

ನವದೆಹಲಿ: ರಾಷ್ಟ್ರಾದ್ಯಂತ ಲಾಕ್ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ನಾವೆಲ್ಲರೂ ಮನೆಯೊಳಗೆ ಬಂದಿಗಳಾಗಿ, ಸುರಕ್ಷಿತವಾಗಿದ್ದರೆ, ತಮ್ಮ ಹಾಗೂ ತಮ್ಮ ಕುಟುಂಬದವರ ಸುರಕ್ಷತೆಯನ್ನು ಲೆಕ್ಕಿಸದ ವೈದ್ಯರು ನಿರಂತರವಾಗಿ ಕರೊನಾ ಪೀಡಿತರ ಸೇವೆಯಲ್ಲಿ ತೊಡಗಿದ್ದಾರೆ. ಬಿಡುವಾದಾಗ, ಕುಟುಂಬಸ್ಥರನ್ನು ನೋಡಬೇಕೆಂದರೂ ಅವರನ್ನು ಕರೊನಾ ವೈರಸ್ ಸೋಂಕಿನ ಭೀತಿ ಬಿಟ್ಟುಬಿಡದಂತೆ ಕಾಡುತ್ತಿದೆ. ಹೀಗಾಗಿ ಹಲವು ವೈದ್ಯರು ಮನೆಗೆ ತೆರಳದೆ, ಸಿಕ್ಕ ಅವಕಾಶದಲ್ಲಿ ಸ್ವಲ್ಪ ವಿಶ್ರಾಂತಿ ಪಡೆದು, ಕರ್ತವ್ಯಕ್ಕೆ ಮರಳುತ್ತಿದ್ದಾರೆ.
ದೆಹಲಿಯ ಆಸ್ಪತ್ರೆಯೊಂದರಲ್ಲಿ ಕರೊನಾ ವಾರಿಯರ್ ಆಗಿ ಕೋವಿಡ್ 19 ಪೀಡಿತರ ಸೇವೆಯಲ್ಲಿ ತೊಡಗಿದ್ದ ವೈದ್ಯರೊಬ್ಬರಿಗೆ ಕುಟುಂಬಸ್ಥರನ್ನು ಭೇಟಿಯಾಗಬೇಕು ಎನಿಸಿತು. ಮನೆಗೆ ಹೋಗಿ ಪತ್ನಿ, ಮಕ್ಕಳನ್ನು ನೋಡಿ ಆರಾಮವಾಗಿ ಕುಳಿತು ಚಹಾ ಕುಡಿಯಬೇಕು ಎಂಬ ಬಯಕೆ ಮನದಲ್ಲಿ ಹುಟ್ಟಿತು.
ತಡಮಾಡದ ಅವರು ಮಂಗಳವಾರ ಆಸ್ಪತ್ರೆಯಿಂದ ಮನೆಗೆ ತೆರಳಿದರು. ಮನೆಯ ಗೇಟ್ ಬಳಿ ಬರುತ್ತಲೇ ಕರೊನಾ ವೈರಸ್ ಸೋಂಕಿನ ಭೀತಿ ಆವರಿಸಿತು. ತಕ್ಷಣವೇ ಗೇಟ್ನಿಂದ ಅನತಿ ದೂರದಲ್ಲಿ ಕುಳಿತ ಅವರು, ಪತ್ನಿಗೆ ಹೇಳಿ ಚಹಾ ಮಾಡಿಸಿಕೊಂಡು ಕುಡಿದರು. ದೂರದಿಂದಲೇ ಮಕ್ಕಳೊಂದಿಗೆ ಮಾತನಾಡಿ ನಿರಾಳರಾಗಿ ಮತ್ತೆ ಕರ್ತವ್ಯಕ್ಕೆ ಮರಳಿದರು.