ಟೀಮ್​ ಇಂಡಿಯಾದಲ್ಲಿ ಮಹತ್ವದ ಬದಲಾವಣೆ: ವಿರಾಟ್​ ಕೊಹ್ಲಿಗೆ ಕೊಕ್ ಕೊಡಲು ನಿರ್ಧಾರ

Team India
Published on

ನ್ಯೂಯಾರ್ಕ್: ಟಿ20 ವಿಶ್ವಕಪ್​ ಭಾಗವಾಗಿ ಟೀಮ್ ಇಂಡಿಯಾ ನಾಳೆ (ಜೂನ್ 15 ಗ್ರೂಪ್​ ಹಂತದ ಕೊನೆಯ ಪಂದ್ಯವನ್ನು ಆಡಲಿದೆ. ರೋಹಿತ್ ಸೇನೆಯು ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಮೈದಾನದಲ್ಲಿ ಕ್ರಿಕೆಟ್​ ಶಿಶು ಕೆನಡಾವನ್ನು ಎದುರಿಸಲಿದೆ.

ಈ ಪಂದ್ಯದಲ್ಲಿ ಟೀಮ್​ ಇಂಡಿಯಾ ಹಲವು ಬದಲಾವಣೆಗಳೊಂದಿಗೆ ಕಣಕ್ಕೆ ಇಳಿಯಲಿದೆ. ಈಗಾಗಲೇ ಸತತ ಮೂರು ಗೆಲುವಿನೊಂದಿಗೆ ಸೂಪರ್ 8ಕ್ಕೆ ಅರ್ಹತೆ ಪಡೆದಿರುವ ಭಾರತ, ಕೆನಡಾ ವಿರುದ್ಧದ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿದೆ. ಈ ಪಂದ್ಯದ ಫಲಿತಾಂಶವು ಯಾವುದೇ ಪರಿಣಾಮ ಬೀರದ ಕಾರಣ, ರೋಹಿತ್ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಮತ್ತು ಸೂಪರ್ 8ಕ್ಕಿಂತ ಮೊದಲು ಕೆಲವು ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡಲು ಬಯಸಿದ್ದಾರೆ ಎಂದು ವರದಿಯಾಗಿದೆ.

ಗ್ರೂಪ್-ಎ ನಿಂದ ಮೂರು ಗೆಲುವುಗಳೊಂದಿಗೆ ಟೀಮ್ ಇಂಡಿಯಾ ಸೂಪರ್ 8ಗೆ ಅರ್ಹತೆ ಪಡೆದುಕೊಂಡಿದೆ. ಉಳಿದ ಒಂದು ಸ್ಥಾನಕ್ಕಾಗಿ ಅಮೆರಿಕ ಮತ್ತು ಪಾಕಿಸ್ತಾನ ಪೈಪೋಟಿ ನಡೆಸುತ್ತಿವೆ. ಯುಎಸ್​ಎ ಕೂಡ ಇದರಲ್ಲಿ ಹೆಚ್ಚಿನ ಅವಕಾಶಗಳನ್ನು ಹೊಂದಿದೆ. ಅದೇನೇ ಇರಲಿ ಸೂಪರ್ 8ರಲ್ಲಿ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಬಾಂಗ್ಲಾದೇಶದೊಂದಿಗೆ ಕಣಕ್ಕಿಳಿಯುವ ಅವಕಾಶ ಟೀಮ್​ ಇಂಡಿಯಾಗೆ ಇದೆ.

ಜೂ.24ರಂದು ಆಸೀಸ್ ವಿರುದ್ಧ ಪಂದ್ಯ ನಿರ್ಧಾರವಾಗಿದೆ. ಈ ಮಹತ್ವದ ಪಂದ್ಯಗಳಿಗೂ ಮುನ್ನ ತಂಡದಲ್ಲಿನ ಕೆಲ ನ್ಯೂನತೆಗಳನ್ನು ಸರಿಪಡಿಸಲು ಟೀಮ್​ ಇಂಡಿಯಾ ಮುಂದಾಗಿದೆ. ಈ ಟೂರ್ನಿಯಲ್ಲಿ ಇದುವರೆಗೂ ತಂಡವನ್ನು ಕಾಡಿದ ಸಮಸ್ಯೆ ಎಂದರೆ ಆರಂಭಿಕ ಜೋಡಿ. ರೋಹಿತ್ ಶರ್ಮ ಜೊತೆ ಆರಂಭಿಕರಾಗಿ ಆಡುತ್ತಿರುವ ಕೊಹ್ಲಿ ಮೂರು ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಇದರೊಂದಿಗೆ ಕೊಹ್ಲಿಗೆ ಕೊಂಚ ವಿಶ್ರಾಂತಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕೊಹ್ಲಿ ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ ಅಥವಾ ಸಂಜು ಸ್ಯಾಮ್ಸನ್ ಬರುವ ಸಾಧ್ಯತೆ ಇದೆಯಂತೆ. ಮತ್ತೊಬ್ಬ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲು ತಂಡದ ಆಡಳಿತ ಮಂಡಳಿ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಸೂಪರ್ 8 ರಲ್ಲಿ ಹೆಚ್ಚು ಉತ್ಸಾಹದಿಂದ ಬೌಲಿಂಗ್ ಮಾಡಲು ಬುಮ್ರಾಗೆ ಸ್ವಲ್ಪ ವಿಶ್ರಾಂತಿ ನೀಡಿದರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇನ್ನು ಕುಲದೀಪ್ ಯಾದವ್ ಮತ್ತು ಯುಜುವೇಂದ್ರ ಚಹಾಲ್ ತಂಡದಲ್ಲಿ ಸೂಪರ್ 8ರ ಹಂತಕ್ಕೆ ಸ್ಥಾನ ಪಡೆಯಲು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಏಕೆಂದರೆ, ಎಲ್ಲ ಸೂಪರ್ 8 ಪಂದ್ಯಗಳು ವೆಸ್ಟ್ ಇಂಡೀಸ್​ನಲ್ಲಿ ನಡೆಯಲಿವೆ. ಅಲ್ಲಿನ ಪಿಚ್‌ಗಳು ಸ್ಪಿನ್‌ಗೆ ಉತ್ತಮವಾಗಿವೆ. ಹಾರ್ದಿಕ್ ಪಾಂಡ್ಯಗೂ ಕೂಡ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net