

ನವದೆಹಲಿ: ಕರೊನಾ ವೈರಸ್ ಪಿಡುಗು ವಿಶ್ವದಾದ್ಯಂತ ಹಬ್ಬಿದೆ. ಈ ಹಿನ್ನೆಲೆಯಲ್ಲಿ ಪಿಡುಗು ಹೆಚ್ಚಾಗಿರುವ ಎಲ್ಲ ರಾಷ್ಟ್ರಗಳಲ್ಲೂ ಸೋಂಕು ಹರಡುವಿಕೆ ತಡೆಗಟ್ಟಲು ಲಾಕ್ಡೌನ್ ಘೋಷಿಸಲಾಗಿದೆ. ಸ್ವಿಟ್ಜರ್ಲೆಂಡ್ ಕೂಡ ಇದಕ್ಕೆ ಹೊರತಾಗಿಲ್ಲ.
ಕರೊನಾ ವೈರಸ್ ಸೋಂಕಿನ ಹಾವಳಿ ಹಿನ್ನೆಲೆಯಲ್ಲಿ ಟೆನಿಸ್, ಕ್ರಿಕೆಟ್ ಸೇರಿ ಬಹುತೇಕ ಕ್ರೀಡೆಗಳ ಅಂತಾರಾಷ್ಟ್ರೀಯ ಟೂರ್ನಿಗಳು ಮುಂದೂಡಲ್ಪಟ್ಟಿವೆ. ಇದರಿಂದ ಆಟಗಾರರಿಗೆ ಅಗತ್ಯವಾಗಿದ್ದ ವಿಶ್ರಾಂತಿ ದೊರೆತಂತಾಗಿದೆ. ಆದರೂ ಕ್ರೀಡಾ ತಾರೆಗಳು ತಮ್ಮ ಫಿಟ್ನೆಸ್ ಕಾಯ್ದುಕೊಳ್ಳಲು ತಮ್ಮ ಮನೆಯಂಗಳದಲ್ಲೇ ಅಭ್ಯಾಸ ಮಾಡುವುದು, ನಿಯಮಿತ ವ್ಯಾಯಾಮ ಮಾಡುವುದನ್ನು ಮುಂದುವರಿಸಿದ್ದಾರೆ. ಹೀಗೆ ಮಾಡುತ್ತಿರುವವರಲ್ಲಿ ಸ್ವಿಸ್ ದೊರೆ ಖ್ಯಾತಿಯ ಟೆನಿಸ್ನ ದಿಗ್ಗಜ ಆಟಗಾರ ರೋಜರ್ ಫೆಡರರ್ ಕೂಡ ಒಬ್ಬರಾಗಿದ್ದಾರೆ.
ತಮ್ಮ ಮನೆಯ ಅಂಗಳದಲ್ಲೇ ಟೆನಿಸ್ ಅಭ್ಯಾಸ ಮಾಡುತ್ತಿರುವ ಅವರು ಟ್ರಿಕ್ ಶಾಟ್ಗಳಲ್ಲಿ ಪಾರಮ್ಯ ಸಾಧಿಸಲು ಯತ್ನಿಸುತ್ತಿದ್ದಾರೆ. ಹಿಮ ಬೀಳುತ್ತಿದ್ದರೂ ತಾವು ಟ್ರಿಕ್ ಶಾಟ್ ಅಭ್ಯಾಸ ನಡೆಸುತ್ತಿರುವ ಚಿತ್ರವನ್ನು ಟ್ವೀಟ್ ಮಾಡಿರುವ ಅವರು, ಟ್ರಿಕ್ ಶಾಟ್ಗಳು ಮರೆತು ಹೋಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಯತ್ನಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.