ಸುರಕ್ಷಿತ ಸ್ಥಳದಲ್ಲಿ ಟೀಮ್ ಇಂಡಿಯಾ ಶಿಬಿರ: ಬೆಂಗಳೂರಿನ ಎನ್​ಸಿಎಯಲ್ಲಿ ಆಯೋಜನೆಗೆ ಹಿಂದೇಟು

cricket
Published on

ನವದೆಹಲಿ: ಕ್ರಿಕೆಟ್ ಚಟುವಟಿಕೆಗಳನ್ನು ಪುನರಾರಂಭ ಮಾಡುವ ಮೊದಲ ಭಾಗವಾಗಿ ಭಾರತ ತಂಡದ ಆಟಗಾರರಿಗೆ, ಕರೊನಾ ಭೀತಿ ಇಲ್ಲದ ಸುರಕ್ಷಿತ ಸ್ಥಳ ವೊಂದರಲ್ಲಿ ಐಸೋಲೇಷನ್ ಶಿಬಿರ ಆಯೋಜಿಸಲು ಬಿಸಿಸಿಐ ಯೋಜನೆ ರೂಪಿಸುತ್ತಿದೆ. ಸಾಮಾನ್ಯವಾಗಿ ಭಾರತ ತಂಡದ ತರಬೇತಿ ಶಿಬಿರಗಳು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್​ಸಿಎ) ನಡೆಯುತ್ತವೆ. ಆದರೆ ಬೆಂಗಳೂರು ‘ರೆಡ್ ಝೋನ್’ನಲ್ಲಿ ಇರುವುದರಿಂದಾಗಿ ಬಿಸಿಸಿಐ, ಶಿಬಿರ ಆಯೋಜನೆಗೆ ಸೂಕ್ತ ವ್ಯವಸ್ಥೆಗಳನ್ನು ಒಳಗೊಂಡ ಮತ್ತು ಕೇಂದ್ರ ಸರ್ಕಾರದಿಂದ ‘ಸುರಕ್ಷಿತ’ ಎಂದು ಗುರುತಿಸಲ್ಪಟ್ಟ ಸ್ಥಳದ ಹುಡುಕಾಟದಲ್ಲಿದೆ.

ಎಲ್ಲ ಆಟಗಾರರು ಕಳೆದ 2 ತಿಂಗಳಿನಿಂದ ಲಾಕ್​ಡೌನ್​ನಲ್ಲಿ ಸಿಲುಕಿಕೊಂಡಿದ್ದು, ನೆಟ್ಸ್ ಅಭ್ಯಾಸದಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ. ಹೆಚ್ಚೆಂದರೆ ಮನೆಯಲ್ಲೇ ದೈಹಿಕ ವ್ಯಾಯಾಮ, ಜಿಮ್ ಟ್ರೇನಿಂಗ್​ಗಳನ್ನು ಮಾತ್ರ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಆಟಗಾರರು ಮ್ಯಾಚ್ ಫಿಟ್ ಆಗಬೇಕಾದರೆ ಮತ್ತು ಬ್ಯಾಟಿಂಗ್-ಬೌಲಿಂಗ್​ನಲ್ಲಿ ಹಿಂದಿನ ಲಯವನ್ನು ಮರಳಿ ಪಡೆದುಕೊಳ್ಳಬೇಕಾದರೆ ಸಾಕಷ್ಟು ಅಭ್ಯಾಸ-ತರಬೇತಿಗಳು ಅಗತ್ಯವಾರುತ್ತವೆ. ಹೀಗಾಗಿ ಭಾರತ ತಂಡದ ಪ್ರಮುಖ ಆಟಗಾರರು, ತರಬೇತಿ ಸಿಬ್ಬಂದಿ ಒಳಗೊಂಡ ಶಿಬಿರವನ್ನು ಮೊದಲಿಗೆ ಆಯೋಜನೆ ಮಾಡಬೇಕಾಗಿದೆ.

