ಬಯೋಬಬಲ್‌ನಲ್ಲಿ ಭಾರತ ಬಲಿಷ್ಠ; ವಿಂಡೀಸ್, ಆಸೀಸ್ ಪ್ರಾಬಲ್ಯ ನೆನಪಿಸಿದ ಕೊಹ್ಲಿ ಪಡೆ

ind vs eng web
Published on

| ಪ್ರಸಾದ್ ಶೆಟ್ಟಿಗಾರ್ ಬೆಂಗಳೂರು

ಕರೊನಾ ವೈರಸ್ ಹಾವಳಿಯಿಂದಾಗಿ ಕಳೆದ ವರ್ಷ ಸುಮಾರು 8 ತಿಂಗಳ ಕಾಲ ಟೀಮ್ ಇಂಡಿಯಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿತ್ತು. ಮತ್ತೆ ಮೈದಾನಕ್ಕೆ ಮರಳಿದಾಗ ಭಾರತಕ್ಕೆ ಆಸ್ಟ್ರೇಲಿಯಾ, ಇಂಗ್ಲೆಂಡ್‌ನಂಥ ಬಲಿಷ್ಠ ತಂಡಗಳ ಸವಾಲು ಎದುರಾಗಿತ್ತು. ಇದರಲ್ಲಿ ಭಾರತ ತಂಡ ಬಲಿಷ್ಠ ನಿರ್ವಹಣೆ ತೋರುವ ಮೂಲಕ ಬಯೋಬಬಲ್ ವಾತಾವರಣದ ಮಾನಸಿಕ-ದೈಹಿಕ ಸವಾಲಿನ ನಡುವೆಯೂ ಗೆದ್ದು ಬೀಗಿರುವುದು ವಿಶೇಷವಾಗಿದೆ. ಕರೊನಾ ಭೀತಿಯಿಂದಾಗಿ ಕ್ರಿಕೆಟ್ ಆಟ ಸದ್ಯಕ್ಕೆ ಪ್ರೇಕ್ಷಕರಿಂದ ದೂರವಾಗಿದ್ದರೂ, ಅಮೋಘ ಆಟದಿಂದಾಗಿ ವಿರಾಟ್ ಕೊಹ್ಲಿ ಪಡೆ ಕ್ರಿಕೆಟ್ ಪ್ರೇಮಿಗಳ ಹೃದಯಕ್ಕೆ ಇನ್ನಷ್ಟು ಹತ್ತಿರವಾಗಿದೆ.

1970ರ ದಶಕದಲ್ಲಿ ವೆಸ್ಟ್ ಇಂಡೀಸ್ ಮತ್ತು 1996ರಿಂದ 2007ರವರೆಗಿನ ಅವಧಿಯಲ್ಲಿ ಆಸ್ಟ್ರೇಲಿಯಾ ತಂಡ ತೋರಿದ ಬಲಿಷ್ಠ ನಿರ್ವಹಣೆಯನ್ನು ನೆನಪಿಸುವ ರೀತಿಯಲ್ಲಿ ಭಾರತ ತಂಡ ಕಳೆದ 5 ತಿಂಗಳಲ್ಲಿ ವಿಜೃಂಭಿಸಿದೆ. ಈ ಅವಧಿಯಲ್ಲಿ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಜಸ್‌ಪ್ರೀತ್ ಬುಮ್ರಾ, ಮೊಹಮದ್ ಶಮಿ, ರವೀಂದ್ರ ಜಡೇಜಾ ಅವರಂಥ ಪ್ರಮುಖ ಆಟಗಾರರೇ ಕೆಲ ಪಂದ್ಯಗಳಿಂದ ಹೊರಗುಳಿದರೂ, ಅದು ಯಾವುದೇ ರೀತಿಯಲ್ಲೂ ನಕಾರಾತ್ಮಕ ಪರಿಣಾಮ ಬೀರಲಿಲ್ಲ. ಬದಲಾಗಿ ಈ ಪ್ರಮುಖರ ಗೈರಿನ ನಡುವೆ ಅವಕಾಶ ಪಡೆದ ಹೊಸ ಆಟಗಾರರೂ, ಯಾವುದೇ ಕೊರತೆ ಕಾಡದಂತೆ ಸದೃಢ ನಿರ್ವಹಣೆ ತೋರುವ ಮೂಲಕ ಭಾರತದ ವಿಜಯಪತಾಕೆಯನ್ನು ಎತ್ತಿಹಿಡಿದರು.

