆ. ಟೀಮ್ ಇಂಡಿಯಾ ಕಾಳಜಿ ನಮಗಿದೆ. ಪಾಕಿಸ್ತಾನಕ್ಕೆ ಬರಲು ಭಾರತ ನಿರ್ಧರಿಸಿದರೆ ಅದನ್ನು ಖಂಡಿತ ನಾವು ಸ್ವಾಗತಿಸುತ್ತೇವೆ. ಅಕಸ್ಮಾತ್ ಅವರು ಪಾಕ್ ಟೂರ್ನ ಕೈಬಿಟ್ಟರೆ ಅದಕ್ಕೆ ಅವರು ಕೊಡುವ ಕಾರಣ ಸೆಕ್ಯೂಟಿರಿ ಸಮಸ್ಯೆ ಎಂಬುದು ನಮಗೆ ಗೊತ್ತಿದೆ ಹೇಳಿದ್ದಾರೆ,(ಏಜೆನ್ಸೀಸ್).