ಕಾಂಗರೂ ನೆಲದಲ್ಲಿ ಹೊಸ ಸಮವಸ್ತ್ರದೊಂದಿಗೆ ಅಭ್ಯಾಸ ಆರಂಭಿಸಿದ ಟೀಮ್​ ಇಂಡಿಯಾ

web ind
Published on

ಪರ್ತ್​: ಸವಾಲಿನ ಆಸ್ಟ್ರೆಲಿಯಾ ಪ್ರವಾಸದಲ್ಲಿ ಭಾರತ ತಂಡ ಬುಧವಾರ ವಾಕಾದಲ್ಲಿ ಹೊಸ ಸಮವಸ್ತ್ರದಲ್ಲಿ ಅಭ್ಯಾಸ ಆರಂಭಿಸಿದೆ. ಟೆಸ್ಟ್​ ತಂಡದ ಆಟಗಾರರೊಂದಿಗೆ ಭಾರತ ಎ ತಂಡದ ಆಟಗಾರರೂ ಅಭ್ಯಾಸದಲ್ಲಿ ನೆರವಾದರು. ವಿರಾಟ್​ ಕೊಹ್ಲಿ ನೆಟ್ಸ್​ನಲ್ಲಿ ಹೆಚ್ಚಿನ ಸಮಯವನ್ನು ಬ್ಯಾಟಿಂಗ್​ ಅಭ್ಯಾಸದಲ್ಲಿ ಕಳೆದರು.

ಭಾರತ ತಂಡ ಶುಕ್ರವಾರದಿಂದ ಭಾನುವಾರದವರೆಗೆ ವಾಕಾ ಗ್ರೌಂಡ್​ನಲ್ಲಿ ಭಾರತ ಎ ತಂಡದವರೆಗೆ ತ್ರಿದಿನ ಅಭ್ಯಾಸ ಪಂದ್ಯ ಆಡಲಿದೆ. ಸಾರ್ವಜನಿಕರ ಕಣ್ಣೆದುರಲ್ಲೇ ಅಭ್ಯಾಸ ನಡೆಸಲು ಟೀಮ್​ ಮ್ಯಾನೇಜ್​ಮೆಂಟ್​ ನಿರ್ಧರಿಸಿದೆ. ಆದರೆ ಆಸೀಸ್​ ಮಾಧ್ಯಮಗಳು, ಅಭ್ಯಾಸ ವೀಕ್ಷಣೆಯಿಂದ ಸಾರ್ವಜನಿಕರನ್ನು ರ್ನಿಬಂಧಿಸಬೇಕೆಂದು ಭಾರತ ತಂಡ ಬೇಡಿಕೆ ಸಲ್ಲಿಸಿದೆ ಎಂದು ವರದಿ ಮಾಡಿವೆ. ಆದರೆ ಬಿಸಿಸಿಐ ಇದನ್ನು ತಳ್ಳಿಹಾಕಿದೆ.

ಭಾರತ&ಭಾರತ ಎ ನಡುವೆ ನಿಗದಿಯಾಗಿದ್ದ ಅಭ್ಯಾಸ ಪಂದ್ಯವನ್ನು ಈ ಮುನ್ನ ರದ್ದುಗೊಳಿಸಿದ್ದರೂ, ಈಗ ಮರುನಿಗದಿಪಡಿಸಲಾಗಿದೆ. ಆದರೆ ಇದು ಪ್ರಥಮ ದರ್ಜೆ ಪಂದ್ಯದ ಮಾನ್ಯತೆ ಹೊಂದಿರುವುದಿಲ್ಲ. ಇದರಿಂದಾಗಿ ಬ್ಯಾಟರ್​ ಮೊದಲ ಓವರ್​ನಲ್ಲೇ ಔಟಾದರೂ, ಬ್ಯಾಟಿಂಗ್​ ಮುಂದುವರಿಸಲು ಅವಕಾಶ ನೀಡಲಾಗುತ್ತದೆ. ಅಲ್ಲದೆ ಒಂದು ತಂಡದಲ್ಲಿ ಬಹುತೇಕ ಬೌಲರ್​ಗಳೇ ಇದ್ದರೆ, ಇನ್ನೊಂದು ತಂಡದಲ್ಲಿ ಪ್ರಮುಖ ಬ್ಯಾಟರ್​ಗಳಿರುತ್ತಾರೆ ಎಂದು ಮೂಲಗಳು ತಿಳಿಸಿವೆ.

ರೋಹಿತ್​ ಮುಂಬೈನಲ್ಲೇ ಅಭ್ಯಾಸ

ಭಾರತ ಟೆಸ್ಟ್​ ತಂಡ ಆಸೀಸ್​ನಲ್ಲಿ ಈಗಾಗಲೆ ಅಭ್ಯಾಸ ಆರಂಭಿಸಿರುವ ನಡುವೆ, ಎರಡನೇ ಮಗುವಿನ ನಿರೀೆಯಲ್ಲಿ ತವರಿನಲ್ಲೇ ಉಳಿದುಕೊಂಡಿರುವ ನಾಯಕ ರೋಹಿತ್​ ಶರ್ಮ ಮುಂಬೈನಲ್ಲೇ ಅಭ್ಯಾಸ ನಡೆಸುತ್ತಿದ್ದಾರೆ. ಅವರ ಆಸೀಸ್​ ಪ್ರಯಾಣ ದಿನಾಂಕ ಕೂಡ ಇನ್ನೂ ಅನಿಶ್ಚಿತತೆಯಲ್ಲಿದೆ. 37 ವರ್ಷದ ರೋಹಿತ್​ ಬುಧವಾರ ರಿಲಯನ್ಸ್​ ಕಾರ್ಪೊರೇಟ್​ ಪಾರ್ಕ್​ನಲ್ಲಿ ಬ್ಯಾಟಿಂಗ್​ ಅಭ್ಯಾಸ ನಡೆಸಿದರು. ಪತ್ನಿ ರಿತಿಕಾ ಮಗುವಿಗೆ ಜನ್ಮ ನೀಡಿದ ಬಳಿಕವೇ ರೋಹಿತ್​ ಆಸೀಸ್​ಗೆ ಪ್ರಯಾಣಿಸಲಿದ್ದಾರೆ. ಹೀಗಾಗಿ ಮೊದಲ ಟೆಸ್ಟ್​ನಲ್ಲಿ ಅವರು ಆಡುವುದು ಅನುಮಾನವೆನಿಸಿದೆ. ಮೊದಲ ಟೆಸ್ಟ್​ ಪಂದ್ಯ ನವೆಂಬರ್​ 22ರಿಂದ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net