

ಬೆಂಗಳೂರು: ಇಡೀ ರಾಜ್ಯದಲ್ಲಿ ಇದೀಗ ನಟ ದರ್ಶನ್ರದ್ದೇ ಚರ್ಚೆ. ಯಾವ ನ್ಯೂಸ್ ಚಾನೆಲ್ ಹಾಕಿದ್ರೂ ದರ್ಶನ್ರದ್ದೇ ಸುದ್ದಿ. ಜನಗಳ ಬಾಯಲ್ಲೂ ದರ್ಶನ್ರದ್ದೇ ಮಾತು. ಅದಕ್ಕೆ ಕಾರಣ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನವಾಗಿರುವುದು. ನಟಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ರೇಣುಕಾಸ್ವಾಮಿಯ ಕೊಲೆಯಲ್ಲಿ ದರ್ಶನ್ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿದೆ. ದರ್ಶನ್ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್ರನ್ನು ಬಂಧಿಸಲಾಗಿದೆ. ಅಲ್ಲದೆ, ಒಳಸಂಚು ನಡೆಸಿದ ಆರೋಪದ ಮೇಲೆ ಪವಿತ್ರಾ ಗೌಡಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯ 6 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಇದರ ನಡುವೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಂಗತಿಗಳು ಬಯಲಿಗೆ ಬರುತ್ತಿವೆ.
ತಾಜಾ ಸಂಗತಿ ಏನೆಂದರೆ, ಈ ಪ್ರಕರಣದಿಂದ ದರ್ಶನ್ರನ್ನು ಬಚಾವ್ ಮಾಡಲು ಕೆಲ ಪ್ರಭಾವಿಗಳು ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಸಚಿವರು ಸಹ ಸೇರಿದ್ದಾರೆ ಎನ್ನಲಾಗಿದೆ. ಸರ್ಕಾರದ ಮೇಲೆಯೇ ತುಂಬಾ ಒತ್ತಡ ಹೇರಲಾಗುತ್ತಿದೆ ಎಂಬ ಚರ್ಚೆ ಪೊಲೀಸ್ ವಲಯದಲ್ಲೇ ಕೇಳಿಬರುತ್ತಿದೆ. ತನಿಖೆಯ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಪರಮೇಶ್ವರ್, ಯಾರೊಬ್ಬರು ಕೂಡ ನಮ್ಮ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡಿಲ್ಲ ಮತ್ತು ಕಾನೂನು ತನ್ನದೇಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ದರ್ಶನ್ರನ್ನು ಮಂಗಳವಾರ ಮುಂಜಾನೆ ಮೈಸೂರಿನ ಹೋಟೆಲ್ನಲ್ಲಿ ಪೊಲೀಸರು ವಶಕ್ಕೆ ಪಡೆಯುವ ಮುನ್ನವೇ ದರ್ಶನ್ ಆಪ್ತರಿಗೆ ಈ ವಿಚಾರವನ್ನು ಮೊದಲು ತಿಳಿಸಿದ ವ್ಯಕ್ತಿಯೇ ಓರ್ವ ಸಚಿವ ಎಂದು ತಿಳಿದುಬಂದಿದೆ. ತನ್ನ ಸೆಲೆಬ್ರಿಟಿ ಫ್ರೆಂಡ್ ದರ್ಶನ್ರನ್ನು ಬಂಧಿಸುತ್ತಾರೆಂದು ತಿಳಿದು ಆ ಸಚಿವ ಪೊಲೀಸ್ ಅಧಿಕಾರಿಗೆ ನಿರಂತರವಾಗಿ ಕರೆ ಮಾಡಿದ್ದಾರೆ. ಅಲ್ಲದೆ, ಗೃಹ ಸಚಿವ ಪರಮೇಶ್ವರ್ ಮತ್ತು ಸಿಎಂ ಸಿದ್ದರಾಮಯ್ಯ ಕಚೇರಿಗೂ ಸಹ ಕರೆ ಮಾಡಿ, ದರ್ಶನ್ರನ್ನು ರಕ್ಷಣೆ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ.
