

ಕೊಲಂಬೊ: ವಿಶ್ವಕಪ್ ಪೂರ್ವಸಿದ್ಧತೆಗೆ ಮಹತ್ವದ ವೇದಿಕೆ ಎನಿಸಿರುವ ಏಷ್ಯಾಕಪ್ ಏಕದಿನ ಟೂರ್ನಿ ಈಗಾಗಲೆ ಮಳೆಯಿಂದಾಗಿ ಅಡಚಣೆ ಎದುರಿಸಿದೆ. ಶ್ರೀಲಂಕಾದ ಪಲ್ಲೆಕಿಲೆಯಲ್ಲಿ ನಡೆದ ಟೂರ್ನಿಯ ಮೊದಲ ಹಂತದ ಪಂದ್ಯಗಳು ಮಳೆ ಅಡಚಣೆ ಎದುರಿಸಿದವು. ಈ ಪೈಕಿ ಭಾರತ-ಪಾಕ್ ಪಂದ್ಯ ಫಲಿತಾಂಶ ಕಾಣದೆ ರದ್ದುಗೊಂಡಿತು. ಇದೀಗ ಟೂರ್ನಿಯ 2ನೇ ಹಾಗೂ ನಿರ್ಣಾಯಕ ಸೂಪರ್-4 ಹಂತದ ಪಂದ್ಯಗಳಿಗೆ ಕೊಲಂಬೊದಲ್ಲಿ ವೇದಿಕೆ ಸಜ್ಜಾಗಿದೆ. ಆದರೆ ಇಲ್ಲಿ ಪಂದ್ಯ ಬಿಡಿ, ಹೊರಾಂಗಣ ಅಭ್ಯಾಸ ನಡೆಸುವುದಕ್ಕೂ ಮಳೆ ಅಡಚಣೆ ಎದುರಾಗಿದೆ. ಪಲ್ಲೆಕಿಲೆಯಿಂದ ಕೊಲಂಬೊಗೆ ತೆರಳಿರುವ ಭಾರತ ತಂಡದ ಆಟಗಾರರು, ಗುರುವಾರ ಇಲ್ಲಿನ ಎನ್ಸಿಸಿ ಗ್ರೌಂಡ್ನ ಒಳಾಂಗಣದಲ್ಲಿ ಅಭ್ಯಾಸ ನಡೆಸಿದರು.
ನಾಯಕ ರೋಹಿತ್ ಶರ್ಮ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹೊರತಾಗಿ ಭಾರತ ತಂಡದ ಇತರ ಆಟಗಾರರು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಬ್ಯಾಟಿಂಗ್-ಬೌಲಿಂಗ್ ಅಭ್ಯಾಸ ನಡೆಸಿದರು. ಈ ಪೈಕಿ ಕನ್ನಡಿಗ ಕೆಎಲ್ ರಾಹುಲ್ ಏಷ್ಯಾಕಪ್ ತಂಡದೊಂದಿಗೆ ಮೊದಲ ಬಾರಿಗೆ ನೆಟ್ಸ್ನಲ್ಲಿ ಅಭ್ಯಾಸಕ್ಕೆ ಹಾಜರಾದರು.
ರಾಹುಲ್ ಇನ್, ಶ್ರೇಯಸ್ ಔಟ್?
ಭಾರತ ತಂಡ ಸೂಪರ್-4 ಹಂತದ ಮೊದಲ ಪಂದ್ಯದಲ್ಲಿ ಭಾನುವಾರ ಪಾಕಿಸ್ತಾನ ತಂಡವನ್ನು ಎದುರಿಸಲಿದ್ದು, ಈ ಪಂದ್ಯಕ್ಕೆ ಕೆಎಲ್ ರಾಹುಲ್ ಫಿಟ್ ಆಗಿದ್ದಾರೆ. ಇದು ಭಾರತ ತಂಡಕ್ಕೆ ಹೊಸ ತಲೆನೋವು ತಂದಿದೆ. ರಾಹುಲ್ ಬದಲಿಗೆ ಪಾಕ್ ವಿರುದ್ಧದ ಮೊದಲ ಮುಖಾಮುಖಿಯಲ್ಲಿ ಆಡಿದ್ದ ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ ನಿರ್ವಹಣೆ ತೋರಿದ್ದರು. ಹೀಗಾಗಿ ರಾಹುಲ್-ಕಿಶನ್ ನಡುವೆ ಒಬ್ಬರನ್ನು ಆರಿಸುವುದು ಕಷ್ಟವೆನಿಸಿದೆ. ಇದಕ್ಕಾಗಿ ಬದಲಿ ಮಾರ್ಗ ಹುಡುಕಿರುವ ಟೀಮ್ ಮ್ಯಾನೇಜ್ಮೆಂಟ್, ಕಿಶನ್ರನ್ನು 11ರ ಬಳಗದಲ್ಲೇ ಉಳಿಸಿಕೊಂಡು ಶ್ರೇಯಸ್ ಅಯ್ಯರ್ ಬದಲಿಗೆ ಕೆಎಲ್ ರಾಹುಲ್ರನ್ನು ಆಡಿಸುವ ಚಿಂತನೆ ನಡೆಸಿದೆ. ಮತ್ತೊಂದೆಡೆ, ಅಪ್ಪನಾದ ಸಂಭ್ರಮದ ಬಳಿಕ ವೇಗಿ ಜಸ್ಪ್ರೀತ್ ಬುಮ್ರಾ ಕೂಡ ಮರಳಿ ತಂಡವನ್ನು ಕೂಡಿಕೊಂಡಿದ್ದು, ಅವರಿಗೆ ನೇಪಾಳ ವಿರುದ್ಧದ ಪಂದ್ಯದಲ್ಲಿ ಆಡಿದ್ದ ಮೊಹಮದ್ ಶಮಿ ಮತ್ತು ಶಾರ್ದೂಲ್ ಠಾಕೂರ್ ಪೈಕಿ ಯಾರು ಸ್ಥಾನ ಬಿಟ್ಟುಕೊಡಲಿದ್ದಾರೆ ಎಂಬ ಕೌತುಕ ಮೂಡಿದೆ.