

ಮುಂಬೈ: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಒಡೆತನಕ್ಕೆ ಒಳಪಟ್ಟ ಮುಂಬೈನ ರೆಸ್ಟೋರೆಂಟ್ ಪಂಚೆ ಧರಿಸಿದವರಿಗೆ ಪ್ರವೇಶ ನಿರಾಕರಿಸುವ ಮೂಲಕ ವಿವಾದಕ್ಕೀಡಾಗಿದೆ.
ಕೊಹ್ಲಿ ಕ್ರಿಕೆಟ್ ಜತೆಗೆ ವಿವಿಧ ಉದ್ಯಮಗಳಲ್ಲಿ ತೊಡಗಿಕೊಂಡಿದ್ದು, ಮುಂಬೈನ ಜೂಹುನಲ್ಲಿ "ಒನ್ 8 ಕಮ್ಯೂನ್' ಎಂಬ ರೆಸ್ಟೋರೆಂಟ್ ಕೂಡ ನಡೆಸುತ್ತಿದ್ದಾರೆ. ತಮಿಳುನಾಡಿನ ವ್ಯಕ್ತಿಯೊಬ್ಬರು ಪಂಚೆ ಧರಿಸಿ ಈ ರೆಸ್ಟೋರೆಂಟ್ ಪ್ರವೇಶಿಸಲು ಯತ್ನಿಸಿದಾಗ ಪ್ರವೇಶ ನಿರಾಕರಿಸಲಾಗಿದೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನೂ ಹಂಚಿಕೊಂಡಿದ್ದು, "ನಾನು ವಿರಾಟ್ ಕೊಹ್ಲಿ ಅವರು ಬಹುದೊಡ್ಡ ಅಭಿಮಾನಿ. ಹೀಗಾಗಿ ಈ ರೆಸ್ಟೋರೆಂಟ್ ಪ್ರವೇಶಿಸಲು ಉತ್ಸುಕನಾಗಿದ್ದೆ. ಆದರೆ ಪಂಚೆ ಧರಿಸಿ ರೆಸ್ಟೋರೆಂಟ್ ಪ್ರವೇಶಿಸಲು ಮ್ಯಾನೇಜ್ಮೆಂಟ್ ಅನುಮತಿ ನಿರಾಕರಿಸಿದೆ. ಇದು ನಮ್ಮ ವಸ್ತ್ರಸಂಹಿತೆಯಲ್ಲಿ ಇಲ್ಲ ಎಂದಿದೆ' ಎಂದಿದ್ದಾರೆ.
ರೆಸ್ಟೋರೆಂಟ್ ಮುಂದೆ ನಿಂತಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದು, ಶಾರ್ಟ್ಸ್ ಧರಿಸಿದವರು ಒಳಗೆ ಹೋಗುತ್ತಿದ್ದಾರೆ. ಆದರೆ ಪಂಚೆ ಧರಿಸಿದವರನ್ನು ತಡೆದು ತಾರತಮ್ಯ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.