‘ಆಟಗಾರರ ಸುರಕ್ಷತೆಗೆ ಮಂಡಳಿ ಅಗ್ರ ಆದ್ಯತೆ ನೀಡುತ್ತದೆ. ಲಾಜಿಸ್ಟಿಕ್ಸ್ ಸಮಸ್ಯೆಗಳನ್ನೂ ನಾವು ಬಗೆಹರಿಸಿಕೊಳ್ಳಬೇಕಾಗಿದೆ. ಬೆಂಗಳೂರಿನ ಎನ್​ಸಿಎಯಲ್ಲಿ ಆಟಗಾರರ ಅಭ್ಯಾಸಕ್ಕೆ ಸುಸಜ್ಜಿತ ವ್ಯವಸ್ಥೆಗಳಿವೆ. ಆದರೆ ಬೆಂಗಳೂರಿನಲ್ಲಿ ಕರೊನಾ ಪ್ರಕರಣಗಳು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಕಂಟೈನ್​ವೆುಂಟ್ ಝೋನ್​ನಿಂದ ಹೊರಗಿರುವ ದೇಶದ ಸುರಕ್ಷಿತ ಸ್ಥಳವೊಂದರ ಹುಡುಕಾಟದಲ್ಲಿದ್ದೇವೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಶಿಬಿರದ ಸ್ಥಳವನ್ನು ಸಂಪೂರ್ಣವಾಗಿ ಸ್ಯಾನಿಟೈಜ್ ಮಾಡಲಾಗುವುದು. ಆ ಸ್ಥಳ ದಲ್ಲಿ ನಿರ್ದಿಷ್ಟವಾದ ಭದ್ರತಾ ಸಿಬ್ಬಂದಿ ಮತ್ತು ಸಹಾಯಕರು ಮತ್ತು ಅಡುಗೆ ಮಾಡುವವರನ್ನು ನೇಮಿಸಿಕೊಳ್ಳಲಾಗುವುದು. ಶಿಬಿರದ ಸ್ಥಳದಿಂದ ಯಾರೂ ಹೊರಹೋಗು ವಂತಿರುವುದಿಲ್ಲ’ ಎಂದು ಅವರು ವಿವರಿಸಿ ದ್ದಾರೆ. ಕ್ರಿಕೆಟಿಗರ ವೇತನವನ್ನು ಕಡಿತ ಮಾಡುವ ಯೋಚನೆ ಇಲ್ಲ. ಇದಕ್ಕೆ ಬದಲಾಗಿ ವೆಚ್ಚ ನಿಯಂತ್ರಿಸಲು ಬಿಸಿಸಿಐ ನಿರ್ಧರಿಸಿದೆ.

ಲಂಕಾ ಪ್ರವಾಸ ಜುಲೈಗೆ ಮುಂದೂಡಿಕೆ?

ಹಾಲಿ ಪರಿಸ್ಥಿತಿಯಲ್ಲಿ ಭಾರತ ತಂಡದ ಮುಂಬರುವ ಶ್ರೀಲಂಕಾ ಪ್ರವಾಸ ನಡೆಯುವ ಯಾವ ಸಾಧ್ಯತೆಯೂ ಕಾಣಿಸುತ್ತಿಲ್ಲ. ಜೂನ್ ತಿಂಗಳಲ್ಲಿ ನಿಗದಿಯಾಗಿರುವ ಪ್ರವಾಸದಲ್ಲಿ ಭಾರತ ತಲಾ 3 ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಬೇಕಾಗಿದೆ. ಆದರೆ ಆಟಗಾರರು ಮ್ಯಾಚ್ ಫಿಟ್ ಆಗಲು ಕನಿಷ್ಠ ಒಂದು ತಿಂಗಳ ಅಭ್ಯಾಸ ಬೇಕಾಗುವ ನಿರೀಕ್ಷೆ ಇದೆ. ಈ ನಡುವೆ, ಸರಣಿಯನ್ನು ಜುಲೈಗೆ ಮುಂದೂಡುವಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯಿಂದ ಶುಕ್ರವಾರ ಮನವಿಯೂ ಬಂದಿದೆ. ಭಾರತ ತಂಡ ಪ್ರವಾಸ ಕೈಗೊಳ್ಳದಿದ್ದರೆ ಲಂಕಾ ಮಂಡಳಿ ದೊಡ್ಡ ಆರ್ಥಿಕ ಹೊಡೆತ ಎದುರಿಸಬೇಕಾಗುತ್ತದೆ.

ಆಂಗ್ಲ ಕ್ರಿಕೆಟಿಗರ ಅಭ್ಯಾಸಕ್ಕೆ ಪ್ರತ್ಯೇಕ ಚೆಂಡು!

ಲಂಡನ್: ಇಂಗ್ಲೆಂಡ್​ನಲ್ಲೂ ಮುಂದಿನ ವಾರದಿಂದ ಕ್ರಿಕೆಟ್ ಅಭ್ಯಾಸ ಪುನರಾರಂಭಕ್ಕೆ ಯೋಜನೆ ರೂಪಿಸಲಾಗಿದೆ. ಇದರನ್ವಯ ಪ್ರತಿ ಆಟಗಾರರಿಗೂ ಅಭ್ಯಾಸಕ್ಕೆ ಪ್ರತ್ಯೇಕವಾದ ಚೆಂಡಿನ ಬಾಕ್ಸ್ ನೀಡಲು ನಿರ್ಧರಿಸ ಲಾಗಿದೆ. ಈ ವೈಯಕ್ತಿಕ ಚೆಂಡುಗಳಿಗೆ ಅವರು ಅಭ್ಯಾಸದ ವೇಳೆ ಎಂಜಲು-ಬೆವರು ಹಚ್ಚಬಹುದಾಗಿದೆ. ಅಲ್ಲದೆ ತರಬೇತಿಯ ವೇಳೆ ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ಮಾರ್ಕ್ ಮಾಡಿದ ನೀರಿನ ಬಾಟಲಿಗಳನ್ನು ನೀಡಲಾಗುವುದು. ಮುಂಬರುವ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಸಿದ್ಧತೆ ಆರಂಭಿಸಲಿದ್ದು, 30 ಸಂಭಾವ್ಯ ಆಟಗಾರರ ಗುಂಪು ಅಭ್ಯಾಸದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net