

ನವದೆಹಲಿ: ಅಮೆರಿಕ ಮತ್ತು ವೆಸ್ಟ್ಇಂಡೀಸ್ ಜಂಟಿಯಾಗಿ ಆಯೋಜನೆ ಮಾಡಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನದೊಂದಿಗೆ ಪ್ರತಿಷ್ಠಿತ ವಿಶ್ವಕಪ್ ಗೆದ್ದು 13 ವರ್ಷಗಳ ಕಪ್ ದಾಹವನ್ನು ನೀಗಿಸಿರುವ ಟೀಮ್ ಇಂಡಿಯಾ ಇಂದು ಬೆಳಗ್ಗೆ ತವರಿಗೆ ಮರಳಿದೆ. ತಾಯ್ನಾಡಿಗೆ ಮರಳಿದ ರೋಹಿತ್ ಶರ್ಮ ಪಡೆಗೆ ಭರ್ಜರಿ ಸ್ವಾಗತ ಕೋರಲಾಗಿದೆ.
ವೆಸ್ಟ್ಇಂಡೀಸ್ನ ಬಾರ್ಬಡೋಸ್ನಿಂದ ವಿಶೇಷ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ ಟೀಮ್ ಇಂಡಿಯಾ ಇಂದು (ಜುಲೈ 04) ಬೆಳಗ್ಗೆ ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಈ ವೇಳೆ ವಿಮಾನ ನಿಲ್ದಾಣದ ಬಳಿ ನೆರೆದಿದ್ದ ಜನಸ್ತೋಮ ರೋಹಿತ್ ಪಡೆಗೆ ಜೈಕಾರಗಳು ಮೂಲಕ ಅದ್ಧೂರಿ ಸ್ವಾಗತ ಕೋರಿದರು. ತಾಯ್ನಾಡಿಗೆ ಕಾಲಿಡುತ್ತಿದ್ದಂತೆ ರೋಹಿತ್ ಶರ್ಮ ವಿಶ್ವಕಪ್ ಮೇಲೆತ್ತಿ ಪ್ರದರ್ಶಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದೇ ಸಂದರ್ಭದಲ್ಲಿ ದಾಖಲೆಗಳ ಸರದಾರ, ಟೀಮ್ ಇಂಡಿಯಾದ ರನ್ ಮೆಶಿನ್ ವಿರಾಟ್ ಕೊಹ್ಲಿಗೂ ಅದ್ದೂರಿ ಸ್ವಾಗತ ಸಿಕ್ಕಿತು. ಅಭಿಮಾನಿಗಳ ಅಭಿಮಾನವನ್ನು ಕಂಡು ಕೊಹ್ಲಿ, ಅಭಿಮಾನಿಗಳತ್ತ ಕೈ ಬೀಸಿ, ಧನ್ಯವಾದಗಳನ್ನು ತಿಳಿಸಿದರು.
ಮೆಗಾ ಟೂರ್ನಮೆಂಟ್ ಮುಗಿಯುತ್ತಿದ್ದಂತೆ ವೆಸ್ಟ್ಇಂಡೀಸ್ನಲ್ಲಿ ಉಂಟಾದ ಬೆರಿಲ್ ಚಂಡಮಾರುತದಿಂದಾಗಿ ವಿಮಾನ ನಿಲ್ದಾಣವನ್ನು ಮುಚ್ಚಲಾಯಿತು. ಹೀಗಾಗಿ ಟೀಮ್ ಇಂಡಿಯಾ ಆಟಗಾರರು ಬಾರ್ಬಡೋಸ್‌ನಲ್ಲೇ ನಾಲ್ಕು ದಿನಗಳ ಕಾಲ ಸಿಲುಕಿಕೊಂಡರು. ಹವಾಮಾನವು ಸುಧಾರಿಸಿದ ನಂತರ, ವಿಶ್ವ ಚಾಂಪಿಯನ್‌ಗಳನ್ನು ಮರಳಿ ಮನೆಗೆ ಕರೆತರಲು ವಿಶೇಷ ಏರ್ ಇಂಡಿಯಾ ಚಾರ್ಟರ್ಡ್ ವಿಮಾನವನ್ನು ಬಾರ್ಬಡೋಸ್‌ಗೆ ಕಳುಹಿಸಲಾಗಿತ್ತು.