ಐಪಿಎಲ್ 13ನೇ ಆವೃತ್ತಿಯಲ್ಲಿ ಉತ್ತಮ ನಿರ್ವಹಣೆ ತೋರಿದ ಕೆಲ ಆಟಗಾರರು ಅದರ ಬೆನ್ನಲ್ಲೇ ಭಾರತ ತಂಡದ ಪರ ಆಡುವ ಅವಕಾಶವನ್ನೂ ಗಿಟ್ಟಿಸಿಕೊಂಡರು ಮತ್ತು ಅದನ್ನು ಸದುಪಯೋಗಪಡಿಸಿಕೊಂಡರು. ಅಂತಾರಾಷ್ಟ್ರೀಯ ಕ್ರಿಕೆಟ್ ತಾರೆಯರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳುವ ಮತ್ತು ಅವರಿಂದ ಅನುಭವದ ಪಾಠ ಕಲಿಯುವ ಅವಕಾಶದಿಂದಾಗಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸುವಾಗಲೇ ಬಲಿಷ್ಠ ನಿರ್ವಹಣೆ ತೋರಲು ನೆರವಾಗುತ್ತಿದೆ ಎನ್ನಲಾಗುತ್ತಿದೆ. ಜತೆಗೆ ಮಾಜಿ ನಾಯಕ ರಾಹುಲ್ ದ್ರಾವಿಡ್ ಭಾರತ ಎ, 19 ವಯೋಮಿತಿ ತಂಡ ಮತ್ತು ಎನ್‌ಸಿಎ ಮುಖ್ಯಸ್ಥರಾಗಿ ನೀಡುತ್ತಿರುವ ಕೊಡುಗೆಯೂ ಟೀಮ್ ಇಂಡಿಯಾದ ಮೀಸಲು ಪಡೆ ಇಷ್ಟು ಬಲಿಷ್ಠವಾಗಿ ರೂಪುಗೊಳ್ಳಲು ಕಾರಣ ಎಂದೂ ಹೇಳಲಾಗುತ್ತದೆ.

ಬಯೋಬಬಲ್‌ನಿಂದಾಗಿ ಆಟಗಾರರ ಸಂಚಾರಕ್ಕೆ ಕಳೆದ 5 ತಿಂಗಳಿನಿಂದ ಸಾಕಷ್ಟು ನಿರ್ಬಂಧಗಳಿದ್ದವು. ಹೆಚ್ಚಿನ ಆಟಗಾರರು ಸೆಪ್ಟೆಂಬರ್‌ನಲ್ಲಿ ಐಪಿಎಲ್ ಶುರುವಾದ ಸಮಯದಿಂದಲೇ ಬಯೋಬಬಲ್‌ನಲ್ಲಿದ್ದರು. ಆಸೀಸ್-ಇಂಗ್ಲೆಂಡ್ ಸರಣಿ ನಡುವೆ 1 ವಾರವಷ್ಟೇ ಬಿಡುವಿತ್ತು. ಸರಣಿಗಳಲ್ಲೂ ಆರಂಭಿಕ ಹಿನ್ನಡೆಯ ಒತ್ತಡಗಳು ಎದುರಾಗಿದ್ದವು. ಕೆಲ ಆಟಗಾರರು ಗಾಯದಿಂದಾಗಿ ಹೊರಗುಳಿದಿದ್ದರು. ಇವೆಲ್ಲ ಸವಾಲುಗಳನ್ನು ದಾಟಿ ಭಾರತ ತಂಡ ಯಶಸ್ಸಿನ ಓಟ ಮುಂದುವರಿಸಿದೆ.

