

ನವದೆಹಲಿ: ಟಿ20 ವಿಶ್ವಕಪ್ ಗೆಲುವಿನ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ರೋಹಿತ್ ಶರ್ಮ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಮುಂದಿನ ಟಿ20 ನಾಯಕ ಯಾರಾಗಲಿದ್ದಾರೆ ಎಂಬ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆದಿತ್ತು. ಟಿ20 ತಂಡದ ಉಪನಾಯಕರಾಗಿದ್ದ ಹಾರ್ದಿಕ್ ಪಾಂಡ್ಯಗೆ ನಾಯಕತ್ವದ ಸಿಗಲಿದೆ ಎಂದು ಹೇಳಲಾಗುತ್ತಿತ್ತು. ಏಕೆಂದರೆ, ಹಾರ್ದಿಕ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಈ ಹಿಂದೆ ಹಲವು ಸರಣಿಗಳನ್ನು ಆಡಿದೆ. ಪಾಂಡ್ಯ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಐಪಿಎಲ್ನಲ್ಲೂ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ಮೊದಲ ಸೀಸನ್ನಲ್ಲೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು. ಅದರ ನಂತರ ಗುಜರಾತ್ ಐಪಿಎಲ್ 2023ರಲ್ಲಿ ರನ್ನರ್ ಅಪ್ ಆಯಿತು. ನಂತರ ಪಾಂಡ್ಯ ಮುಂಬೈ ಇಂಡಿಯನ್ಸ್ ನಾಯಕರಾದರು. ಇವೆಲ್ಲವೂ ಪಾಂಡ್ಯ ಪಾಲಿಗೆ ಪಾಸಿಟಿವ್ ಆಗಿತ್ತು.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಟಿ20 ವಿಶ್ವಕಪ್ನಲ್ಲಿಯು ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಒಳ್ಳೆಯ ಆಲ್ರೌಂಡರ್ ಎನಿಸಿಕೊಂಡರು. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ತೀವ್ರ ಒತ್ತಡದಲ್ಲಿ ಕೊನೆಯ ಓವರ್ ಬೌಲ್ ಮಾಡಿದ ಅವರು ಟೀಮ್ ಇಂಡಿಯಾಗೆ ಜಯ ತಂದುಕೊಟ್ಟರು. ಹೀಗಾಗಿ ಪಾಂಡ್ಯಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಯಿತು. ಟಿ20 ನಾಯಕನ ಸ್ಥಾನಕ್ಕೆ ಪಾಂಡ್ಯರನ್ನು ಯಾರು ತಡೆಯಲಾರರು ಎಂದು ಎಲ್ಲರೂ ಭಾವಿಸಿದ್ದರು.
ಆದರೆ, ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಿಸಿಸಿಐ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ನಾಯಕರನ್ನಾಗಿ ನೇಮಿಸಿದೆ. ಇದಲ್ಲದೆ, ಹಾರ್ದಿಕ್ ಪಾಂಡ್ಯ ಅವರ ಉಪನಾಯಕ ಹುದ್ದೆಯನ್ನೂ ಕಿತ್ತುಕೊಳ್ಳಲಾಗಿದೆ. ಬಿಸಿಸಿಐ ತೆಗೆದುಕೊಂಡ ಈ ನಿರ್ಧಾರ ಪಾಂಡ್ಯ ಅಭಿಮಾನಿಗಳಿಗೆ ಶಾಕ್ ನೀಡಿದೆ. ಪತ್ನಿಯಿಂದ ವಿಚ್ಛೇದನ ಪಡೆದು ವೈಯುಕ್ತಿಕ ಜೀವನದಲ್ಲಿ ಸಮಸ್ಯೆ ಎದುರಿಸುತ್ತಿರುವ ಪಾಂಡ್ಯಗೆ ಬಿಸಿಸಿಐ ನಿರ್ಧಾರ ಗಾಯದ ಮೇಲೆ ಬರೆ ಎಳೆದಂತಿದೆ.
ಅಂದಹಾಗೆ ಹಾರ್ದಿಕ್ ಪಾಂಡ್ಯ ಅವರಿಗೆ ಟಿ20 ನಾಯಕತ್ವ ಸಿಗದಿರಲು ನೂತನವಾಗಿ ನೇಮಕವಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಕಾರಣ ಎಂಬ ಮಾತು ಆರಂಭದಲ್ಲಿ ಕೇಳಿಬಂದಿತ್ತು. ಆದರೆ, ನಂತರದಲ್ಲಿ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಕಾರಣದಿಂದ ಪಾಂಡ್ಯಗೆ ನಾಯಕತ್ವ ಸಿಗಲಿಲ್ಲ ಎಂಬ ಸುದ್ದಿ ಹರಿದಾಡಿತು.
ಇತ್ತೀಚೆಗಷ್ಟೇ ಸುದ್ದಿಗೋಷ್ಠಿಯಲ್ಲಿ ಗಂಭೀರ್ ಮತ್ತು ಅಜಿತ್ ಅಗರ್ಕರ್ ಬಹಿರಂಗ ಪಡಿಸಿದ ವಿಚಾರವನ್ನು ಆಧರಿಸಿ, ಹಾರ್ದಿಕ್ ಪಾಂಡ್ಯಗೆ ನಾಯಕತ್ವ ಸಿಗದಿರಲು ಟೀಮ್ ಇಂಡಿಯಾದ ಕ್ರಿಕೆಟಿಗರು ಕಾರಣ ಎಂಬುದು ಗೊತ್ತಾಗಿದೆ. ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು, ಟಿ20 ನಾಯಕನನ್ನು ಆಯ್ಕೆ ಮಾಡುವ ಮೊದಲು, ಟೀಮ್ ಇಂಡಿಯಾದ ಡ್ರೆಸ್ಸಿಂಗ್ ಕೊಠಡಿಯನ್ನು ಸಂಪರ್ಕಿಸಿ ಆಟಗಾರರಿಂದ ಸಲಹೆಗಳನ್ನು ಪಡೆದಿದ್ದಾಗಿ ತಿಳಿಸಿದ್ದಾರೆ. ಈ ವೇಳೆ ಬಹುತೇಕರು ಹಾರ್ದಿಕ್ಗೆ ನಾಯಕತ್ವ ನೀಡದಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸೂರ್ಯಕುಮಾರ್ ಬಗ್ಗೆ ಎಲ್ಲರು ಒಲವು ತೋರಿದ್ದಕ್ಕೆ ಅವರನ್ನು ನಾಯಕನಾಗಿ ನೇಮಿಸಲಾಗಿದೆ ಎಂದು ಅಜಿತ್ ಅಗರ್ಕರ್ ಹೇಳಿದರು. (ಏಜೆನ್ಸೀಸ್)