ಚೆನ್ನೈನಲ್ಲಿ ಟೀಮ್​ ಇಂಡಿಯಾ ಅಭ್ಯಾಸ ಆರಂಭ; ಬಾಂಗ್ಲಾ ವಿರುದ್ಧ ಟೆಸ್ಟ್​ ಸರಣಿಗೆ ಸಿದ್ಧತೆ

web ind
Published on

ಚೆನ್ನೈ: ಸೆಪ್ಟೆಂಬರ್​ 19ರಿಂದ ಪ್ರವಾಸಿ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಟೆಸ್ಟ್​ ಸರಣಿಗೆ ಪೂರ್ವಭಾವಿಯಾಗಿ ಟೀಮ್​ ಇಂಡಿಯಾದ ಪೂರ್ವಸಿದ್ಧತಾ ಶಿಬಿರ ಶುಕ್ರವಾರ ಆರಂಭಗೊಂಡಿದೆ. ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಸುಮಾರು 45 ನಿಮಿಷಗಳ ಕಾಲ ನೆಟ್ಸ್​ನಲ್ಲಿ ಬ್ಯಾಟಿಂಗ್​ ಅಭ್ಯಾಸ ನಡೆಸಿದರೆ, ವೇಗಿ ಜಸ್​ಪ್ರೀತ್​ ಬುಮ್ರಾ ಪೂರ್ಣಪ್ರಮಾಣದ ಬೌಲಿಂಗ್​ ಅಭ್ಯಾಸದಲ್ಲಿ ಪಾಲ್ಗೊಂಡರು.

ನಾಯಕ ರೋಹಿತ್​ ಶರ್ಮ ಮತ್ತು ವಿರಾಟ್​ ಕೊಹ್ಲಿ ಶುಕ್ರವಾರ ಬೆಳಗ್ಗೆ ಚೆನ್ನೈಗೆ ಆಗಮಿಸಿ ಶಿಬಿರವನ್ನು ಕೂಡಿಕೊಂಡರು. ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ತರಬೇತಿ ಶಿಬಿರ ನಡೆಯುತ್ತಿದ್ದು, ಮಾಧ್ಯಮ ಮತ್ತು ಅಭಿಮಾನಿಗಳನ್ನು ದೂರವಿಡಲಾಗಿದೆ. ಶಿಬಿರದ ಚಿತ್ರಗಳನ್ನು ಬಿಸಿಸಿಐ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಹಂಚಿಕೊಂಡಿದ್ದು, "ಟೀಮ್​ ಇಂಡಿಯಾ ಸಿದ್ಧತೆ ಆರಂಭಿಸುವುದರೊಂದಿಗೆ ತವರಿನ ಕ್ರಿಕೆಟ್​ ಋತುವಿಗೆ ಕ್ಷಣಗಣನೆ ಆರಂಭಗೊಂಡಿದೆ' ಎಂದು ಬರೆದಿದೆ.

ಹೊಸ ಕೋಚ್​ ಗೌತಮ್​ ಗಂಭೀರ್​ಗೆ ತವರಿನ ಮೊದಲ ಸರಣಿ ಇದಾಗಿದ್ದು, ಹೊಸ ಬೌಲಿಂಗ್​ ಕೋಚ್​ ದ. ಆಫ್ರಿಕಾದ ಮಾರ್ನ್​ ಮಾರ್ಕೆಲ್​ ಮತ್ತು ಸಹಾಯಕ ಕೋಚ್​ ಅಭಿಷೇಕ್​ ನಾಯರ್​ ಕೂಡ ಶಿಬಿರದ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ.

ಕಳೆದ ತಿಂಗಳು ನಡೆದ ಶ್ರೀಲಂಕಾ ಪ್ರವಾಸದ ಏಕದಿನ ಸರಣಿಯ ನಂತರ ಲಂಡನ್​ಗೆ ತೆರಳಿದ್ದ ಕೊಹ್ಲಿ, ಶಿಬಿರಕ್ಕಾಗಿ ನೇರವಾಗಿ ಅಲ್ಲಿಂದ ಮರಳಿದ್ದಾರೆ. ಲಂಡನ್​ನಿಂದ ಮುಂಜಾನೆಯ ವಿಮಾನದಲ್ಲಿ ಅವರು ಚೆನ್ನೈಗೆ ಆಗಮಿಸಿದರೆ, ರೋಹಿತ್​ ಶರ್ಮ ಭದ್ರತಾ ಸಿಬ್ಬಂದಿಯ ರಕ್ಷಣೆಯೊಂದಿಗೆ ಚೆನ್ನೆ$ ವಿಮಾನ ನಿಲ್ದಾಣದಲ್ಲಿ ಬಂದಿಳಿದಿರುವ ವಿಡಿಯೋ ಕೂಡ ಜಾಲತಾಣದಲ್ಲಿ ವೈರಲ್​ ಆಗಿದೆ.

ಬುಮ್ರಾ, ಕೆಎಲ್​ ರಾಹುಲ್​, ರಿಷಭ್​ ಪಂತ್​ ಸಹಿತ ಇತರ ಆಟಗಾರರು ಗುರುವಾರವೇ ಚೆನ್ನೈಗೆ ಆಗಮಿಸಿದ್ದರೆ, ಸ್ರಾರ್ಜ್​ ಖಾನ್​ ಮತ್ತು ಯಶ್​ ದಯಾಳ್​ ಅನಂತಪುರದಲ್ಲಿ ದುಲೀಪ್​ ಟ್ರೋಫಿ ಆಡುತ್ತಿರುವುದರಿಂದ ಶಿಬಿರಕ್ಕೆ ಗೈರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net