ಕರೊನಾ ಟೈಮಲ್ಲಿ ಭಾರತ

*ಟೆಸ್ಟ್: 8

ಜಯ: 5

ಸೋಲು: 2

ಡ್ರಾ: 1

*ಏಕದಿನ: 6

ಜಯ: 3

ಸೋಲು: 3

*ಟಿ20: 8

ಜಯ: 5

ಸೋಲು: 3

ರಿಷಭ್ ಪಂತ್ ಮ್ಯಾಚ್ ವಿನ್ನರ್

ಕರೊನಾಗಿಂತ ಮುನ್ನ ರನ್‌ಬರ ಎದುರಿಸಿ ಭಾರತ ತಂಡದಿಂದ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದ ರಿಷಭ್ ಪಂತ್ ಇದೀಗ ಮೂರೂ ಮಾದರಿಯಲ್ಲಿ ಸಮರ್ಥ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಗೆಲುವಿನ ಆಟವಾಡಿದ ಬೆನ್ನಲ್ಲೇ ತವರಿನಲ್ಲಿ ಇಂಗ್ಲೆಂಡ್ ವಿರುದ್ಧವೂ ಅವರ ಬಲಿಷ್ಠ ಬ್ಯಾಟಿಂಗ್ ನಿರ್ವಹಣೆ ಮುಂದುವರಿಯಿತು. 23 ವರ್ಷದ ಪಂತ್ ಕಳೆದ 4 ತಿಂಗಳಲ್ಲಿ ಆಪದ್ಬಾಂಧವ, ಫಿನಿಶರ್, ಪಿಂಚ್ ಹಿಟ್ಟರ್, ಮ್ಯಾಚ್ ವಿನ್ನರ್ ಈ ಎಲ್ಲ ಪಾತ್ರಗಳಲ್ಲೂ ಮಿಂಚಿದ್ದಾರೆ. ಅವರು ಇದೇ ರೀತಿ ಬ್ಯಾಟಿಂಗ್ ಮುಂದುವರಿಸಿದರೆ ವಿಶ್ವ ಕ್ರಿಕೆಟ್‌ನಲ್ಲಿ ಎಂಎಸ್ ಧೋನಿ ಮತ್ತು ಆಡಂ ಗಿಲ್‌ಕ್ರಿಸ್ಟ್‌ಗಿಂತಲೂ ಅತ್ಯುತ್ತಮ ವಿಕೆಟ್ ಕೀಪರ್-ಬ್ಯಾಟ್‌ಮನ್ ಎನಿಸಲಿದ್ದಾರೆ ಎಂದು ಪಾಕ್ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಈಗಾಗಲೆ ಭವಿಷ್ಯವನ್ನೂ ನುಡಿದಿದ್ದಾರೆ. ಯಾವುದೇ ಅಳುಕಿಲ್ಲದೆ ರನ್‌ಪ್ರವಾಹ ಹರಿಸುತ್ತಿರುವ ಪಂತ್ ಸರಣಿಯಿಂದ ಸರಣಿಗೆ ಪಕ್ವತೆ ಸಂಪಾದಿಸುತ್ತಿದ್ದಾರೆ.

