

ಬೆಂಗಳೂರು: ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಡಾ. ವಿಜೇತ ದಂಪತಿ ಶುಕ್ರವಾರ ಮೈಸೂರಿನಲ್ಲಿ ಪುತ್ರ ಸಮಿತ್ ದ್ರಾವಿಡ್ ಆಟಕ್ಕೆ ಸಾಕ್ಷಿಯಾದರು.
ಅರಮನೆನಗರಿಯಲ್ಲಿರುವ ಮಾನಸಗಂಗೋತ್ರಿಯ ಒಡೆಯರ್ ಮೈದಾನದಲ್ಲಿ ನಡೆಯುತ್ತಿರುವ 19 ವಯೋಮಿತಿಯ ಕೂಚ್ ಬಿಹಾರ್ ಟ್ರೋಫಿ ಚತುರ್ದಿನ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಉತ್ತರಾಖಂಡ ಎದುರು ಸಮಿತ್ ಆತಿಥೇಯ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದು, ಮೊದಲ ದಿನದಾಟದಲ್ಲಿ 5 ಓವರ್ ಬೌಲಿಂಗ್ ಮಾಡಿ 11 ರನ್ ಬಿಟ್ಟುಕೊಟ್ಟರು.
ರಾಷ್ಟ್ರೀಯ ತಂಡದ ಕೋಚ್ ಎಂಬ ಅಹಂ ಇಲ್ಲದೆ ಓರ್ವ ಸಾಮಾನ್ಯ ಅಪ್ಪನಾಗಿ ದ್ರಾವಿಡ್ ಮಗನ ಆಟವನ್ನು ಆನಂದಿಸಿದರು. ಅವರು ಸರಳವಾಗಿ ಮೆಟ್ಟಿಲ ಮೇಲೆ ಕುಳಿತು ಪಂದ್ಯ ವೀಕ್ಷಿಸುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಸರಳತೆಗೆ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿದೆ.