

ಗಂಗೊಳ್ಳಿ: ಪುರಸಭಾ ವ್ಯಾಪ್ತಿಯ ಪಂಚಗಂಗಾವಳಿ ನದಿಯಲ್ಲಿ ಹೂಳು ತುಂಬಿದ್ದು, ಈ ನದಿಯನ್ನೇ ನಂಬಿ 500ಕ್ಕೂ ಹೆಚ್ಚು ಕುಟುಂಬಗಳು ಜೀವನ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಹೂಳು ತೆಗೆಸಬೇಕು ಎಂದು ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮೀನುಗಾರಿಕಾ ಸಚಿವ ಮಂಕಾಳ ವೈದ್ಯರಿಗೆ ಶನಿವಾರ ಮನವಿ ಮಾಡಿದರು.
ನದಿ ತೀರದ ಕುಟುಂಬಗಳಿಂದ ಮೀನುಗಾರಿಕೆ, ಚಿಪ್ಪು ಹೆಕ್ಕುವುದು, ಮೀನು ಸಾಕಣೆ, ಪ್ರವಾಸೋದ್ಯಮ ಸಹಿತ ವಿವಿಧ ಚಟುವಟಿಕೆ ನಡೆಯುತ್ತಿದ್ದು, ಮರಳುಗಾರಿಕೆಯೂ ನಡೆಯುತ್ತಿತ್ತು. ಈ ಸಂದರ್ಭ ಹೂಳು ಶೇಖರಣೆಯಾಗುತ್ತಿರಲಿಲ್ಲ. ಸರ್ಕಾರದ ಹೊಸ ಕಾನೂನಿನ ಪರಿಣಾಮ ಮರಳುಗಾರಿಕೆ ನಡೆಯುತ್ತಿಲ್ಲ. ಈ ಕಾರಣದಿಂದ ಹೂಳು ಶೇಖರಣೆಯಾಗಿದೆ ಎಂದು ತಿಳಿಸಿದ್ದಾರೆ.
ಹೂಳಿನ ಸಮಸ್ಯೆ ಕುರಿತು ಪಂಚಗಂಗಾವಳಿ ನದಿ ತೀರದ ಮೀನುಗಾರ ಸಮುದಾಯದವರು ಮನವಿ ಮಾಡಿದ್ದು, ಪರಿಶೀಲಿಸಿ ಕ್ರಮಕೈಗೊಳ್ಳುವ ಮೂಲಕ ಮೀನುಗಾರರ ಸಮುದಾಯಕ್ಕೆ ನೆರವಾಗಬೇಕು ಎಂದು ಮಂಜುನಾಥ ಭಂಡಾರಿ ಸಚಿವರಿಗೆ ತಿಳಿಸಿದ್ದಾರೆ.