ತನ್ನ ಫೋನ್ ಕರೆಗಳಿಗೆ ಯಾವುದೇ ಪ್ರತಿಕ್ರಿಯೆ ಸಿಗದೇ ಇದ್ದಾಗ ಆ ಸಚಿವ ತಕ್ಷಣ ಸದಾಶಿವನಗರದಲ್ಲಿರುವ ಡಾ. ಜಿ. ಪರಮೇಶ್ವರ್ ಅವರ ಮನೆಗೆ ತೆರಳಿದ್ದಾರೆ. ಇದೇ ಸಂದರ್ಭದಲ್ಲಿ, ದರ್ಶನ್ ಆಪ್ತರಾಗಿರುವ ಬಿಜೆಪಿ ಶಾಸಕರೊಬ್ಬರು ಪೊಲೀಸ್ ಅಧಿಕಾರಿಗಳಿಗೆ ನಿರಂತರವಾಗಿ ಕರೆ ಮಾಡಿ, ಪ್ರಕರಣವನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಮಾಡಿದ್ದಾರೆ.
ಈ ಪ್ರಕರಣದಲ್ಲಿ ಮಹತ್ವದ ಸಾಕ್ಷ್ಯಾಧಾರಗಳು ಲಭ್ಯವಾಗಿದ್ದು, ಆರಂಭದಲ್ಲಿ ದರ್ಶನ್ ಅವರನ್ನು ಎ1 ಆರೋಪಿಯನ್ನಾಗಿ ಮಾಡಿದ್ದರು. ಆದರೆ, ರಾಜಕಾರಣಿಗಳ ಪ್ರಭಾವದಿಂದ ದರ್ಶನ್ ಬದಲು ಅವರ ಗೆಳತಿ ಪವಿತ್ರಾ ಗೌಡರನ್ನು ಎ1 ಆರೋಪಿಯನ್ನಾಗಿ ಮಾಡಿ ದರ್ಶನ್ರನ್ನು ಎ2 ಆರೋಪಿಯನ್ನಾಗಿ ಬದಲಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಟ್ರಕ್ಗೆ ತಲೆ ಡಿಕ್ಕಿ
ಕೊಲೆಯಾದ ರೇಣುಕಸ್ವಾಮಿಗೆ ಸುಮಾರು 4 ಗಂಟೆಗಳ ಕಾಲ ಕಿರುಕುಳ ನೀಡಲಾಗಿದೆ. ದೇಹದಲ್ಲಿ 15 ಗಾಯಗಳಾಗಿದ್ದು, ಶಾಕ್ ಮತ್ತು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ವರದಿಯಲ್ಲಿ ಬಹಿರಂಗವಾಗಿದೆ. ಆಂತರಿಕ ರಕ್ತಸ್ರಾವದಿಂದ ಅಸುನೀಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ರೇಣುಕಸ್ವಾಮಿಯ ತಲೆಯನ್ನು ಅನೇಕ ಬಾರಿ ಟ್ರಕ್ಗೆ ಗುದ್ದಿದ್ದಾರೆಂದು ತಿಳಿದುಬಂದಿದೆ.
ಪ್ರಭಾವಕ್ಕೆ ಸೊಪ್ಪು ಹಾಕದ ಖಡಕ್ ಅಧಿಕಾರಿಗಳು
ಇಡೀ ಪ್ರಕರಣವನ್ನು ಆರಂಭದಲ್ಲೇ ಮುಚ್ಚಿಡುವ ಪ್ರಯತ್ನ ನಡೆದಿತ್ತು. ದರ್ಶನ್ರನ್ನು ಹೇಗಾದರೂ ಮಾಡಿ ರಕ್ಷಣೆ ಮಾಡಲೇಬೇಕೆಂದು ಕಾಣದ ಕೈಗಳು ತಮ್ಮ ಕೈಚಳಕ ತೋರಿದ್ದವು. ಆದರೆ, ಡಿಸಿಪಿ ಎಸ್. ಗಿರೀಶ್ ಮತ್ತು ಎಸಿಪಿ ಚಂದನ್ ಕುಮಾರ್ ಇಡೀ ಪ್ರಕರಣವನ್ನು ಮುನ್ನೆಲೆಗೆ ತಂದರು. ಈ ಅಧಿಕಾರಿಗಳ ತನಿಖೆಯಿಂದಲೇ ಹುದುಗಿ ಹೋಗಿದ್ದ ಸತ್ಯ ಬಯಲಿಗೆ ಬಂದಿದೆ ಎಂದು ತಿಳಿದುಬಂದಿದೆ. ಇಲ್ಲವಾದಲ್ಲಿ ಈ ಪ್ರಕರಣ ಮುಚ್ಚಿ ಹೋಗುತ್ತಿತ್ತು ಎಂದು ಹೇಳಲಾಗುತ್ತಿದೆ.