

ಮೆಲ್ಬೋರ್ನ್: ಹಾಲಿ ವರ್ಷದ ಬಹುತೇಕ ಪ್ರಮುಖ ಕ್ರೀಡಾಕೂಟಗಳು ಈಗಾಗಲೆ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿವೆ. ಕ್ರಿಕೆಟ್ನಲ್ಲೂ ಈ ವರ್ಷದ ಪ್ರಮುಖ ಕ್ರೀಡಾಕೂಟವೆನಿಸಿರುವ ಟಿ20 ವಿಶ್ವಕಪ್ ಕೂಡ ಮುಂದೂಡಿಕೆಯಾಗುವ ಸಾಧ್ಯತೆ ಕಾಣಿಸಿದೆ. ಆದರೆ ಇದು ಮುಂದಿನ ವರ್ಷಕ್ಕೆ ಬದಲಾಗಿ 2022ಕ್ಕೆ ಮುಂದೂಡಿಕೆಯಾಗುವ ನಿರೀಕ್ಷೆ ಇದೆ.
2021ರ ಅಕ್ಟೋಬರ್-ನವೆಂಬರ್ನಲ್ಲಿ ಈಗಾಗಲೆ ಭಾರತದಲ್ಲಿ ಟಿ20 ವಿಶ್ವಕಪ್ ನಿಗದಿಯಾಗಿದೆ. ಹೀಗಾಗಿ ಆಸ್ಟ್ರೇಲಿಯಾದಲ್ಲಿ ಈ ವರ್ಷ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ಟೂರ್ನಿಯನ್ನು 2 ವರ್ಷಗಳ ಮಟ್ಟಿಗೆ ಮುಂದೂಡಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಐಸಿಸಿ ಮೂಲಗಳು ತಿಳಿಸಿವೆ.
ಆಸ್ಟ್ರೇಲಿಯಾದಲ್ಲಿ 6 ತಿಂಗಳ ಕಾಲ ವಿದೇಶಿ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಿರುವ ಕಾರಣ, ನಿಗದಿಯಂತೆ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ಟಿ20 ವಿಶ್ವಕಪ್ ಆಯೋಜನೆಗೆ ಅವಕಾಶ ದೊರೆಯುವ ಬಗ್ಗೆ ಅನುಮಾನಗಳಿವೆ.
‘ಆಂತರಿಕ ಚರ್ಚೆಯ ವೇಳೆ ಟಿ20 ವಿಶ್ವಕಪ್ ಮುಂದೂಡಿಕೆಯ ಚಿಂತನೆ ನಡೆಸಲಾಗಿದೆ. ಆದರೆ ಎಲ್ಲಿಯವರೆಗೆ ಮುಂದೂಡುವುದು ಎಂಬ ಬಗ್ಗೆ ಸ್ಪಷ್ಟತೆ ಮೂಡಿಲ್ಲ. ಡಿಸೆಂಬರ್ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಬೇಕಿದೆ. ಮುಂದಿನ ವರ್ಷರಾಂಭದಲ್ಲಿ ಆಸೀಸ್ನಲ್ಲಿ ಬಿಗ್ ಬಾಷ್ ಲೀಗ್ ನಡೆಯಲಿದೆ. ಮಾರ್ಚ್ನಲ್ಲಿ ಟೂರ್ನಿ ಸಂಘಟಿಸುವ ಪ್ರಸ್ತಾಪವನ್ನು ಪ್ರಸಾರ ಹಕ್ಕು ಹೊಂದಿರುವ ಸಂಸ್ಥೆ ಒಪ್ಪಿಕೊಳ್ಳದು. ಯಾಕೆಂದರೆ ಏಪ್ರಿಲ್-ಮೇನಲ್ಲಿ ಐಪಿಎಲ್ ನಡೆಯಲಿರುವ ಕಾರಣ ಸತತ 2 ಟಿ20 ಟೂರ್ನಿಗಳು ಬಂದರೆ ಜಾಹೀರಾತುದಾರರನ್ನು ಸೆಳೆಯುವುದು ಮತ್ತು ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟವಾಗುತ್ತದೆ’ ಎಂದು ಐಸಿಸಿ ಮೂಲಗಳು ತಿಳಿಸಿವೆ.
