ಆರ್​ಸಿಬಿಯ ಈ ಆಟಗಾರನನ್ನು ಟಿ20 ವಿಶ್ವಕಪ್​ನಲ್ಲಿ ಆಡಿಸಬೇಡಿ! ಇರ್ಫಾನ್​ ಪಠಾಣ್​ ಶಾಕಿಂಗ್​ ಹೇಳಿಕೆ

Irfan Pathan
Published on

ನವದೆಹಲಿ: ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ಪರ ಅಬ್ಬರಿಸಿ ಬೊಬ್ಬಿರಿಯುತ್ತಿರುವ ದಿನೇಶ್​ ಕಾರ್ತಿಕ್​ ಕುರಿತು ಟೀಮ್​ ಇಂಡಿಯಾದ ಮಾಜಿ ಆಟಗಾರ ಇರ್ಫಾನ್​ ಪಠಾಣ್​ ನೀಡಿರುವ ಹೇಳಿಕೆ ಕ್ರಿಕೆಟ್​ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ.

ಜೂನ್​ 1ರಿಂದ ಟಿ20 ವಿಶ್ವಕಪ್​ ಟೂರ್ನಿ ಆರಂಭವಾಗುತ್ತದೆ. ಈ ಟೂರ್ನಿ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ನಲ್ಲಿ ನಡೆಯಲಿದ್ದು, ಈ ಬಾರಿ ವಿಶ್ವಕಪ್​ ಗೆಲ್ಲುವ ನಿರೀಕ್ಷೆಯನ್ನು ಸಹ ಇಟ್ಟುಕೊಳ್ಳಲಾಗಿದೆ. ಇದಕ್ಕಾಗಿ ಬಲಿಷ್ಠ ತಂಡವನ್ನು ಕಟ್ಟಲು, ಟೀಮ್​ ಇಂಡಿಯಾ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಈ ಸಂದರ್ಭದಲ್ಲಿ, ವಿಕೆಟ್ ಕೀಪರ್ ಸ್ಥಾನಕ್ಕಾಗಿ ಕಠಿಣ ಪೈಪೋಟಿಯೂ ನಡೆಯುತ್ತಿದೆ. ಇದರ ನಡುವೆ ಟೀಮ್​ ಇಂಡಿಯಾದ ಮಾಜಿ ಆಟಗಾರ ಅಂಬಾಟಿ ರಾಯುಡು ದಿನೇಶ್​ ಕಾರ್ತಿಕ್​ ಹೆಸರನ್ನು ಸೂಚಿಸಿದ್ದಾರೆ.

ಧೋನಿ ಶೈಲಿಯಲ್ಲಿ ಪಂದ್ಯ ಮುಗಿಸುವ ಸಾಮರ್ಥ್ಯ ಇರುವ ದಿನೇಶ್​ ಕಾರ್ತಿಕ್​ಗೆ ಕೊನೆಯದಾಗಿ ಟಿ20 ವಿಶ್ವಕಪ್​ನಲ್ಲಿ ಒಂದು ಅವಕಾಶ ಕೊಡಬೇಕಿದೆ ಎಂದು ರಾಯುಡು ಹೇಳಿದ್ದಾರೆ. ಆದರೆ, ರಾಯುಡು ಮಾತನ್ನು ಇರ್ಫಾನ್​ ಪಠಾಣ್​ ನಿರಾಕರಿಸಿದ್ದು, ದಿನೇಶ್​ ಕಾರ್ತಿಕ್​ರನ್ನು ಆಯ್ಕೆ ಮಾಡದಂತೆ ಸಲಹೆ ನೀಡಿದ್ದಾರೆ.

ಈ ಬಗ್ಗೆ ವಿವರಣೆ ನೀಡಿರುವ ಇರ್ಫಾನ್​, ನಾನು ಖಂಡಿತವಾಗಿ ದಿನೇಶ್​ ಕಾರ್ತಿಕ್​ ಅವರನ್ನು ಪ್ರಶಂಸಿಸುತ್ತೇನೆ. ಅವರು ಒಳ್ಳೆಯ ಫಾರ್ಮ್​ನಲ್ಲಿದ್ದಾರೆ. ಆದರೆ, ಭಾರತ ತಂಡ ತುಂಬಾ ವಿಭಿನ್ನವಾಗಿದೆ. ಅಲ್ಲದೆ, ವಿಶ್ವಕಪ್​ ಟೂರ್ನಿಯು ಬೇರೆ ರೀತಿಯಲ್ಲಿ ನಡೆಯಲಿದೆ. ಐಪಿಎಲ್​ ರೀತಿ ಇರುವುದಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡದ ಆಟಗಾರರನ್ನು ತಂಡದಲ್ಲಿ ಹೊಂದಿರುವುದಿಲ್ಲ ಎಂದು ಹೇಳಿದ್ದಾರೆ.

ಇನ್ನು ವಿಶ್ವಕಪ್‌ನಲ್ಲಿ ಯಾವುದೇ ಇಂಪ್ಯಾಕ್ಟ್​ ಪ್ಲೇಯರ್​ ನಿಯಮವೂ ಇರುವುದಿಲ್ಲ. ಕೇವಲ 11 ಆಟಗಾರರು ಆಡಲಿದ್ದಾರೆ. ಹಾಗಾಗಿ ಅಲ್ಲಿ ಬ್ಯಾಟಿಂಗ್ ಮಾಡುವುದು ವಿಭಿನ್ನ ಒತ್ತಡವನ್ನು ನೀಡುತ್ತದೆ. ಬುಮ್ರಾ ಮತ್ತು ಇತರ ಬೌಲರ್‌ಗಳನ್ನು ಎದುರಿಸುವುದರಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಚೊಚ್ಚಲ ಬೌಲರ್‌ಗಳಿಗೂ ಅನುಭವಿ ಬೌಲರ್‌ಗಳಿಗೂ ವ್ಯತ್ಯಾಸವಿದೆ ಎಂದರು.

ದಿನೇಶ್​ ಕಾರ್ತಿಕ್​, ಧೋನಿಯಂತೆ ಆಡುತ್ತಾರೆ ಎಂದು ನೀವು ಹೇಳಿದ್ದೀರಿ. ಆದರೆ, ಧೋನಿ ಇಲ್ಲದಿರುವಾಗ ರಿಷಬ್ ಪಂತ್ ಫಾರ್ಮ್‌ನಲ್ಲದಿದ್ದರೆ ನಾನು ನಿಮ್ಮ ಮಾತನ್ನು ಒಪ್ಪುತ್ತಿದ್ದೆ. ನಾನು ಕಾರ್ತಿಕ್ ಬದಲಿಗೆ ಸಂಜು ಸ್ಯಾಮ್ಸನ್ ಅವರನ್ನು ಪರಿಗಣಿಸುತ್ತೇನೆ. ಒಬ್ಬ ಆಟಗಾರ ಫಾರ್ಮ್‌ನಲ್ಲಿರುವಾಗ ಅಸ್ತಿತ್ವದಲ್ಲಿರುವ ಆಟಗಾರರನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂದು ಇರ್ಫಾನ್​ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net