

ಮ್ಯಾಡ್ರಿಡ್: ಕಳೆದ ತಿಂಗಳು ಆಸ್ಟ್ರೆಲಿಯಾದಲ್ಲಿ ಮುಕ್ತಾಯಗೊಂಡ ಫಿಫಾ ವಿಶ್ವಕಪ್ನಲ್ಲಿ ಸ್ಪೇನ್ ಫುಟ್ಬಾಲ್ ತಂಡ ಚೊಚ್ಚಲ ವಿಶ್ವಕಪ್ ಗೆದ್ದು ಬೀಗಿತು. ಆದರೆ, ಟ್ರೋಫಿ ವಿತರಣಾ ಸಮಾರಂಭದ ವೇಳೆ ಸ್ಪೇನ್ ಫುಟ್ಬಾಲ್ ಒಕ್ಕೂಟದ ಅಧ್ಯಕ್ಷ ಲೂಯಿಸ್ ರುಬಿಯಲೆಸ್ ವೇದಿಕೆಯ ಮೇಲೆಯೇ ಸ್ಪೇನ್ ತಂಡದ ಪ್ರಮುಖ ಆಟಗಾರ್ತಿ ಜೆನ್ನಿ ಹೆಮೋರ್ಸೊ ತುಟಿಗೆ ಮುತ್ತಿಟ್ಟಿದ್ದು, ಸ್ಪೇನ್ ತಂಡದ ವಿಶ್ವಕಪ್ ಗೆಲುವಿಗಿಂತ ಹೆಚ್ಚು ಸುದ್ದಿಯಾಯಿತು. ಪರ-ವಿರೋಧದ ಚರ್ಚೆ ನಡೆಯುತ್ತಲೇ ಬಂದಿತ್ತು. ಜತೆಗೆ ರುಬಿಯಲೆಸ್ ಅದು ಒಮ್ಮತದ ಕಿಸ್ ಎಂದಿದ್ದರೆ, ಹೆಮೋರ್ಸೊ ತನ್ನ ಒಮ್ಮತ ಇರಲಿಲ್ಲ ಎಂದು ವಾದಿಸಿದ್ದರು. ಇದೀಗ ತನ್ನ ಸಮ್ಮತಿ ಪಡೆಯದೆ ತುಟಿಗೆ ಮುತ್ತಿಡುವ ಮೂಲಕ ರುಬಿಯಲೆಸ್ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಹೆಮೋರ್ಸೊ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.
ಕಿಸ್ ಪ್ರಕರಣದಲ್ಲಿ ರುಬಿಯಲೆಸ್ರನ್ನು ಫಿಫಾ ಈಗಾಗಲೆ ಅಮಾನತುಗೊಳಿಸಿದೆ. ಸ್ಪೇನ್ ಸರ್ಕಾರ, ಆಟಗಾರರ ಸಂಸ್ಥೆಗಳು, ಆಟಗಾರರ ಮತ್ತು ಸ್ಪೇನ್ ನಾಗರಿಕರೂ ಹೆಮೋರ್ಸ್ಗೆ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ ರುಬಿಯಲೆಸ್ ನನ್ನದೇನೂ ತಪ್ಪಿಲ್ಲ ಎಂದು ಪದತ್ಯಾಗಕ್ಕೆ ನಿರಾಕರಿಸುತ್ತಲೇ ಬಂದಿದ್ದರು. ಅಲ್ಲದೆ ನನ್ನನ್ನು ಬಲಿಪಶು ಮಾಡಲಾಗುತ್ತಿದೆ. ಅಲ್ಲದೆ ನಕಲಿ ಸ್ತ್ರಿವಾದಿಗಳ ಟಾರ್ಗೆಟ್ ಆಗಿದ್ದೇನೆ ಎಂದಿದ್ದರು.
33 ವರ್ಷದ ಫಾರ್ವರ್ಡ್ ಆಟಗಾರ್ತಿ ಹೆಮೋರ್ಸೊ ಈಗ ಕಾನೂನು ಕ್ರಮದ ಹಾದಿ ಹಿಡಿದಿದ್ದು, ಅವರ ವಾದವನ್ನು ಮಂಡಿಸಲು ಮ್ಯಾಡ್ರಿಡ್ ನ್ಯಾಯಾಲಯವೂ ಅವಕಾಶ ಮಾಡಿಕೊಟ್ಟಿದೆ.