ಆತಿಥೇಯ ಆಸ್ಟ್ರೇಲಿಯಾ ಮತ್ತು ಐಸಿಸಿ ಕೂಡ ಈ ವರ್ಷ ನಿಗದಿಯಂತೆ ಟಿ20 ವಿಶ್ವಕಪ್ ನಡೆಯಲಿದೆ ಎಂದು ಈ ಹಿಂದೆ ಸ್ಪಷ್ಟಪಡಿಸಿತ್ತು. ಪುರುಷರ ಕ್ರಿಕೆಟ್ನಲ್ಲಿ ಟಿ20 ವಿಶ್ವಕಪ್ ಟೂರ್ನಿ ಕೊನೆಯದಾಗಿ 2016ರಲ್ಲಿ ಭಾರತದಲ್ಲೇ ನಡೆದಿದ್ದು, 5 ವರ್ಷಗಳ ಬಳಿಕ 2021ರಲ್ಲಿ ಮತ್ತೆ ಭಾರತದಲ್ಲೇ ಮತ್ತೆ ಮುಂದಿನ ಆವೃತ್ತಿ ನಡೆಯುವ ನಿರೀಕ್ಷೆ ಇದೆ. ಇದರಿಂದ ಆಸ್ಟ್ರೇಲಿಯಾದಲ್ಲಿ 2022ರಲ್ಲಿ ನಡೆಯುವ ಟೂರ್ನಿ 7ಕ್ಕೆ ಬದಲಾಗಿ 8ನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯಾಗಲಿದೆ.
ಅಕ್ಟೋಬರ್-ನವೆಂಬರ್ನಲ್ಲಿ ಐಪಿಎಲ್-13 ಟೂರ್ನಿ?
ಹಾಲಿ ವರ್ಷದ ಐಪಿಎಲ್ ಟೂರ್ನಿಯನ್ನೇ ರದ್ದುಗೊಳಿಸುವ ಬಗ್ಗೆ ಚಿಂತಿಸಿದ್ದ ಬಿಸಿಸಿಐಗೆ ಈಗ ಹೊಸ ಆಶಾಕಿರಣವೊಂದು ಮೂಡಿದೆ. ಅಕ್ಟೋಬರ್-ನವೆಂಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಮುಂದೂಡಲ್ಪಟ್ಟರೆ, ಅದೇ ಸಮಯದಲ್ಲಿ ಐಪಿಎಲ್ 13ನೇ ಆವೃತ್ತಿ ಆಯೋಜಿಸಲಾಗುವುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಐಸಿಸಿ ಸ್ಪಷ್ಟ ನಿರ್ಧಾರ ತೆಗೆದುಕೊಂಡ ಬಳಿಕವಷ್ಟೇ ಬಿಸಿಸಿಐ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿದೆ. ಕೇಂದ್ರ ಸರ್ಕಾರ ಸದ್ಯ ಏಪ್ರಿಲ್ 15ರವರೆಗೆ ವಿದೇಶಿ ಪ್ರವಾಸಿಗರಿಗೆ ವೀಸಾ ನೀಡುವುದಿಲ್ಲ ಎಂದು ಘೋಷಿಸಿದೆ. ಈ ನಿರ್ಬಂಧ ಇನ್ನಷ್ಟು ಸಮಯ ವಿಸ್ತರಣೆಯಾಗುವ ನಿರೀಕ್ಷೆ ಇದ್ದು, ಎಷ್ಟು ದಿನ, ವಾರ, ತಿಂಗಳು ಇದು ವಿಸ್ತರಣೆಯಾಗಲಿದೆ ಎಂಬುದನ್ನು ಆಧರಿಸಿ ಐಪಿಎಲ್ ವೇಳಾಪಟ್ಟಿ ರೂಪಿಸಲು ಸಾಧ್ಯ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. ಸೆಪ್ಟೆಂಬರ್ನಲ್ಲಿ ನಡೆಯಬೇಕಿರುವ ಏಷ್ಯಾಕಪ್ ಟಿ20 ಟೂರ್ನಿ ರದ್ದುಗೊಳ್ಳುವ ಸಾಧ್ಯತೆ ಇರುವುದರಿಂದ ಆ ಸಮಯದಲ್ಲಿ ಐಪಿಎಲ್ ಆಯೋಜಿಸುವ ಬಗ್ಗೆಯೂ ಬಿಸಿಸಿಐ ಈ ಮುನ್ನ ಚಿಂತನೆ ನಡೆಸಿತ್ತು.