

ಸಿಡ್ನಿ: ನಾಯಕ ರೋಹಿತ್ ಶರ್ಮ (53), ವಿರಾಟ್ ಕೊಹ್ಲಿ (62*) ಹಾಗೂ ಸೂರ್ಯ ಕುಮಾರ್ ಯಾದವ್ (51*) ಅಮೋಘ ಬ್ಯಾಟಿಂಗ್ ನೆರವಿನಿಂದಾಗಿ ಟೀಮ್ ಇಂಡಿಯಾ, ಎದುರಾಳಿ ನೆದರ್ಲೆಂಡ್ ತಂಡಕ್ಕೆ 180 ರನ್ಗಳ ಬೃಹತ್ ಗುರಿಯನ್ನು ನೀಡಿದೆ.
ಇಂದು (ಅ.27) ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ನಿಗದಿತ 20 ಓವರ್ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 179 ರನ್ಗಳನ್ನು ಕಲೆಹಾಕುವ ಮೂಲಕ ಎದುರಾಳಿ ನೆದರ್ಲೆಂಡ್ ತಂಡಕ್ಕೆ 180 ರನ್ಗಳ ಗುರಿ ನೀಡಿದೆ.
ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಕೆ.ಎಲ್. ರಾಹುಲ್ ಕೇವಲ 9 ರನ್ ಕಲೆಹಾಕುವ ಮೂಲಕ ಆರಂಭಿಕ ಆಘಾತ ನೀಡಿದರು. ನಂತರ ನಾಯಕ ರೋಹಿತ್ ಶರ್ಮ ಜೊತೆಗೂಡಿದ ವಿರಾಟ್ ಕೊಹ್ಲಿ ಉತ್ತಮ ಜೊತೆಯಾಟ ಆಡಿದರು. ತಂಡದ ಮೊತ್ತ 84 ರನ್ ಆಗಿದ್ದಾಗ ಕೇವಲ 39 ಎಸೆತಗಳಲ್ಲಿ 53 ರನ್ ಗಳಿಸಿ ರೋಹಿತ್ ಔಟಾದರು.
ಇದಾದ ಬಳಿಕ ಕೊಹ್ಲಿ ಜೊತೆಗೂಡಿದ ಸೂರ್ಯಕುಮಾರ್ ಯಾದವ್ ಮುರಿಯದ ಜೊತೆಯಾಟವಾಡುವ ಮೂಲಕ ಬೃಹತ್ ರನ್ ಕಲೆಹಾಕಿದರು. ಕಳೆದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಬಿರುಸಿನ ಬ್ಯಾಟಿಂಗ್ ಮಾಡಿ ಗೆಲುವು ತಂದುಕೊಟ್ಟಿರುವ ಕೊಹ್ಲಿ ಈ ಪಂದ್ಯದಲ್ಲೂ ಅಬ್ಬರಿಸಿ ಬೊಬ್ಬಿರಿದರು. ಕೇವಲ 44 ಎಸೆತಗಳಲ್ಲಿ 3 ಬೌಡಂರಿ ಮತ್ತು ಎರಡು ಸಿಕ್ಸರ್ ನೆರವಿನಿಂದ 62 ರನ್ ಕಲೆ ಹಾಕಿದರೆ, ಕೊಹ್ಲಿಗೆ ಸಾಥ್ ನೀಡಿದ ಸೂರ್ಯಕುಮಾರ್ ಯಾದವ್ ಕೇವಲ 25 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 51 ರನ್ ಗಳಿಸಿ, ಅಜೇಯರಾಗಿ ಉಳಿದರು.
ನೆದರ್ಲೆಂಡ್ ಪರ ಫ್ರೆಡ್ ಕ್ಲಾಸ್ಸೆನ್ ಹಾಗೂ ಪಾಲ್ ವ್ಯಾನ್ ಮೀಕೆರೆನ್ ತಲಾ ಒಂದೊಂದು ವಿಕೆಟ್ ಪಡೆದರು. (ಏಜೆನ್ಸೀಸ್)