ಯುವಕರ ಯಶಸ್ವಿ ಪದಾರ್ಪಣೆಯ ಬಲ

ಪ್ರಮುಖರ ಗೈರಿನ ನಡುವೆ ಕಣಕ್ಕಿಳಿದ ಹೊಸ ಆಟಗಾರರೆಲ್ಲ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುತ್ತಿರುವುದು ಭಾರತದ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಟಿ. ನಟರಾಜನ್, ಶಾರ್ದೂಲ್ ಠಾಕೂರ್, ಶುಭಮಾನ್ ಗಿಲ್, ಮೊಹಮದ್ ಸಿರಾಜ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್ ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಮಿಂಚಿದರು. ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಗೈರು ಕಾಡದಂತೆ ನೋಡಿಕೊಂಡರು. ಅಕ್ಷರ್ ಪದಾರ್ಪಣೆಯ ಟೆಸ್ಟ್ ಸರಣಿಯಲ್ಲೇ 3 ಪಂದ್ಯಗಳಲ್ಲಿ 27 ವಿಕೆಟ್ ಕಬಳಿಸಿ ಆಂಗ್ಲರನ್ನು ಕಂಗೆಡಿಸಿದರು. ಬಳಿಕ ಟಿ20 ಸರಣಿಯಲ್ಲಿ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಪದಾರ್ಪಣೆಯ ಇನಿಂಗ್ಸ್‌ನಲ್ಲೇ ಗೆಲುವಿನ ಆಟವಾಡಿದರು. ಏಕದಿನ ಸರಣಿಯಲ್ಲಿ ಕೃನಾಲ್ ಪಾಂಡ್ಯ ಮತ್ತು ಕನ್ನಡಿಗ ಪ್ರಸಿದ್ಧಕೃಷ್ಣ ಅವರ ಪದಾರ್ಪಣೆಯೂ ಭರ್ಜರಿಯಾಗಿಯೇ ಇತ್ತು.

ವಿರಾಟ್ ಕೊಹ್ಲಿ ನಾಯಕತ್ವ ಸುರಕ್ಷಿತ

ಪಿತೃತ್ವ ರಜೆಯ ಮೇರೆ ವಿರಾಟ್ ಕೊಹ್ಲಿ ತವರಿಗೆ ಮರಳಿದಾಗ ಆಸೀಸ್ ಪ್ರವಾಸದಲ್ಲಿ ಅಜಿಂಕ್ಯ ರಹಾನೆ ಹಂಗಾಮಿ ನಾಯಕತ್ವದಲ್ಲಿ ಭಾರತ ಇತಿಹಾಸ ಬರೆಯಿತು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಕೇಳಿಬಂದವು. ಆದರೆ ಇದೀಗ ಆಂಗ್ಲರೆದುರು ಮೂರೂ ಸರಣಿಗಳಲ್ಲಿ ಅಜೇಯವಾಗಿ ಗೆದ್ದಿರುವುದು ಕೊಹ್ಲಿ ನಾಯಕತ್ವವನ್ನು ಸುರಕ್ಷಿತವಾಗಿಸಿದೆ. ಅದರಲ್ಲೂ ಕೊಹ್ಲಿ 12 ಪಂದ್ಯಗಳ ಪೈಕಿ 10ರಲ್ಲಿ ಟಾಸ್ ಸೋತರೂ, 6ರಲ್ಲಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಸಲರಾಗಿರುವುದು ಗಮನಾರ್ಹ.

ಕನ್ನಡಿಗರಿಗೆ ಮಿಶ್ರಫಲ

ಕಳೆದ 5 ತಿಂಗಳ ಅವಧಿಯಲ್ಲಿ ಟೀಮ್ ಇಂಡಿಯಾ ಪರ ನಾಲ್ವರು ಕನ್ನಡಿಗರು ಕಣಕ್ಕಿಳಿದರು. ಈ ಪೈಕಿ ಕೆಎಲ್ ರಾಹುಲ್ ಮತ್ತು ವೇಗಿ ಪ್ರಸಿದ್ಧಕೃಷ್ಣ ಮಾತ್ರ ಯಶಸ್ಸು ಸಾಧಿಸಿದರು. ಮನೀಷ್ ಪಾಂಡೆ ಕೇವಲ 1 ಪಂದ್ಯ ಆಡುವ ಅವಕಾಶ ಪಡೆದರೆ, ಮಯಾಂಕ್ ಅಗರ್ವಾಲ್ ಸಿಕ್ಕ ಅವಕಾಶದ ಲಾಭವೆತ್ತಲಿಲ್ಲ. ಇದರಿಂದ ಕೆಎಲ್ ರಾಹುಲ್ ಅಸ್ಥಿರ ನಿರ್ವಹಣೆಯ ನಡುವೆಯೂ ಸದ್ಯ ಮೂರೂ ಮಾದರಿಯ ತಂಡದಲ್ಲಿರುವ ಏಕೈಕ ಕನ್ನಡಿಗರಾಗಿದ್ದಾರೆ.

