

ಪುಣೆ: ಹ್ಯಾಟ್ರಿಕ್ ಗೆಲುವಿನೊಂದಿಗೆ ಬೀಗುತ್ತಿರುವ ಆತಿಥೇಯ ಭಾರತ ತಂಡ ಏಕದಿನ ವಿಶ್ವಕಪ್ನಲ್ಲಿ ತನ್ನ ಗೆಲುವಿನ ಓಟವನ್ನು ಸತತ 4ನೇ ಪಂದ್ಯಕ್ಕೂ ವಿಸ್ತರಿಸಲು ಸಜ್ಜಾಗಿದೆ. ಎಂಸಿಎ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಪಂದ್ಯದಲ್ಲಿ ರೋಹಿತ್ ಶರ್ಮ ಬಳಗ, ಬಾಂಗ್ಲಾದೇಶದ ಸವಾಲು ಎದುರಿಸಲಿದ್ದು, ಬಲಿಷ್ಠ ನಿರ್ವಹಣೆಯನ್ನು ಮುಂದುವರಿಸುವ ಹಂಬಲದಲ್ಲಿದೆ. ಪಂದ್ಯದಲ್ಲಿ ಉಭಯ ತಂಡಗಳು ಕಣಕ್ಕಿಳಿಸಬಹುದಾದ 11ರ ಬಳಗದ ಆಯ್ಕೆ ಲೆಕ್ಕಾಚಾರ ಇಲ್ಲಿದೆ.
ಟೀಮ್ ನ್ಯೂಸ್:
ಭಾರತ: ಗೆಲುವಿನ ಕಾಂಬಿನೇಷನ್ ಬದಲಾಯಿಸುವುದಿಲ್ಲ. ಗೆಲುವಿನ ಲಯ ಕಾಯ್ದುಕೊಳ್ಳುವುದು ನಮ್ಮ ಯೋಜನೆಯಾಗಿದೆ ಎಂದು ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಪರಾಸ್ ಮಹಾಂಬ್ರೆ ಪಂದ್ಯಕ್ಕೆ ಮುನ್ನಾದಿನ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಇದರಿಂದ ಮೊಹಮದ್ ಶಮಿ, ಸೂರ್ಯಕುಮಾರ್ ಮತ್ತೆ ಬೆಂಚು ಕಾಯಿಸಬೇಕಾಗಬಹುದು. ಶಾರ್ದೂಲ್ ಬದಲಿಗೆ ಅಶ್ವಿನ್ಗೆ ಅವಕಾಶ ಲಭಿಸುವ ಸಾಧ್ಯತೆಯೂ ದೂರವಾಗಿದೆ.
ಬಾಂಗ್ಲಾದೇಶ: ನಾಯಕ ಶಕೀಬ್ ಅಲ್ ಹಸನ್ ಎಡಗಾಲು ನೋವು ಹೊಂದಿರುವ ನಡುವೆಯೂ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ. ಆದರೆ ಮಂಗಳವಾರ ನೆಟ್ಸ್ನಲ್ಲಿ ಅವರು ಬೌಲಿಂಗ್ ಮಾಡಿರಲಿಲ್ಲ. ಹೀಗಾಗಿ ಕೇವಲ ಬ್ಯಾಟರ್ ಆಗಿ ಆಡುವರೇ ಎಂಬ ಗೊಂದಲವಿದೆ. ಇನ್ನು ಬಾಂಗ್ಲಾ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಯ ಸಾಧ್ಯತೆಗಳಿದ್ದು, ಮೆಹಿದಿ ಹಸನ್ ಮಿರಾಜ್ ಆರಂಭಿಕರಾಗಿ ಮತ್ತು ಮುಶ್ಫೀಕರ್ ರಹೀಂ ಮೇಲಿನ ಕ್ರಮಾಂಕಕ್ಕೆ ಬಡ್ತಿ ಪಡೆಯಬಹುದು.