

ನವ ದೆಹಲಿ: ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಟಿ-20 ವಿಶ್ವಕಪ್ ಆಡಲು ಈಗಾಗಲೇ ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾ ತಲುಪಿದ್ದಾರೆ. ಜತೆಗೆ ಅಭ್ಯಾಸವನ್ನೂ ಆರಂಭಿಸಿದ್ದಾರೆ. ಅಭ್ಯಾಸದ ಬಿಡುವಿನ ವೇಳೆ ಭಾರತೀಯ ಆಟಗಾರರು ಪರ್ತ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ - ಇಂಗ್ಲೆಂಡ್ ನಡುವಿನ ಮೊದಲ ಟಿ-20 ಪಂದ್ಯವನ್ನು ಮೈದಾನಕ್ಕೆ ತೆರಳಿ ವೀಕ್ಷಿಸಿದ್ದಾರೆ.
ಮುಂದಿನ ವಾರದಿಂದ ಪರ್ಥ್ನಲ್ಲಿ ಭಾರತ ತಂಡ ಪಶ್ಚಿಮ ಆಸ್ಟ್ರೇಲಿಯ ತಂಡದ ಜತೆಗೆ ಅಭ್ಯಾಸ ಪಂದ್ಯ ಆಡಲಿದೆ. ಇದಕ್ಕೂ ಮೊದಲು ತಂಡದ ಆಟಗಾರರಾದ ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ಯಜುವೇಂದ್ರ ಚಹಲ್, ಹರ್ಷಲ್ ಪಟೇಲ್ ಪರ್ತ್ ಮೈದಾನಕ್ಕೆ ತೆರಳಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟಿ-20 ಪಂದ್ಯ ವೀಕ್ಷಿಸಿದ್ದಾರೆ. ಈ ವೇಳೆ ಸ್ಪಿನ್ ಬೌಲರ್ ಅಶ್ವಿನ್ ಸೆಲ್ಫಿ ತೆಗೆದಿದ್ದಾರೆ. ಇದೀಗ ಈ ಫೋಟೋ ವೈರಲ್ ಆಗುತ್ತಿದೆ.
ಟಿ-20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಭಾರತ ತಂಡ ಕಠಿಣ ಅಭ್ಯಾಸವನ್ನು ಆರಂಭಿಸಿದೆ. ಸ್ಟಾರ್ ಬ್ಯಾಟ್ಸ್ಮನ್ಗಳಾದ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್ ರಾಹುಲ್ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಬಿಸಿಸಿಐ ಈಗಾಗಲೇ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ. (ಏಜೆನ್ಸೀಸ್)