ಕೋಚ್ ರವಿಶಾಸ್ತ್ರಿ ಮೆಚ್ಚುಗೆ

‘ಜೀವಮಾನದಲ್ಲೇ ತಾನು ಕಂಡ ಅತ್ಯುತ್ತಮ ಕ್ರಿಕೆಟ್ ಋತು ಇದಾಗಿದೆ’ ಎಂದು ಕೋಚ್ ರವಿಶಾಸ್ತ್ರಿ, ಟೀಮ್ ಇಂಡಿಯಾದ ನಿರ್ವಹಣೆಯನ್ನು ಪ್ರಶಂಸಿಸಿದ್ದಾರೆ. ಆಸೀಸ್‌ನಲ್ಲಿ ತಂಡದ ಯಶಸ್ಸಿಗೆ ಪ್ರಮುಖ ಮಾರ್ಗದರ್ಶಕರಾಗಿದ್ದ ರವಿಶಾಸ್ತ್ರಿ, ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ 3-1, ಟಿ20ಯಲ್ಲಿ 3-2, ಏಕದಿನದಲ್ಲಿ 2-1ರಿಂದ ಗೆದ್ದ ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ ವಿಶ್ವದ 2 ಅತ್ಯುತ್ತಮ ತಂಡಗಳ ನಡುವಿನ ಈ ಕಾದಾಟ ಕಠಿಣ ಸವಾಲುಗಳಿಂದ ಕೂಡಿತ್ತು ಎಂದಿದ್ದಾರೆ.

ಕರೊನಾ ಕಾಲದಲ್ಲಿ ಕೊಹ್ಲಿ ಶತಕವಿಲ್ಲ!

ಭಾರತ ತಂಡದ ಯಶಸ್ಸಿನ ನಡುವೆ ನಾಯಕ ವಿರಾಟ್ ಕೊಹ್ಲಿ ಶತಕದ ಬರ ಕರೊನಾ ಕಾಲದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಎದುರಾದ ಏಕೈಕ ನಿರಾಸೆ. ಐಪಿಎಲ್ 13ನೇ ಆವೃತ್ತಿಯ ಬಳಿಕ ಕರೊನಾ ಕಾಲದಲ್ಲಿ ಭಾರತ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಆರಂಭಿಸಿದ ಬಳಿಕ ವಿರಾಟ್ ಕೊಹ್ಲಿ ಶತಕವನ್ನೇ ಸಿಡಿಸಿಲ್ಲ. 492 ದಿನಗಳ ಅವರ ಶತಕದ ಬರ ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲೂ ನೀಗಲಿಲ್ಲ. ಇದರಿಂದ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ 71ನೇ ಶತಕಕ್ಕಾಗಿ ಇನ್ನು ಐಪಿಎಲ್ 14ನೇ ಆವೃತ್ತಿ ಮುಕ್ತಾಯದವರೆಗೂ ಕಾಯಬೇಕಾಗಿದೆ. 2019ರ ನವೆಂಬರ್‌ನಲ್ಲಿ ಅವರ ಕೊನೇ ಶತಕ ಸಿಡಿದಿತ್ತು. ಬಳಿಕ 7 ಅರ್ಧಶತಕ ಬಾರಿಸಿದ್ದು, 89 ರನ್ ಅವರ ಗರಿಷ್ಠ ಗಳಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net