ಸುಮಾರು 18 ಗಂಟೆಗಳ ಸುದೀರ್ಘ ಪ್ರಯಾಣದ ನಂತರ, ತಂಡವು ಅಂತಿಮವಾಗಿ ಭಾರತಕ್ಕೆ ಬಂದಿಳಿದೆ. ಇದೇ ಸಂದರ್ಭದಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರನ್ನು ನೋಡಲು ತಡರಾತ್ರಿಯಿಂದಲೂ ಉದ್ದನೆಯ ಸರತಿ ಸಾಲಿನಲ್ಲಿ ಕಾಯುತ್ತಿದ್ದರು. ವಿಮಾನ ನಿಲ್ದಾಣ ಮತ್ತು ತಂಡದ ಹೋಟೆಲ್‌ನಲ್ಲಿ ಅದ್ಧೂರಿ ಸ್ವಾಗತಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಟೀಮ್ ಇಂಡಿಯಾಕ್ಕಾಗಿ ವಿಶ್ವಕಪ್ ಟ್ರೋಫಿಯನ್ನು ಪ್ರತಿನಿಧಿಸುವ ವಿಶೇಷ ಕೇಕ್ ಅನ್ನು ಸಹ ತಯಾರಿಸಲಾಗಿದ್ದು, ತಂಡವು ಹೋಟೆಲ್‌ಗೆ ಆಗಮಿಸಿದ ನಂತರ ಕತ್ತರಿಸಲಾಗುತ್ತದೆ. ಇಡೀ ತಂಡಕ್ಕೆ ರಾಷ್ಟ್ರೀಯ ತ್ರಿವರ್ಣ ಧ್ವಜವನ್ನು ಪ್ರತಿನಿಧಿಸುವ ಸ್ವಾಗತ ಪಾನೀಯಗಳು ಸಹ ಸಿದ್ಧವಾಗಿವೆ. ಪ್ರಧಾನಿ ಮೋದಿ ಅವರೊಂದಿಗೆ ವಿಶೇಷ ಸಭೆಯ ನಂತರ, ತಂಡವು ನಾರಿಮನ್ ಪಾಯಿಂಟ್‌ನಿಂದ ವಾಂಖೆಡೆ ಕ್ರೀಡಾಂಗಣದವರೆಗೆ ಅಭಿಮಾನಿಗಳಿಗಾಗಿ ವಿಶೇಷ ರೋಡ್ ಶೋಗಾಗಿ ಮುಂಬೈಗೆ ಹಾರಲಿದೆ. ಅಲ್ಲಿ ಇಡೀ ತಂಡವನ್ನು ಗೌರವಿಸಲಾಗುತ್ತದೆ.
ಗುರುವಾರ ಟೀಮ್ ಇಂಡಿಯಾ ವೇಳಾಪಟ್ಟಿ ಏನು?
* ಬೆಳಗ್ಗೆ 9:30ಕ್ಕೆ ಪ್ರಧಾನಿ ಮೋದಿ ಮನೆಗೆ ಟೀಂ ಇಂಡಿಯಾ ಹೊರಡಲಿದೆ.
* ಮೋದಿ ಭೇಟಿಯಾದ ನಂತರ ಮುಂಬೈಗೆ ಚಾರ್ಟರ್ಡ್ ವಿಮಾನವನ್ನು ಏರಲಿದ್ದಾರೆ.
* ಮುಂಬೈ ವಿಮಾನ ನಿಲ್ದಾಣದಿಂದ ವಾಂಖೆಡೆ ಕ್ರೀಡಾಂಗಣಕ್ಕೆ ಭೇಟಿ
* ವಾಂಖೆಡೆ ಸ್ಟೇಡಿಯಂಗೆ 1 ಕಿ.ಮೀ ಉದ್ದದ ಬಸ್ ಪರೇಡ್.
* ರೋಹಿತ್ ಅವರು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಅವರಿಗೆ ವಿಶ್ವಕಪ್ ಹಸ್ತಾಂತರಿಸುವ ಸಣ್ಣ ಪ್ರಸ್ತುತಿ.
* ಟೀಮ್ ಇಂಡಿಯಾ ಆಟಗಾರರು ಸಂಜೆ ವಾಂಖೆಡೆಯಿಂದ ತಮ್ಮ ಮನೆಗಳತ್ತ ಪ್ರಯಾಣ.